ವಾಣಿಜ್ಯ

ಕೇಂದ್ರ ಬಜೆಟ್ 2020: ನ್ಯಾಷನಲ್ ಟೆಕ್ನಿಕಲ್ ಟೆಕ್ಸ್​​ಟೈಲ್ ಮಿಷನ್​ ಘೋಷಣೆ

ನವದೆಹಲಿ: ಆಮದು ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನ್ಯಾಷನಲ್ ಟೆಕ್ನಿಕಲ್ ಟೆಕ್ಸ್​ಟೈಲ್ ಮಿಷನ್ ಜಾರಿಗೊಳಿಸುವ ಪ್ರಸ್ತಾವನೆಯನ್ನು ದೇಶದ ಮುಂದಿರಿಸಿದೆ. ಮುಂದಿನ ನಾಲ್ಕು ವರ್ಷದ ಅವಧಿಯಲ್ಲಿ 1,480 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಮದು ಕಡಿಮೆ ಮಾಡುವ ಕಾರ್ಯಯೋಜನೆ ಸಿದ್ಧವಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಈ ಸಲದ ಬಜೆಟ್ ಮಂಡಿಸಿದ ಅವರು, ಇಂಡಸ್ಟ್ರಿ ಮತ್ತು ಕಾಮರ್ಸ್​ ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತು ಉತ್ತೇಜನೆಗಾಗಿ ಕೇಂದ್ರ ಸರ್ಕಾರ 27,300 ಕೋಟಿ ರೂಪಾಯಿ ನೀಡಲಾಗಿದೆ. ಈ ವರ್ಷದಿಂದ ಕೇಂದ್ರ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಿಂದ ರಫ್ತುದಾರರಿಗೆ ಸಲ್ಲಬೇಕಾದ ಸುಂಕ ಮತ್ತು ತೆರಿಗೆಯ ಹಣ ಡಿಜಿಟಲ್ ರೀಫಂಡ್ ಮೂಲಕ ಹಿಂತಿರುಗಿಸುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.

ಮೂಲ ಸೌಕರ್ಯದ ವಿಚಾರಕ್ಕೆ ಬಂದರೆ, ಮೂಲ ಸೌಕರ್ಯ ಕ್ಷೇತ್ರಕ್ಕೆ ಪ್ರಾಜೆಕ್ಟ್​ ಪ್ರಿಪರೇಷನ್ ಫೆಸಿಲಿಟಿಗಳನ್ನು ಒದಗಿಸಲು ಸರ್ಕಾರ ಯೋಜನೆ ಸಿದ್ಧಪಡಿಸುತ್ತಿದೆ. ಅಲ್ಲದೆ,ನ್ಯಾಷನಲ್ ಲಾಜಿಸ್ಟಿಕ್ಸ್ ಪಾಲಿಸಿ ಕೂಡ ಜಾರಿಗೆ ಬರುತ್ತಿದೆ.103 ಕೋಟಿ ರೂಪಾಯಿ ವೆಚ್ಚದ ಇನ್ಫ್ರಾ ಪೈಪ್​ಲೈನ್ ಪ್ರಾಜೆಕ್ಟ್​ ಕೂಡ ಡಿಸೆಂಬರ್​ನಲ್ಲಿ ಬರಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ದೆಹಲಿ-ಮುಂಬೈ ಎಕ್ಸ್​ಪ್ರೆಸ್ ವೇ ಕೆಲಸ 2023ರಲ್ಲಿ ಪೂರ್ಣಗೊಳ್ಳಲಿದೆ ಮತ್ತು ಚೆನ್ನೈ-ಬೆಂಗಳೂರು ಎಕ್ಸ್​ಪ್ರೆಸ್​ವೇ ಕೂಡ ಲೋಕಾರ್ಪಣೆಗೊಳ್ಳಲಿದೆ. ಅಲ್ಲದೆ, ರೈಲ್ವೆ ನಿಲ್ದಾಣಗಳಲ್ಲಿ 550 ವೈಫೈ ಫೆಸಿಲಿಟಿಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು. (ಏಜೆನ್ಸೀಸ್)