ವಾಣಿಜ್ಯ

ಸಗಟು ಹಣದುಬ್ಬರ ಶೇ. 3.1ಕ್ಕೆ ಏರಿಕೆ: ಈರುಳ್ಳಿ, ಆಲೂಗಡ್ಡೆ ಇನ್ನಿತರ ಆಹಾರ ವಸ್ತುಗಳ ಬೆಲೆ ಏರಿಕೆ ಪರಿಣಾಮ

ನವದೆಹಲಿ: ಈರುಳ್ಳಿ ಹಾಗೂ ಆಲೂಗಡ್ಡೆಯಂಥ ಆಹಾರ ವಸ್ತುಗಳ ಬೆಲೆಗಳ ತೀವ್ರ ಏರಿಕೆಯಿಂದಾಗಿ ಸಗಟು ಹಣದುಬ್ಬರ ಜನವರಿಯಲ್ಲಿ ಶೇಕಡಾ 3.1ಕ್ಕೆ ಹೆಚ್ಚಳವಾಗಿದೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಅದು ಶೇ. 2.59 ಇತ್ತು. ಮಾಸಿಕ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯೂಪಿಐ) ಆಧರಿತ ಹಣದುಬ್ಬರ 2019ರ ಜನವರಿಯಲ್ಲಿ ಶೇಕಡಾ 2.76 ಇತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

ಬೆಲೆ ಏರಿಕೆಯ ದರ ಡಿಸೆಂಬರ್​ನಲ್ಲಿ ಶೇ. 2.41 ಇದ್ದದ್ದು ಜನವರಿಯಲ್ಲಿ ಶೇಕಡಾ 11.51 ತಲುಪಿದೆ. ಆಹಾರೇತರ ವಸ್ತುಗಳ ವಸ್ತುಗಳ ಬೆಲೆ ಸುಮಾರು ಮೂರು ಪಟ್ಟು ಹೆಚ್ಚಳವಾಗಿದೆ. ಡಿಸೆಂಬರ್​ನಲ್ಲಿ ಶೇ. 2.32 ಇದ್ದದ್ದು ಜನವರಿಯಲ್ಲಿ ಶೇ. 7.8 ಆಗಿದೆ. ಜನವರಿಯಲ್ಲಿ ರಫ್ತು ಪ್ರಮಾಣ ಶೇ. 1.66ರಷ್ಟು ಇಳಿಕೆಯಾಗಿದೆ.

ಆಹಾರ ಸಾಮಗ್ರಿಗಳ ಪೈಕಿ ಈರುಳ್ಳಿ ಬೆಲೆಯಲ್ಲಿ ಶೇಕಡಾ 293 ಏರಿಕೆಯಾಗಿದ್ದು ತರಕಾರಿ ಬೆಲೆ ಶೇ. 52.71ರಷ್ಟು ಏರಿಕೆಯಾಗಲು ಪ್ರಮುಖ ಕಾರಣವಾಗಿದೆ. ಆಲೂಗಡ್ಡೆ ಬೆಲೆ ಶೇ. 37.34ರಷ್ಟು ಏರಿಕೆಯಾಗಿತ್ತು. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರದ ಚಿಲ್ಲರೆ ಹಣದುಬ್ಬರ ಆರು ವರ್ಷಗಳಲ್ಲೇ ಅತಿ ಹೆಚ್ಚು, ಅಂದರೆ ಶೇಕಡಾ 7.59 ತಲುಪಿದೆ. -ಏಜೆನ್ಸೀಸ್

ಷೇರುಪೇಟೆ ತಲ್ಲಣ

ಸಗಟು ಹಣದುಬ್ಬರ ಪ್ರಮಾಣದಲ್ಲಿ ಏರಿಕೆ ಮತ್ತು ಬಾಕಿ ಪಾವತಿಸಿದ ಟೆಲಿಕಾಂ ಕಂಪನಿಗಳ ವಿರುದ್ಧ ಸುಪ್ರೀಂಕೋರ್ಟ್ ಆಕ್ರೋಶ ವ್ಯಕ್ತಪಡಿಸಿದ ಕಾರಣ ಷೇರುಪೇಟೆ ಶುಕ್ರವಾರ ತಲ್ಲಣಿಸಿದೆ. ತತ್ಪರಿಣಾಮ ಸೆನ್ಸೆಕ್ಸ್​ನಲ್ಲಿ 202.5 (ಶೇ.0.49) ಪಾಯಿಂಟ್ ಕುಸಿತವಾಗಿ 41,257.74ಕ್ಕೆ ದಿನದ ವಹಿವಾಟು ಅಂತ್ಯಕಂಡಿದೆ. ರಾಷ್ಟ್ರೀಯ ಷೇರುಪೇಟೆ (ನಿಫ್ಟಿ)ಯಲ್ಲಿ 61.20 (ಶೇ.0.50) ಅಂಶ ಹಿನ್ನಡೆಯಾಗಿ, 12,113.50ಕ್ಕೆ ವಹಿವಾಟು ಮುಕ್ತಾಯವಾಗಿದೆ.