ವಾಣಿಜ್ಯ

ಜಿಎಸ್​ಟಿ ನಿಯಮ ಮತ್ತಷ್ಟು ಬಿಗಿ

lakshmihegde

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಿಂದ ತಪ್ಪಿಸಿಕೊಳ್ಳುವ ಹಾಗೂ ವಂಚನೆ ನಡೆಸುವವರ ವಿರುದ್ಧ ನಿಯಮವನ್ನು ಮತ್ತಷ್ಟು ಬಿಗಿ ಮಾಡಲಾಗಿದೆ. ತೆರಿಗೆ ಸಲ್ಲಿಸುವ ಉದ್ಯಮಿಗಳ ಬ್ಯಾಂಕ್ ಖಾತೆಯ ಮಾಹಿತಿಗಳನ್ನೂ ಜಿಎಸ್​ಟಿ ಅಧಿಕಾರಿಗಳು ಪಡೆಯಬಹುದಾಗಿದೆ. ಇದರ ಮೂಲಕ ಉದ್ಯಮಿಗಳು ಸಲ್ಲಿಸುತ್ತಿರುವ ಜಿಎಸ್​ಟಿ ಅವರ ಆದಾಯಕ್ಕೆ ಸಮನಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಜಿಎಸ್​ಟಿ ವಿಭಾಗ, ಹಣಕಾಸು ಗುಪ್ತಚರ ಘಟಕ (ಎಫ್​ಐಯು) ಮತ್ತು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧಿಕಾರಿಗಳು ಶೀಘ್ರದಲ್ಲೇ ರ್ಚಚಿಸಲಿದ್ದಾರೆ. ‘ಇ-ವೇ ಬಿಲ್​ಗಳು ಮತ್ತು ಫಾಸ್ಟ್​ಟ್ಯಾಗ್ ಮೂಲಕ ಸರಕುಗಳನ್ನು ನಿಜವಾಗಿಯೂ ಸಾಗಿಸಲಾಗಿದೆಯೇ ಎಂದು ನಾವು ಪರಿಶೀಲಿಸುತ್ತೇವೆ. ಇದರಲ್ಲಿ ನಿಜವಾದ ವಹಿವಾಟು ನಡೆದಿದೆಯೆ ಅಥವಾ ಆದಾಯದಲ್ಲಿ ನಕಲಿ ವಿವರಗಳನ್ನು ಭರ್ತಿ ಮಾಡಲಾಗಿದೆಯೇ ಎಂಬ ಬಗ್ಗೆ ಬ್ಯಾಂಕುಗಳ ಡೇಟಾ ನಮಗೆ ಸಹಾಯ ಮಾಡುತ್ತದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಹಿಂದೆ ಕೈಗೊಂಡ ಕ್ರಮಗಳ ಪರಿಣಾಮದಿಂದಾಗಿ ಕಳೆದ ಡಿಸೆಂಬರ್ ವೇಳೆಗೆ ಜಿಎಸ್​ಟಿಆರ್-3ಬಿ ಫಾಮ್ರ್ ಸಲ್ಲಿಕೆ ಶೇ.12 ಹೆಚ್ಚಳವಾಗಿದೆ.