ವಾಣಿಜ್ಯ

ಬ್ಯಾಂಕ್​ಗಳ ಸಿಇಒ ಗರಿಷ್ಠ ವಯೋಮಿತಿ 70 ವರ್ಷ

ನವದೆಹಲಿ: ಬ್ಯಾಂಕಿಂಗ್ ಕ್ಷೇತ್ರದ ಆಡಳಿತ ಸುಧಾರಿಸುವ ನಿಟ್ಟಿನಲ್ಲಿ ಬ್ಯಾಂಕ್​ಗಳ ಸಿಇಒ ಮತ್ತು ಪೂರ್ಣಾವಧಿ ನಿರ್ದೇಶಕರ ಗರಿಷ್ಠ ವಯೋಮಿತಿಯನ್ನು 70 ವರ್ಷಕ್ಕೆ ಹಾಗೂ ಪ್ರವರ್ತಕರ ಗರಿಷ್ಠ ಕಾರ್ಯಾವಧಿಯನ್ನು 10 ವರ್ಷಕ್ಕೆ ನಿಗದಿ ಮಾಡುವ ಕುರಿತು ಆರ್​ಬಿಐ ಪ್ರಸ್ತಾವ ಮಾಡಿದೆ.

ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹಾಗೂ ಪೂರ್ಣಾವಧಿ ನಿರ್ದೇಶಕರು (ಡಬ್ಲ್ಯುಟಿಡಿ) ಪ್ರವರ್ತಕರ ಗುಂಪಿನವರೇ ಆಗಿದ್ದರೆ 10 ವರ್ಷದ ಸೇವೆ ಬಳಿಕ ಹುದ್ದೆಯನ್ನು ಹೊಸ ವೃತ್ತಿಪರರರಿಗೆ ಹಸ್ತಾಂತರಿಸಬೇಕು ಎಂದು ಆರ್​ಬಿಐ ತಿಳಿಸಿದೆ.

ಸಿಇಒ ಮತ್ತು ಡಬ್ಲ್ಯುಟಿಡಿ 70 ವರ್ಷದ ನಂತರ ಆ ಹುದ್ದೆಯಲ್ಲಿ ಮುಂದುವರೆಯುವಂತಿಲ್ಲ. ಅವಶ್ಯವಾದರೆ ಬ್ಯಾಂಕ್ ಮಂಡಳಿಗಳು ನೀಡಲಾಗಿರುವ ಗರಿಷ್ಠ ವಯೋಮಿತಿ ಒಳಗೆ ಇನ್ನೂ ತಗ್ಗಿಸಬಹುದು. ಈ ಕುರಿತು ಜುಲೈ 15ರೊಳಗಾಗಿ ಪ್ರತಿಕ್ರಿಯೆ ನೀಡಿ ಎಂದು ಆರ್​ಬಿಐ ಬ್ಯಾಂಕ್​ಗಳು ಮತ್ತು ಸಂಬಂಧಿತರಿಗೆ ತಿಳಿಸಿದೆ. ದೇಶೀಯ ಹಣಕಾಸು ವ್ಯವಸ್ಥೆಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಚೌಕಟ್ಟನ್ನು ಬದಲಾಯಿಸುವುದು ತಮ್ಮ ಉದ್ದೇಶ ಎಂದು ಆರ್​ಬಿಐ ತಿಳಿಸಿದೆ. -ಪಿಟಿಐ