ವಾಣಿಜ್ಯ

ಕೇಂದ್ರ ಬಜೆಟ್​ 2020 LIVE| ನಮೋ ಸರ್ಕಾರದಿಂದ ತೆರಿಗೆ ಗಿಫ್ಟ್​: 5 ಲಕ್ಷ ರೂ.ವರೆಗೂ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ

01:44 PM: 2020-21ನೇ ಸಾಲಿನ ಬಜೆಟ್​ ಮಂಡನೆ ಮುಕ್ತಾಯ. 2 ಗಂಟೆ 40 ನಿಮಿಷಗಳ ಸುದೀರ್ಘ ಬಜೆಟ್​ ಮಂಡನೆ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​. ಬಜೆಟ್​ ಮಂಡನೆ ಕೊನೆಯಲ್ಲಿ ಆಯಾಸವಾದ ಕಾರಣ ಕೆಲಕಾಲ ಮಂಡನೆ ಸ್ಥಗಿತಗೊಳಿಸಿದ ವಿತ್ತ ಸಚಿವೆ. ಕೊನೆಗೆ ಸುಧಾರಿಸುಕೊಂಡು ಬಜೆಟ್ ಪೂರ್ಣಗೊಳಿಸಿದರು. ಸದ್ಯ ಸದನವನ್ನು ಮುಂದೂಡಲಾಗಿದೆ.

01:39 PM: ಜನಸಾಮಾನ್ಯರ ಪ್ಯಾನ್​ ಕಾರ್ಡ್​ ವ್ಯವಸ್ಥೆ ಸರಳೀಕರಣಕ್ಕೆ ಒತ್ತು. 5 ಕೋಟಿ ರೂ. ಬಂಡವಾಳದ ಕಂಪನಿಗಳಿಗೆ ಆಡಿಟಿಂಗ್​ ಇಲ್ಲ. ಆಧಾರ್​ ಕಾರ್ಡ್​ ಆಧಾರಿತ ಪ್ಯಾನ್​ ಹಂಚಿಕೆಗೆ ಕ್ರಮ. ಏಪ್ರಿಲ್​ನಿಂದ ಹೊಸ ಜಿಎಸ್​ಟಿ. ಸಹಕಾರಿ ಸಂಘಗಳ ಮೇಲಿನ ತೆರಿಗೆ ಶೆ. 22 ರಷ್ಟು ಇಳಿಕೆ.

01:37 PM: ಹೊಸ ಜಿಎಸ್​ಟಿ ವ್ಯವಸ್ಥೆ ಜಾರಿಗೂ ಸರ್ಕಾರ ಚಿಂತನೆ.

01:35 PM: ತೆರಿಗೆದಾರರ ವ್ಯಾಜ್ಯ ಪರಿಹರಿಸಲು ಮುಂದಾದ ಕೇಂದ್ರ ಸರ್ಕಾರ. ಬಾಕಿ ಇರುವ 4.80 ಲಕ್ಷ ತೆರಿಗೆ ವ್ಯಾಜ್ಯ ಶೀಘ್ರ ಇತ್ಯರ್ಥಕ್ಕೆ ಕ್ರಮ. ತೆರಿಗೆ ವಿವಾದ ಬಗೆಹರಿಸಿ ತೆರಿಗೆ ಸ್ನೇಹಿ ಸರ್ಕಾರಕ್ಕೆ ಕ್ರಮ.

01:29 PM: ಚಾರಿಟಬಲ್​ ಸಂಸ್ಥೆಗಳಿಗೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ. ಹಾಗೆಯೇ ಕಂಪನಿಗಳ ಡಿವೈಡೆಂಡ್​ ಡಿಸ್ಟ್ರಿಬ್ಯೂಷನ್​ ಟ್ಯಾಕ್ಸ್​ ರದ್ದು ಮಾಡಿದ ಸರ್ಕಾರ.

01:22 PM: ಉಳಿತಾಯ ಮತ್ತು ಉದ್ಯೋಗ ಉತ್ತೇಜನಕ್ಕೆ ತೆರಿಗೆ ಸುಧಾರಣೆ. ಲಾಭಾಂಶ ಹಂಚಿಕೆ ತೆರಿಗೆ ರದ್ದು ಮಾಡಿದ ಸರ್ಕಾರ. ರಿಯಲ್​ ಎಸ್ಟೇಟ್​ ಉದ್ಯಮಕ್ಕೂ ಬಿಗ್​ ಗಿಫ್ಟ್​, ಡೆವಲಪರ್ಸ್​ಗಳಿಗೆ ಒಂದು ವರ್ಷದವರೆಗೂ ತೆರಿಗೆ ವಿನಾಯಿತಿ.

01:20 PM: ತೆರಿಗೆ ವಿನಾಯಿತಿಯಲ್ಲಿ ಕೇಂದ್ರ ಸರ್ಕಾರದಿಂದ ತೆರಿಗೆದಾರರಿಗೆ ಬಿಗ್​ ಗಿಫ್ಟ್​. ಬಜೆಟ್​ನಲ್ಲಿ ಭಾರಿ ಪ್ರಮಾಣದಲ್ಲಿ ತೆರಿಗೆ ಕಡಿತಗೊಳಿಸಿದ ಕೇಂದ್ರ ಸರ್ಕಾರ. ಕಾರ್ಪೋರೇಟ್​ ತೆರಿಗೆಯಲ್ಲೂ ಭಾರಿ ಇಳಿಕೆ. ಶೇ. 22 ರಿಂದ 15ಕ್ಕೆ ಇಳಿಕೆ. ವೈಯಕ್ತಿಕ ಆದಾಯ 5 ಲಕ್ಷ ರೂ.ವರೆಗೂ ತೆರಿಗೆ ಇಲ್ಲ. ತೆರಿಗೆ ಇಳಿಕೆಯಿಂದ ಜನಸಾಮಾನ್ಯರಿಗೆ ನಿಟ್ಟುಸಿರು.

01:09 PM: 15 ಲಕ್ಷ ರೂ.ಗಿಂತ ಮೇಲ್ಪಟ್ಟ ಆದಾಯಕ್ಕೆ ಶೆ.30 ರಷ್ಟು ತೆರಿಗೆ.

01:09 PM: ಐದು ಲಕ್ಷ ರೂ. ವಾರ್ಷಿಕ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. 5 ರಿಂದ 7.5 ಲಕ್ಷ ರೂ.ವರೆಗೆ ಶೆ. 10 ರಷ್ಟು, 7.5 ಲಕ್ಷದಿಂದ 10 ಲಕ್ಷ ರೂ.ವರೆಗೂ 15 ರಷ್ಟು, 10 ಲಕ್ಷದಿಂದ 12.5 ಲಕ್ಷ ರೂ.ವರೆಗೂ ಶೇ 20 ರಷ್ಟು ಹಾಗೂ 12.5 ಲಕ್ಷದಿಂದ 15 ಲಕ್ಷದವರೆಗೂ ಶೆ. 25 ರಷ್ಟು ತೆರಿಗೆ. ತೆರಿಗೆಯಲ್ಲಿ ಭಾರಿ ಗಿಫ್ಟ್​ ನೀಡಿದ ಕೇಂದ್ರ ಸರ್ಕಾರ.

01:02 PM: ಕಾರ್ಪೋರೇಟ್​ ತೆರಿಗೆ ಇಳಿಸಿದ ಕೇಂದ್ರ ಸರ್ಕಾರ. ಶೇ 22 ರಿಂದ 15ಕ್ಕೆ ಇಳಿಕೆ.

12:59 PM: 2021ರಲ್ಲಿ ಶೆ. 10 ರಷ್ಟು ಜಿಡಿಪಿ ಬೆಳವಣಿಗೆ ಗುರಿ. 2020-21ರಲ್ಲಿ ವಿತ್ತೀಯ ಕೊರತೆ ಅಂದಾಜು ಶೆ. 3.5.

12:53 PM: ಜೀವ ವಿಮಾ ನಿಗಮ(ಎಲ್​ಐಸಿ) ಖಾಸಗೀಕರಣಕ್ಕೆ ನಿರ್ಧಾರ. ಎಲ್​ಐಸಿಯ ಎಲ್ಲ ಸರ್ಕಾರಿ ಷೇರುಗಳ ಮಾರಾಟ.

12:50 PM: ಸಣ್ಣ ಮತ್ತು ಮಧ್ಯಮ ಉದ್ಯಮ ಉತ್ತೇಜನಕ್ಕೆ ಸಾಲ ಸೌಲಭ್ಯ. ಪೈಪ್​ಲೈನ್​ಗಳ ಮೂಲಸೌಕರ್ಯಕ್ಕೆ 22 ಸಾವಿರ ಕೋಟಿ ರೂ. ಎನ್​ಆರ್​ಐಗಳಿಗೆ ಬಂಡವಾಳ ಹೂಡಲು ಹೊಸ ಯೋಜನೆ.

12:45 PM: ಖಾಸಗಿ ಬ್ಯಾಂಕ್​ಗಳಲ್ಲಿ ಠೇವಣಿದಾರರ ಹಣ ಸುರಕ್ಷತೆಗೆ ಕ್ರಮ. ಠೇವಣಿದಾರರ ವಿಮಾ ಮೊತ್ತ 1 ಲಕ್ಷದಿಂದ 5 ಲಕ್ಷ ರೂ.ವರೆಗೆ ಏರಿಕೆ. ಬ್ಯಾಂಕ್​ಗಳ ಮೇಲೆ ತೀವ್ರ ನಿಗಾವಹಿಸಲಾಗುವುದು. ಸಾರ್ವಜನಿಕ ಉದ್ದಿಮೆ 3.5 ಲಕ್ಷ ರೂ. ಹೂಡಿಕೆ. ಐಡಿಬಿಐ ಬ್ಯಾಂಕ್​ ಖಾಸಗಿಕರಣಕ್ಕೆ ನಿರ್ಧಾರ. ಐಡಿಬಿಐನ ಸರ್ಕಾರದ ಷೇರುಗಳನ್ನು ಮಾರಾಟ ಮಾಡಲು ನಿರ್ಧಾರ.

12:42 PM: ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ 30, 757 ಕೋಟಿ ರೂ., ಮತ್ತು ಲಡಾಖ್​ ಅಭಿವೃದ್ಧಿಗೆ 5,958 ಕೋಟಿ ರೂ. ನಿಗದಿ.

12:41 PM: ದೊಡ್ಡ ನಗರಗಳಲ್ಲಿ ಸ್ವಚ್ಛ ಗಾಳಿಯ ಸಮಸ್ಯೆ ತಲೆದೂರಿದೆ. ಈ ಬಗ್ಗೆ ಕಾಳಜಿ ವಹಿಸಬೇಕಾಗಿದ್ದು, ಇದಕ್ಕೆ ಸಂಬಂಧಿಸಿದ ಸೂತ್ರಗಳನ್ನು ಅಳವಡಿಸಿಕೊಂಡು ಅನುಷ್ಠಾನಕ್ಕೆ ತರುವ ರಾಜ್ಯಗಳ ಪ್ರಸ್ತಾವನೆಯನ್ನು ಉತ್ತೇಜಿಸಲಾಗುವುದು. ಇದಕ್ಕಾಗಿ 4,400 ಕೋಟಿ ರೂ. ಮೀಸಲಿಡಲಾಗುವುದು.

12:32 PM: ಅಹಮದಾಬಾದ್​ನಲ್ಲಿ ಹೊಸ ಮ್ಯೂಸಿಯಂ ಸ್ಥಾಪನೆ. ರಾಷ್ಡ್ರೀಯ ಭದ್ರತೆ, ಸಂಪತ್ತು ಸೃಷ್ಟಿ ಮತ್ತು ಸಂಪನ್ಮೂಲ ಸೃಷ್ಟಿಗೆ ಒತ್ತು, ರಾಷ್ಟ್ರೀಯ ಭದ್ರತೆಯೇ ಸರ್ಕಾರದ ಮೊದಲ ಆದ್ಯತೆ. ತೆರಿಗೆದಾರನಿಗೆ ಯಾವುದೇ ದೌರ್ಜನ್ಯ ಎಸಗದಂತೆ ಕ್ರಮ. ತೆರಿಗೆದಾರನ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ. ಭ್ರಷ್ಟಾಚಾರ ರಹಿತ ಆಡಳಿತ ನಮ್ಮ ಸರ್ಕಾರದ ಆದ್ಯತೆ.

12:28 PM: ಅಸ್ಸಾಂನ ಶಿವಸಾಗರ್​, ಹರಿಯಾಣದ ರಾಖಿಗಡಿ, ಗುಜರಾತಿನ ಡೋಲಾಪುರ, ಉತ್ತರ ಪ್ರದೇಶದ ಹಸ್ತಿನಾಪುರ ಹಾಗೂ ತಮಿಳುನಾಡಿನ ಆದಿಚನಲ್ಲೂರು ಐತಿಹಾಸಿಕ ಸ್ಥಳಗಳಾಗಿ ಘೋಷಣೆ. ರಾಂಚಿಯಲ್ಲಿ ಬುಡಕಟ್ಟು ಮತ್ತು ವಸ್ತು ಸಂಗ್ರಹಾಲಯ ಸ್ಥಾಪನೆ. ಐದು ಪುರಾತತ್ವ ಸಂರಕ್ಷಣಾ ಸಂಸ್ಥೆ ಸ್ಥಾಪನೆ.

12:25 PM: ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವು ಯೋಜನೆಗಳು. ಪ್ರವಾಸೋದ್ಯಮ ಉತ್ತೇಜನಕ್ಕೆ 2500 ಕೋಟಿ ರೂ. ಘೋಷಣೆ. ಸಂಸ್ಕೃತಿ ಇಲಾಖೆಗೆ 3150 ಕೋಟಿ ರೂ. ಅನುದಾನ.

12:22 PM: ಪರಿಶಿಷ್ಟ ಜಾತಿ ಮತ್ತು ಹಿಂದುಳಿದವರ ಕಲ್ಯಾಣಕ್ಕಾಗಿ 85 ಸಾವಿರ ಕೋಟಿ ರೂ., ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ 53,700 ಕೋಟಿ ರೂ. ಹಾಗೂ ಮಹಿಳಾ ಸಬಲೀಕರಣ ಯೋಜನೆಗಳಿಗೆ 28,600 ಕೋಟಿ ರೂ. ಮೀಸಲು.

12:19 PM: ಅಂಗನವಾಡಿ ಕಾರ್ಯಕರ್ತೆಯರಿಗೆ ಬಂಪರ್​ ಆಫರ್​ ಘೋಷಣೆ. ಕಾರ್ಯಕರ್ತೆಯರಿಗೆ ಸ್ಮಾರ್ಟ್​ಫೋನ್​ ವಿತರಣೆ. ಒಟ್ಟು 6 ಲಕ್ಷ ಕಾರ್ಯಕರ್ತೆಯರಿಗೆ ಸೌಲಭ್ಯ. ಅಪೌಷ್ಠಿಕತೆ ನಿವಾರಣೆಗೆ 35 ಸಾವಿರ ಕೋಟಿ ರೂ. ಮೀಸಲು.

12:17 PM: ಬೇಟಿ ಪಡಾವೋ ಬೇಟಿ ಬಚಾವೋ ಯೋಜನೆ ಯಶಸ್ವಿಯಾಗಿದೆ. ಯೋಜನೆ ಅಡಿ ಶೇ. 93.2 ರಷ್ಟು ನೋಂದಣಿ ಆಗಿದೆ ಎಂದು ವಿತ್ತ ಸಚಿವೆ. ಈ ವೇಳೆ ಪ್ರತಿಪಕ್ಷಗಳಿಂದ ಗದ್ದಲ. ಮಹಿಳಾ ಸಬಲೀಕರಣಕ್ಕೆ ಕೇಂದ್ರದ ಒತ್ತು ಮುಂದುವರಿಯುವುದಾಗಿ ಹೇಳಿದ ವಿತ್ತ ಸಚಿವೆ.

12:12 PM: ರಾಷ್ಟ್ರೀಯ ಅನಿಲ ಗ್ರಿಡ್ 16, 200 ಕಿ.ಮೀ. ವರೆಗೆ ವಿಸ್ತರಣೆ. ಭಾರತ್​ ನೆಟ್​ ಅಡಿ 6000 ಕೋಟಿ ಅನುದಾನ. ದೇಶಾದ್ಯಂತ ಡಾಟಾ ಸೆಂಟರ್​ ಪಾರ್ಕ್​ ನೀತಿ ಜಾರಿ. 1 ಲಕ್ಷ ಗ್ರಾಮ ಪಂಚಾಯಿತಿಗಳ ಡಿಜಿಟಲೀಕರಣ. ಅಂಗನವಾಡಿಗಳಿಗೆ ಡಿಜಿಟಲ್​ ಸೌಲಭ್ಯ.

12:09 PM: 2024ರೊಳಗೆ ಹೊಸ 100 ವಿಮಾನ ನಿಲ್ದಾಣ ನಿರ್ಮಾಣ ಗುರಿ. ವಿದ್ಯುತ್​ ಬಳಕೆದಾರರಿಗೆ ಸ್ಮಾರ್ಟ್​ ಮೀಟರ್​ ವ್ಯವಸ್ಥೆ. 550 ರೈಲುಗಳಲ್ಲಿ ಹೈಫೈ ಸೌಲಭ್ಯ.

12:07 PM: ಚೆನ್ನೈ-ಬೆಂಗಳೂರು ಎಕ್ಸ್​ಪ್ರೆಸ್​ ಕಾರಿಡಾರ್​ ನಿರ್ಮಾಣ. ಬೆಂಗಳೂರಿನ ಸಬರ್ಬನ್​ ಯೋಜನೆಗೆ ಕೇಂದ್ರದಿಂದ ಶೇ. 60 ರಷ್ಟು ಅನುದಾನ. ಖಾಸಗಿ ಸಹಭಾಗಿತ್ವದಲ್ಲಿ ಹೊಸ 120 ರೈಲುಗಳ ಘೋಷಣೆ. ಸಾರಿಗೆ ಮೂಲ ಸೌಕರ್ಯಕ್ಕೆ 1.7 ಲಕ್ಷ ಕೋಟಿ ರೂ. ಮೀಸಲು. ಐತಿಹಾಸಿಕ ಯಾತ್ರ ಸ್ಥಳಗಳಿಗೆ ತೇಜಸ್​ ಮಾದರಿ ರೈಲು.

12:01 PM: ಆನ್​ಲೈನ್​ ಶಿಕ್ಷಣ ಕಾರ್ಯಕ್ರಮಕ್ಕೆ ಉತ್ತೇಜನ. ರಾಷ್ಟ್ರೀಯ ಸಂಸ್ಥೆಗಳ ರ್ಯಾಂಕಿಂಗ್​ ಚೌಕಟ್ಟಿನಲ್ಲಿರುವ 100 ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಆನ್​ಲೈನ್​ ಶಿಕ್ಷಣ ಆರಂಭ.

11:59 AM: ಖಾಸಗಿ ಸಹಭಾಗಿತ್ವದಲ್ಲಿ 5 ಹೊಸ ಸ್ಮಾರ್ಟ್​ ಸಿಟಿ ನಿರ್ಮಾಣ. ಸಣ್ಣ ರಫ್ತುದಾರರಿಗೂ ಹೆಚ್ಚಿನ ಉತ್ತೇಜನ. ಉತ್ಪಾದನ ಕ್ಷೇತ್ರಕ್ಕೆ ಹಲವು ಯೋಜೆನೆಗಳನ್ನು ನೀಡಲಾಗುವುದು. ಉದ್ಯಮ ವಲಯ ಉತ್ತೇಜನಕ್ಕೆ 27,300 ಕೋಟಿ ರೂ. ಮೀಸಲು. 5 ವರ್ಷಕ್ಕೆ ಮೂಲಭೂತ ಸೌಕರ್ಯಕ್ಕೆ 1 ಲಕ್ಷ ಕೋಟಿ ರೂ. ಮೀಸಲು. ರಫ್ತು ಉತ್ತೇಜನಕ್ಕಾಗಿ ನಿರ್ವಿಕ್​ ಯೋಜನೆ ಜಾರಿ. ಎಲೆಕ್ಟ್ರಾನಿಕ್​ ಉತ್ಪನನ್ನಗಳ ಉತ್ಪಾದನೆಗೆ ಉತ್ತೇಜನ.

11:54 AM: ನೂತನವಾಗಿ ರಾಷ್ಟ್ರೀಯ ಪೊಲೀಸ್​ ಮತ್ತು ವಿಧಿವಿಜ್ಞಾನ ವಿವಿ ರಚನೆ. ಕೌಶಲಾಭಿವೃದ್ಧಿಗೆ 3000 ಕೋಟಿ ರೂ. ಮೀಸಲು. ವೈದ್ಯರ ಅಭಾವ ನೀಗಿಸಲು ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್​ ಕಾಲೇಜುಗಳು ಸ್ಥಾಪನೆ.

11:50 AM: ಶೀಘ್ರದಲ್ಲೇ ಹೊಸ ಶಿಕ್ಷಣ ನೀತಿ ಜಾರಿಗೆ. ಉದ್ಯೋಗ ಆಧಾರಿತ ಕೋರ್ಸ್​ಗೆ ಹೆಚ್ಚಿನ ಒತ್ತು. ಶಿಕ್ಷಣ ಕ್ಷೇತ್ರಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ. 2021ರಲ್ಲಿ ಶಿಕ್ಷಣ ಕ್ಷೇತ್ರಕ್ಕೆ 99.300 ಕೋಟಿ ರೂ. ಮೀಸಲು.

11:45 AM: ಸ್ವಚ್ಛ ಭಾರತ ಯೋಜನೆಗೆ 12,300 ಕೋಟಿ ರೂ. ಮೀಸಲಿಡಲಾಗಿದೆ. ಆಯುಷ್ಮಾನ್​ ಭಾರತ್​ ಯೋಜೆನೆಗೆ ಹೆಚ್ಚು ಒತ್ತು ನೀಡಲಾಗುವುದು. 12 ರೋಗಗಳಿಗಾಗಿ ಇಂದ್ರಧನುಸ್​ ಯೋಜನೆ ವಿಸ್ತರಣೆ ಮಾಡಲಾಗುವುದು. 2022ರೊಳಗೆ ಕ್ಷಯರೋಗ ನಿರ್ಮಲನಾ ಗುರಿ ಹೊಂದಲಾಗಿದೆ.

11:43 AM: 112 ಜಿಲ್ಲೆಗಳಲ್ಲಿ ಸುಸಜ್ಜಿತ ಆಸ್ಪತ್ರಗಳ ನಿರ್ಮಾಣ. ಆರೋಗ್ಯ ಕ್ಷೇತ್ರಕ್ಕೆ 69 ಸಾವಿರ ಕೋಟಿ ರೂ. ಮೀಸಲು. ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲಾವಾರು ಆಸ್ಪತ್ರೆ ನಿರ್ಮಾಣ. ಜನೌಷಧಿ ಕೇಂದ್ರ ಎಲ್ಲ ಜಿಲ್ಲೆಗಳಿಗೂ ವಿಸ್ತರಣೆ.

11:39 AM: ಕೃಷಿ ಉತ್ಪನ್ನ ಮಾರಾಟಕ್ಕೆ ಇ-ಮಾರುಕಟ್ಟೆ ಆರಂಭ. 2021ರಲ್ಲಿ ರೈತರಿಗೆ 15 ಲಕ್ಷ ಕೋಟಿ ರೂ. ಸಾಲ ಸೌಲಭ್ಯ. ನೈಸರ್ಗಿಕ ಕೃಷಿಗೆ ಉತ್ತೇಜನ. ರೈತರ ಆದಾಯ ದ್ವಿಗುಣಕ್ಕೆ ಸಾಂಪ್ರದಾಯಿಕ ಕೃಷಿಗೆ ಒತ್ತು.

11:36 AM: 2025ರಲ್ಲಿ 108 ಮೆಟ್ರಿಕ್​ ಟನ್​ ಕ್ಷೀರ ಉತ್ಪಾದನೆ ಗುರಿ. 3477 ಸಾಗರ ಮಿತ್ರ ಮತ್ತು 500 ಮೀನು ಕೃಷಿ ಉತ್ಪನ್ನ ಮೂಲಕ ಕರಾವಳಿ ಭಾಗದ ಯುವಕರಿಗೆ ಉದ್ಯೋಗ ಸೃಷ್ಠಿ. 2022-2023ರಲ್ಲಿ 200 ಲಕ್ಷ ಟನ್​ ಮೀನು ಉತ್ಪಾದನೆ ಗುರಿ.

11:34 AM: ಪ್ರಧಾನ ಮಂತ್ರಿ ಕುಸುಮ್​ ಯೋಜನೆಯಡಿ 20 ಲಕ್ಷ ರೈತರಿಗೆ ಸೋಲಾರ್​ ಪಂಪ್​ ಅಳವಡಿಕೆ. ದೇಶಾದ್ಯಂತ ನಬಾರ್ಡ್​ ಯೋಜನೆ ವಿಸ್ತರಣೆ. ರೈತರ ಬೆಳೆ ಸಾಗಾಣಿಕೆ ಕಿಸಾನ್​ ರೈಲು ಹಾಗೂ ಕೃಷಿ ಉಡಾನ್​.

11:31 AM: ರೈತ ಮಹಿಳೆಯ ಉತ್ತೇಜನಕ್ಕಾಗಿ "ಧಾನ್ಯಲಕ್ಷ್ಮೀ ಯೋಜನೆ" ಆರಂಭ.

11:30 AM: ನೀರಿನ ಕೊರತೆಯ 100 ಹಳ್ಳಿಗಳಿಗೆ ಸಮಗ್ರ ಯೋಜನೆ ಜಾರಿ ಮಾಡಲಾಗುವುದು. ಸೋಲಾರ್​ ವಿದ್ಯುತ್​ ಬಳಕೆಗೆ ರೈತರಿಗೆ ಉತ್ತೇಜನ ನೀಡಲಾಗುವುದು. ದೇಶದ ರೈತರ ನೆರವಿಗ ಕ್ರಿಯಾ ಯೋಜನೆ ರೂಪಿಸಲಾಗಿದೆ.

11:25 AM: ಭಾರತದ ವಿಶ್ವದಲ್ಲೇ 5ನೇ ದೊಡ್ಡ ಆರ್ಥಿಕತೆ ರಾಷ್ಟ್ರವಾಗಿದೆ. ಭಾರತದ ಸಾಲದ ಮೊತ್ತ ಶೇ. 48.7 ಕ್ಕೆ ಇಳಿದಿದೆ. ಕೃಷಿ ಉತ್ಪನ್ನ ಮತ್ತು ಖರೀದಿಗೆ ಉತ್ತೇಜನ ನೀಡಲಾಗುತ್ತದೆ. ಕೊಳ್ಳುವ ಶಕ್ತಿಯನ್ನು ಬಜೆಟ್​ ಹೆಚ್ಚಿಸಲಿದೆ.

11:20 AM: ಈ ಬಜೆಟ್​ ಭಾರತದ ಆಶಯ, ಸಬ್​ ಕಾ ಸಾಥ್​ ಮತ್ತು ಸಾಮಾಜಿಕ ಕಳಕಳಿ ಎಂಬ ಪ್ರಮುಖ ಮೂರು ಆಶಯಗಳನ್ನು ಹೊಂದಿದೆ. ಕಾಶ್ಮೀರಿ ಶಾಹಿರಿ ಪಠಿಸಿದ ವಿತ್ತ ಸಚಿವೆ.

11:18 AM: ಶ್ರಮ, ಶಕ್ತಿ ಮತ್ತು ಸ್ಪೂರ್ತಿ ನಮ್ಮ ಮಂತ್ರವಾಗಿದೆ. ಶಿಕ್ಷಣ ಹಾಗೂ ಉದ್ಯೋಗ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ.

11:16 AM: ಜಿಎಸ್​ಟಿ ಜಾರಿಯಿಂದ ಬಡಕುಟುಂಬಕ್ಕೆ ತಿಂಗಳಿಗೆ 4 ಸಾವಿರ ರೂ. ಉಳಿತಾವಾಗಿದೆ. ಸಾರಿಗೆ ಮತ್ತು ಲಾಜಿಸ್ಟಿಕ್ಸ್​ ವಲಯದಲ್ಲಿ ಉತ್ತಮ ಗಳಿಕೆಯಾಗಿದೆ. ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳು ಜಿಎಸ್​ಟಿಯಿಂದ ಲಾಭವನ್ನು ಗಳಿಸಿವೆ. ಬಳಕೆದಾರರ ಜಿಎಸ್​ಟಿಯಿಂದಾಗಿ ವಾರ್ಷಿಕವಾಗಿ 1 ಲಕ್ಷ ರೂ. ಅನುಕೂಲ ಪಡೆದುಕೊಂಡಿದ್ದಾರೆ.

11:12 AM: ಜಿಎಸ್​ಟಿ ಇಳಿಕೆಯಿಂದ ಸಾಮಾನ್ಯ ಜನರಿಗೆ ಅನುಕೂಲವಾಗಿದೆ. 16 ಲಕ್ಷ ಹೊಸ ತೆರಿಗೆ ಪಾವತಿದಾರರು ಉದ್ಭವವಾಗಿದ್ದಾರೆ. ಜಿಎಸ್​ಟಿಯಿಂದ "ಇನ್ಸ್​ಪೆಕ್ಟರ್​ ರಾಜ್​" ತೊಲಗಿದೆ.

11:010 AM: ಸಮಾಜದ ಎಲ್ಲ ವರ್ಗದ ಜನರ ಆಶೋತ್ತರಗಳನ್ನು ಈ ಬಜೆಟ್​ ಪೂರೈಸಲಿದೆ. ತೆರಿಗೆ ವ್ಯವಸ್ಥೆಯಲ್ಲಿ ಜಿಎಸ್​ಟಿ ಒಂದು ಉತ್ತಮ ಸುಧಾರಣೆ. ಜಿಎಸ್​ಟಿಗೆ ಮಾಜಿ ವಿತ್ತಸಚಿವ ಅರುಣ್​ ಜೇಟ್ಲಿ ಕೊಡುಗೆ ಅಪಾರ.

11:07 AM: ನಮ್ಮ ಸರ್ಕಾರದ ನೀತಿಗಳಿಗೆ ಜನಾದೇಶ ದೊರೆತಿದೆ. ದೇಶಕ್ಕೆ ಸೇವೆ ಸಲ್ಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಆದಾಯಕ್ಕೆ ಉತ್ತೇಜನ ನೀಡಲು ಈ ಬಾರಿಯ ಬಜೆಟ್​ನಲ್ಲಿ ಆದ್ಯತೆ ನೀಡಲಾಗಿದೆ.

11:00 AM: ವಿತ್ತಸಚಿವೆ ನಿರ್ಮಲಾ ಸೀತಾರಾಮನ್​ರಿಂದ ಬಜೆಟ್​ ಮಂಡನೆ ಆರಂಭ.

10:58: ಬಿಜೆಪಿ ಸಂಸದೆ ಹೇಮಾ ಮಾಲಿನಿ ಮತ್ತು ಸಂಸದರಾದ ರವಿಕಿಶನ್ ಹಾಗೂ ಸನ್ನಿ ಡಿಯೋಲ್​ ಸಂಸತ್ತಿಗೆ ಆಗಮನ.​

10: 44 AM: ಕೇಂದ್ರ ಸಂಪುಟ ಸಭೆ ಅಂತ್ಯ. ಬಜೆಟ್​ಗೆ ಅನುಮೋದನೆ ಪಡೆದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​. ಕೆಲವೇ ಕ್ಷಣಗಳಲ್ಲಿ ಬಜೆಟ್​ ಮಂಡನೆ ಆರಂಭ.

10: 35 AM: ಮಗಳು ಪರಕಲಾ ವಾಂಗ್ಮಯಿ ಸೇರಿದಂತೆ ಸಂಸತ್ತಿಗೆ ಆಗಮಿಸಿದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್​ ಕುಟುಂಬ.

10: 30 AM: ಸಂಸತ್ತಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್​ ಷಾ.

10: 00 AM: ಸಂಪುಟ ಸಭೆಯಲ್ಲಿ ಭಾಗವಹಿಸಲು ಸಂಸತ್​ ಭವನ ತಲುಪಿದ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್​ ಠಾಕೂರ್​. . ಸಂಪುಟ ಸಭೆ 10:15ಕ್ಕೆ ನಡೆಯಲಿದೆ.

9: 45 AM: ಬಜೆಟ್​ ಪ್ರತಿಯೊಂದಿಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಭೇಟಿ ಮಾಡಿ, ಬಜೆಟ್​ಗೆ ಅನುಮೋದನೆ ಪಡೆದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಬಳಿಕ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಸಂಸತ್ ಭವನಕ್ಕೆ ತೆರಳಿದ ಸಚಿವೆ.

9: 09 AM: ವಿತ್ತ ಸಚಿವಾಲಯದಿಂದ ಅಧಿಕಾರಿಗಳೊಟ್ಟಿಗೆ ಹೊರಬಂದ ನಿರ್ಮಲಾ ಸೀತಾರಾಮನ್.​ ಈ ಬಾರಿಯೂ ಸೂಟ್​ಕೇಸ್​ ಸಂಸ್ಕೃತಿಗೆ ಗುಡ್​ ಬೈ ಹೇಳಿ "ಬಾಹಿ ಖಾತಾ" ಹಿಡಿದು ಬಂದ ವಿತ್ತ ಸಚಿವೆ. ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಭೇಟಿಗೆ ತೆರಳಿದ ಸಚಿವೆ.

9:05 AM: ಕೇಂದ್ರ ಬಜೆಟ್​ ಹಿನ್ನೆಲೆಯಲ್ಲಿ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್​ ಠಾಕೂರ್​ ಅವರು ದೆಹಲಿಯ ತಮ್ಮ ನಿವಾಸದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​​ ಮೇಲಿ ನಂಬಿಕೆ ಇಟ್ಟಿದೆ. ದೇಶಾದ್ಯಂತ ಅನೇಕರ ಸಲಹೆಗಳನ್ನು ನಾವು ಸ್ವೀಕರಿಸಿದ್ದೇವೆ. ಎಲ್ಲರಿಗೂ ಒಳ್ಳೆಯದನ್ನು ಮಾಡುವ ಪ್ರಯತ್ನವನ್ನು ಈಓ ಬಜೆಟ್​ನಲ್ಲಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

9:00 AM: ಹಣಕಾಸು ಸಚಿವಾಲಯ ತಲುಪಿದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್​

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಸಂಸತ್ತಿನಲ್ಲಿಂದು ತಮ್ಮ ಎರಡನೇ ಪೂರ್ಣ ವರ್ಷದ ವಾರ್ಷಿಕ ಬಜೆಟ್​ ಅನ್ನು ಮಂಡಿಸಲಿದ್ದಾರೆ. ದೇಶದ ಆರ್ಥಕತೆಯ ಬೆಳವಣಿಗೆ ಕುಂಠಿತ ಮತ್ತು ಕನಿಷ್ಟ ಉದ್ಯೋಗ ಸೃಷ್ಟಿಯ ಜತೆಗೆ ಹೆಚ್ಚು ಹಣದುಬ್ಬರದ ಸವಾಲುಗಳನ್ನು ಭಾರತ ಎದುರಿಸುತ್ತಿರುವ ಹೊತ್ತಿನಲ್ಲಿ ಇಂದು ಮಂಡನೆಯಾಗಲಿರುವ ಆಯವ್ಯಯ ಭಾರತದ ಆರ್ಥಿಕತೆ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದುಕೊಂಡಿದೆ.