ಬೆಂಗಳೂರು: ಕಳೆದ ತಿಂಗಳು ಏರಿಕೆಯಾಗಿದ್ದ ತರಕಾರಿ ಬೆಲೆ ದರವೀಗ ಭಾರಿ ಕುಸಿತ ಕಂಡಿದೆ. ಶಿವರಾತ್ರಿ ಹಬ್ಬ ಕಳೆದ ಬೆನ್ನಲ್ಲೇ ಹೂವು, ಹಣ್ಣುಗಳ ಬೆಲೆ ಕಡಿಮೆಯಾಗುವುದು ಸಾಮಾನ್ಯ. ಆದರೆ, ಈ ಬಾರಿ ಹೂವು ಹಣ್ಣಿಗಿಂತ ತರಕಾರಿ ದರ ದಿಢೀರ್ ನೆಲಕಚ್ಚಿದೆ. ಮಾರುಕಟ್ಟೆಯಲ್ಲಿ 100 ರೂಪಾಯಿಗೆ 5 ಅಥವಾ 6 ಕೆ.ಜಿ. ಬಗೆಬಗೆಯ ತರಕಾರಿ ಮಾರಾಟವಾಗುತ್ತಿದೆ.
ಕಳೆದ ತಿಂಗಳು ದುಬಾರಿಯಾಗಿದ್ದ ಬೀನ್ಸ್, ಟೊಮ್ಯಾಟೊ, ಮೂಲಂಗಿ, ಬದನೆಕಾಯಿ, ಬೆಂಡೆಕಾಯಿ, ಗೋರಿಕಾಯಿ, ಹಸಿ ಮೆಣಸಿನಕಾಯಿ, ಕ್ಯಾರೆಟ್ ದರ ಏಕಾಏಕಿ ಅರ್ಧದಷ್ಟು ಕಡಿಮೆಯಾಗಿದೆ. ಇನ್ನು ಕೊತ್ತಂಬರಿ, ಮೆಂತ್ಯೆ, ಪುದೀನ ಸೊಪ್ಪುಗಳು ಪ್ರತಿ ಕಟ್ಟಿಗೆ ತಲಾ 10 ರೂ.ನಂತೆ ಮಾರಾಟವಾಗುತ್ತಿವೆ.
ಹಣ್ಣಿನ ದರ ಹೆಚ್ಚಳ ಸಾಧ್ಯತೆ: ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ರಾಶಿ ರಾಶಿ ಹಣ್ಣುಗಳು ಆವಕವಾಗುತ್ತಿದ್ದು, ಹಬ್ಬದ ವೇಳೆ ಇದ್ದ ದರವೇ ಈಗಲೂ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ, ಬೇಸಿಗೆ ಮುಗಿಯುವಷ್ಟರಲ್ಲಿ ದರ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಕೆ.ಆರ್. ಮಾರುಕಟ್ಟೆಯ ವ್ಯಾಪಾರಿ ಗೋಪಿ ತಿಳಿಸಿದ್ದಾರೆ.