ವಾಣಿಜ್ಯ

ಜನತೆಗೆ ಹಣದುಬ್ಬರದ ಡಬಲ್ ಶಾಕ್! ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ವರದಿ

ನವದೆಹಲಿ: ಚಿಲ್ಲರೆ ವ್ಯಾಪಾರ ಹಣದುಬ್ಬರ ಏರಿಕೆ ಬೆನ್ನಲ್ಲೇ ಸಗಟು ದರ ಆಧಾರಿತ (ಡಬ್ಲ್ಯೂಪಿಐ) ಹಣದುಬ್ಬರದಲ್ಲೂ ಭಾರಿ ಹೆಚ್ಚಳವಾಗಿ ದೇಶದ ಜನತೆಗೆ ಡಬಲ್ ಶಾಕ್ ನೀಡಿದೆ.

ಕಳೆದ ನವೆಂಬರ್​ನಲ್ಲಿ ಶೇ. 0.58 ಇದ್ದ ಸಗಟು ಹಣದುಬ್ಬರ ಡಿಸೆಂಬರ್​ನಲ್ಲಿ ಶೇ. 2.59ಕ್ಕೆ ಏರಿಕೆ ಕಂಡು ಏಳು ತಿಂಗಳ ಹಿಂದಿನ ಮಟ್ಟ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶ ತಿಳಿಸಿದೆ. ಆದರೆ, 2018ರ ಡಿಸೆಂಬರ್​ನಲ್ಲಿ ಸಗಟು ಹಣದುಬ್ಬರ ಶೇ. 3.46ಕ್ಕೆ ಏರಿಕೆಯಾಗಿತ್ತು.

ಡಿಸೆಂಬರ್​ನಲ್ಲಿ ಈರುಳ್ಳಿ, ಆಲೂಗಡ್ಡೆ ಸೇರಿ ಇನ್ನಿತರ ತರಕಾರಿ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದ್ದರಿಂದ ಸಗಟು ಹಣದುಬ್ಬರದಲ್ಲೂ ಏರಿಕೆ ಕಂಡುಬಂದಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆ ಪ್ರಮಾಣವೂ ಡಿಸೆಂಬರ್​ನಲ್ಲಿ ಶೇ.13.24ಕ್ಕೆ ಏರಿಕೆಯಾಗಿದ್ದು, ನವೆಂಬರ್​ನಲ್ಲಿ ಇದರ ಪ್ರಮಾಣ ಶೇ.11.08ರಷ್ಟಿತ್ತು. ಆಹಾರೇತರ ಪದಾರ್ಥಗಳಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದ್ದು, ನವೆಂಬರ್​ನಲ್ಲಿ ಶೇ.1.93 ಇದ್ದ ಪ್ರಮಾಣ, ಡಿಸೆಂಬರ್​ಗೆ ಶೇ.7.72ಕ್ಕೆ ತಲುಪಿದೆ. ಸರ್ಕಾರ ಸೋಮವಾರ ಬಿಡುಗಡೆ ಮಾಡಿದ್ದ ಅಂಕಿಅಂಶಗಳ ಪ್ರಕಾರ ಕಳೆದ ಡಿಸೆಂಬರ್​ನಲ್ಲಿ ಚಿಲ್ಲರೆ ಹಣದುಬ್ಬರದ ಪ್ರಮಾಣ ಶೇ. 7.35ಕ್ಕೆ ಏರಿಕೆ ಆಗಿದೆ. ಈ ಮೂಲಕ ಐದು ವರ್ಷದ ಹಿಂದಿನ ಸ್ಥಿತಿಗೆ ಹಣದುಬ್ಬರ ತಲುಪಿದೆ.

2014ರ ಜುಲೈನಲ್ಲಿ ಇದರ ಪ್ರಮಾಣ ಶೇ. 7.39 ಇತ್ತು. ಒಟ್ಟಾರೆ ಆಹಾರ ಹಣದುಬ್ಬರ ಡಿಸೆಂಬರ್​ನಲ್ಲಿ ಶೇ. 14.12ಕ್ಕೆ ಏರಿಕೆ ಆಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ತನ್ನ ವರದಿಯಲ್ಲಿ ಹೇಳಿದೆ.

ದರ ಏರಿಕೆಗೆ ಕಡಿವಾಣ ಹಾಕಿ

ಚಿಲ್ಲರೆ ಹಣದುಬ್ಬರದ ಪ್ರಮಾಣ ಜನವರಿಯಲ್ಲಿ ಶೇ. 8ಕ್ಕೆ ಏರುವ ಸಾಧ್ಯತೆಯಿದ್ದು, ಮುಂದಿನ ತಿಂಗಳು 6ಕ್ಕೆ ನಡೆಯುವ ವಿತ್ತೀಯ ನೀತಿ ಪರಿಶೀಲನೆಯಲ್ಲಿ ದರ ಏರಿಕೆಗೆ ಕಡಿವಾಣ ಹಾಕುವಂತೆ ಭಾರತೀಯ ರಿಸರ್ವ್ ಬ್ಯಾಂಕನ್ನು ಸರ್ಕಾರ ಒತ್ತಾಯಿಸಬಹುದು ಎಂದು ವರದಿಯೊಂದು ತಿಳಿಸಿದೆ. ಕಳೆದ ಡಿಸೆಂಬರ್​ನಲ್ಲಿ ನಡೆದ ದ್ವೈಮಾಸಿಕ ಸಭೆಯಲ್ಲಿ ರಿಪೊ ದರದ ಯಥಾಸ್ಥಿತಿಯನ್ನು ಆರ್​ಬಿಐ ಕಾಯ್ದುಕೊಂಡಿತು. ಆದರೀಗ ಚಿಲ್ಲರೆ ಹಣದುಬ್ಬರವು ಶೇಕಡಾ 7.35ಕ್ಕೆ ಏರಿರುವುದರಿಂದ ಆರ್​ಬಿಐ ಮುಂದಿನ ವಿತ್ತೀಯ ನೀತಿಯಲ್ಲಿ ದರ ಹಿಡಿದಿಡಬಹುದು ಎಂದು ತಿಳಿದುಬಂದಿದೆ.

  1. ಶೇ. 2.59 ಡಿಸೆಂಬರ್​ನಲ್ಲಿ ಸಗಟು ಹಣದುಬ್ಬರ ಏರಿಕೆ
  2. ಶೇ. 0.58 ನವೆಂಬರ್​ನಲ್ಲಿ ಸಗಟು ಹಣದುಬ್ಬರದ ಪ್ರಮಾಣ
  3. ಶೇ. 3.46 2018ರ ಡಿಸೆಂಬರ್​ನಲ್ಲಿದ್ದ ಸಗಟು ಹಣದುಬ್ಬರ