ವಾಣಿಜ್ಯ

ತರಕಾರಿ ಬೆಳೆ ಖುಷಿಯ ಕಳೆ

kumarvrl

ಮೈಬೆವರು ಉಕ್ಕಿದರ ಮನೆ ಮನ ನಕ್ಕೀತ, ತೆನೆ ತೆನೆ ಕೂಡಿ ಹಾಡ್ಯಾವ...... ಎಂಬಂತೆ ಕಷ್ಟಪಟ್ಟು ವ್ಯವಸಾಯ ಮಾಡಿದರೆ ಲಾಭ ಗ್ಯಾರಂಟಿ. ಇದನ್ನರಿತ ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಉಡಬಾಳ ಗ್ರಾಮದ 63 ವರ್ಷ ವಯಸ್ಸಿನ ರೈತ ನಾರಾಯಣರಾವ್ ಭಂಗಿ ತರಹೇವಾರಿ ತರಕಾರಿಗಳನ್ನು ಬೆಳೆದು ಪ್ರತಿ ವರ್ಷ ಸುಮಾರು 5.50 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.

ಅವಿದ್ಯಾವಂತರಾಗಿರುವ ನಾರಾಯಣರಾವ್ 25 ವರ್ಷದಿಂದ ಸಮಾಜ ಸೇವೆ ಮಾಡುತ್ತಿದ್ದರು. ಕಳೆದ 5 ವರ್ಷದ ಹಿಂದೆ ಒಂದು ಎಕರೆಯಲ್ಲಿ ತರಕಾರಿ ಬೆಳೆಯಲು ಪ್ರಾರಂಭಿಸಿದರು. ಮೊದಲನೇ ವರ್ಷ ಎರಡು ಬೆಳೆಯಿಂದ 8-10 ಟನ್ ಟೊಮ್ಯಾಟೋ ಉತ್ಪಾದಿಸಿ 1.20 ಲಕ್ಷ ರೂ. ಆದಾಯ ಪಡೆದಿದ್ದಾರೆ. ಇದರ ಲಾಭದಿಂದಲೇ ಇನ್ನೂ ಆರು ಎಕರೆ ಹೊಲ ಖರೀದಿಸಿ ತರಕಾರಿ ಬೆಳೆಯನ್ನು ಈಗ 5 ಎಕರೆವರೆಗೆ ವಿಸ್ತರಿಸಿದ್ದಾರೆ.

ತರಕಾರಿ ಬೆಳೆಯಲು ಯೋಗ್ಯವಾದಂಥ ಕಪ್ಪು ಭೂಮಿಯಿದೆ. ತೆರೆದ ಬಾವಿಯಿಂದ ನಾಲ್ಕು ದಿನಕ್ಕೊಮ್ಮೆ ಬೆಳೆಗಳಿಗೆ ಹನಿ ನೀರಾವರಿಯಿಂದ ನೀರುಣಿಸುತ್ತಿದ್ದಾರೆೆ. ಬೆಳೆಗಳಿಗೆ ತಿಪ್ಪೆಗೊಬ್ಬರ ಮತ್ತು ರಸಾಯನಿಕ ಗೊಬ್ಬರ ಬಳಸುತ್ತಿದ್ದು, ತರಕಾರಿಗಳಲ್ಲಿ ಕಾಣಿಸಿಕೊಳ್ಳುವ ವಿವಿಧ ರೋಗರುಜಿನಗಳ ಹತೋಟಿಗಾಗಿ ಸಕಾಲಕ್ಕೆ ಔಷಧಿ ಸಿಂಪಡಿಸುತ್ತಿದ್ದಾರೆೆ.

ಇದಕ್ಕೂ ಮೊದಲು ಕಬ್ಬು, ಜೋಳ, ಕಡಲೆ ಮುಂತಾದವನ್ನು ಮಾತ್ರ ಬೆಳೆಯುತ್ತಿದ್ದರು. ಖರ್ಚು ಲಾಭ ಅಷ್ಟಕ್ಕಷ್ಟೇ ಆಗುತ್ತಿತ್ತು. ಇದರಿಂದ ಕುಟುಂಬ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸ ಕಷ್ಟಸಾಧ್ಯ. ಹೆಚ್ಚಿನ ಹಣ ಗಳಿಸುವ ದೃಢಸಂಕಲ್ಪ ಮಾಡಿ ತರಕಾರಿ ಬೆಳೆದ ರೈತರ ಹೊಲಗಳಿಗೆ ಭೇಟಿಕೊಟ್ಟು ಮಾಹಿತಿ ಪಡೆದರು. ತೋಟಗಾರಿಕೆ ಅಧಿಕಾರಿಗಳ ಮತ್ತು ಪ್ರಗತಿಪರ ರೈತರ ಪ್ರೇರಣೆಯನ್ನೂ ಪಡೆದು ತರಕಾರಿಯನ್ನೇ ಬೆಳೆಸಲು ನಿರ್ಧರಿಸಿದರು. ಈಗ ಒಂದು ಎಕರೆಯಲ್ಲಿ ಹೂಕೋಸು ಮತ್ತು ಎಲೆಕೋಸು, ಹೀರೆಕಾಯಿ ಮತ್ತು ತುಪ್ಪದ ಹೀರೆಕಾಯಿ, ಹಾಗಲಕಾಯಿ, ಒಂದೂವರೆ ಎಕರೆಯಲ್ಲಿ ಟೊಮ್ಯಾಟೋ ಮತ್ತು ಅರ್ಧ ಎಕರೆಯಲ್ಲಿ ಬದನೆಕಾಯಿ ಬೆಳೆಯುತ್ತಿದ್ದಾರೆ. ಉಳಿದೆರಡು ಎಕರೆಯಲ್ಲಿ ಕಲ್ಲಂಗಡಿ, ಕಬ್ಬು, ಸೋಯಾ ಮತ್ತು ತೊಗರಿ ಬೆಳೆದಿದ್ದಾರೆ. ಕಳೆದ 5 ವರ್ಷದಿಂದ ವಿವಿಧ ತರಕಾರಿ ಬೆಳೆಗಳಿಂದ ದಿನಕ್ಕೆ 1500 ರಿಂದ 2000 ರೂ.ಯಂತೆ ವರ್ಷಕ್ಕೆ ಸುಮಾರು 5.50 ಲಕ್ಷ ರೂ.ವರೆಗೆ ಆದಾಯ ಪಡೆಯುತ್ತಿದ್ದಾರೆ. ಖರ್ಚು ವರ್ಷಕ್ಕೆ 2-3 ಲಕ್ಷ ರೂ. ಬರುತ್ತದೆ. ಕಳೆದ ವರ್ಷ ಒಂದು ಎಕರೆಯಲ್ಲಿ ಕಲ್ಲಂಗಡಿಯೊಂದರಿಂದಲೇ 1.65 ಲಕ್ಷ ರೂ. ಗಳಿಸಿದ್ದಾರೆ. ತರಕಾರಿಯನ್ನು ಚಿಟಗುಪ್ಪಾ, ಮನ್ನಾಯೆಖ್ಖೆಳ್ಳಿ, ಕಲಬುರಗಿ ಮತ್ತು ಹೈದ್ರಾಬಾದ ತರಕಾರಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

ತೋಟಗಾರಿಕೆ ಇಲಾಖೆಯಿಂದ 2015-16ರಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆಯಲ್ಲಿ 7 ಎಕರೆ ಭೂಮಿಯಲ್ಲಿ ಹನಿ ನೀರಾವರಿ ಮತ್ತು ಮಲ್ಚಿಂಗ್ ಪದ್ಧತಿ ಅಳವಡಿಸಿಕೊಳ್ಳಲು 90000 ರೂ. ಸಹಾಯಧನ, 2016-17ರಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಒಂದು ಹೆಕ್ಟೇರ್ ಪಪ್ಪಾಯ ಬೆಳೆಗೆ 86000 ರೂ. ಮತ್ತು ಯಾಂತ್ರೀಕರಣ ಯೋಜನೆಯಡಿ ಸ್ಪ್ರೇಯರ್ ಯಂತ್ರಕ್ಕಾಗಿ 36000 ರೂ. ಸಹಾಯಧನ ಪಡೆದಿದ್ದಾರೆ. ಮಲ್ಚಿಂಗ್ ಮತ್ತು ಹನಿ ನೀರಾವರಿಯಿಂದ ತರಕಾರಿ ಬೆಳೆಗಳ ಖರ್ಚು ಕಡಿಮೆ. ಬಹುಬೆಳೆ ಪದ್ಧತಿಯಿಂದ ಉತ್ಪಾದನೆ ಹೆಚ್ಚು. ಆಕಳು, ಎಮ್ಮೆಗಳಿಂದ ಹೊಲಕ್ಕೆ ಗೊಬ್ಬರ, ಮನೆಗೆ ಹಾಲು ಸಿಗುತ್ತಿದೆ. ಇಬ್ಬರು ಹೆಣ್ಣುಮಕ್ಕಳು ಒಬ್ಬ ಗಂಡು ಮಗ ಇದ್ದು, ಮಗನಿಗೆ ನೌಕರಿಯೂ ಸಿಕ್ಕಿದೆ. ಬೆಳೆಗಳ ಖರ್ಚಿಗೂ, ಕೆಲಸಕ್ಕೂ ಮಗ ಸಹಾಯ ಮಾಡುತ್ತಿರುವುದರಿಂದ ಈಗ ಎಲ್ಲೆಡೆ ಖುಷಿಯ ಕಳೆ ಮೈದುಂಬಿದೆ ಎಂದು ನಾರಾಯಣರಾವ್ ಭಂಗಿ ಹೇಳುತ್ತಾರೆ. ಸಂಪರ್ಕಕ್ಕೆ 9448584932.

ಜೆ. ಚಂದ್ರಕಾಂತ. 

(ಲೇಖಕರು ನಿವೃತ್ತ ಉಪನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಲಬುರಗಿ)