ವಾಣಿಜ್ಯ

ಅರಿವೊಂದಿದ್ದರೆ ಗ್ರಾಹಕನೇ ರಾಜ

ಪ್ರತಿ ವ್ಯಕ್ತಿಯೂ ತನ್ನ ದೈನಂದಿನ ಬದುಕಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕನೇ. ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿಯ ಊಟಕ್ಕಾಗಿ ಖರೀದಿಸುವ ದಿನಸಿ, ತರಕಾರಿ, ಕಾಫಿ, ಟೀ ಗೆ ಬಳಸುವ ಹಾಲು, ಸಕ್ಕರೆ, ಶಾಲೆ-ಕಾಲೇಜುಗಳಲ್ಲಿ ಪಡೆಯುವ ಶಿಕ್ಷಣ, ಕಚೇರಿಗೆ ತೆರಳಲು ಬಳಸುವ ಸಾರಿಗೆ ಹೀಗೆ ಪ್ರತಿಯೊಂದನ್ನೂ ಹಣ ಪಾವತಿಸಿ ಉಪಯೋಗಿಸುವ ಎಲ್ಲರೂ ಗ್ರಾಹಕರೇ. ಆದರೆ ವ್ಯಾಪಾರದಲ್ಲಿ ಯಾರು, ಯಾರನ್ನು, ಹೇಗೆ ವಂಚಿಸುತ್ತಾರೆ; ಯಾರು, ಯಾರಿಂದ, ಹೇಗೆ ಮೋಸ ಹೋಗುತ್ತಾರೆ ಎಂಬುದನ್ನು ಊಹಿಸುವುದು ಕಷ್ಟ. ಗ್ರಾಹಕ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವ ಉದ್ದೇಶದಿಂದ ವಸ್ತುಗಳನ್ನು ಖರೀದಿಸಿದರೆ, ವರ್ತಕ ಲಾಭದ ದೃಷ್ಟಿಯಿಂದ ಸರಕುಗಳನ್ನು ಮಾರುತ್ತಾನೆ. ಇಂಥ ವ್ಯಾಪಾರದಲ್ಲಿ ವರ್ತಕನಿಗೆ ಅತಿಯಾದ ಲಾಭದ ಆಸೆಯಿದ್ದರೆ ಆಗ ಗ್ರಾಹಕ ಮೋಸ ಹೋದಂತೆಯೇ. ಅಳತೆಯಲ್ಲಿ ವ್ಯತ್ಯಾಸ, ನಕಲಿ ವಸ್ತುಗಳು, ಕಲಬೆರಕೆ ಹೀಗೆ ಅನೇಕ ವಿಚಾರಗಳಲ್ಲಿ ಗ್ರಾಹಕ ಶೋಷಣೆಗೆ ಒಳಪಡುತ್ತಾನೆ. ಇಂತಹ ವಂಚನೆಗಳನ್ನು ನಿಯಂತ್ರಿಸುವ ಸಲುವಾಗಿಯೇ ಕೇಂದ್ರ ಸರ್ಕಾರ 1986ರ ಡಿ. 24ರಂದು ಗ್ರಾಹಕರ ಸಂರಕ್ಷಣಾ ಅಧಿನಿಯಮವನ್ನು ಸಂಸತ್ತಿನಲ್ಲಿ ಅಂಗೀಕರಿಸಿತ್ತು. ನಂತರ ಬದಲಾದ ಕಾಲಕ್ಕೆ ತಕ್ಕಂತೆ ಅದನ್ನು 2019ರ ಆ. 9ರಂದು ನವೀಕ ರಿಸಿ ಜಾರಿಗೆ ತರಲಾಗಿದೆ. ಈ ಗ್ರಾಹಕ ಕಾನೂನು ಅನುಷ್ಠಾನಕ್ಕೆಂದೇ ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ/ಆಯೋಗ ಅಸ್ತಿತ್ವದಲ್ಲಿವೆ.

ಗ್ರಾಹಕರ ಜವಾಬ್ದಾರಿಗಳೇನು?

ಖರೀದಿಸುವ ವಸ್ತು ಅಥವಾ ಪಡೆಯುವ ಸೇವೆಗೆ ರಸೀದಿ, ವಾರಂಟಿ ಕಾರ್ಡ್ ಕೇಳಿ ಪಡೆಯಬೇಕು. ಕೆಲ ವರ್ತಕರು ತೆರಿಗೆ ನೆಪ ಹೇಳಿ ರಸೀದಿ ಪಡೆಯದಿದ್ದರೆ ಬಿಲ್ ಕಡಿಮೆಯಾಗುತ್ತದೆ ಎನ್ನುತ್ತಾರೆ. ಆ ಆಸೆಯಿಂದ ಗ್ರಾಹಕ ರಸೀದಿ ಪಡೆಯದಿದ್ದರೆ, ಮುಂದೆ ವಸ್ತುವಿನ ಗುಣಮಟ್ಟದಲ್ಲಿ ದೋಷವಿದ್ದರೆ ಇಂಥವರಿಂದಲೇ ಖರೀದಿಸಿದ್ದು ಎಂಬುದನ್ನು ಸಾಬೀತುಪಡಿಸಲಾಗುವುದಿಲ್ಲ. ಆದ್ದರಿಂದ ರಸೀದಿ ಅತ್ಯಗತ್ಯ. ಖರೀದಿಸಿದ ಸರಕಿನ ಅಳತೆ, ಮಾಪಕಗಳು ಸರಿ ಇವೆಯೇ ಎಂದು ಪರಿಶೀಲಿಸಬೇಕು. ತೂಕದ ಸಾಧನಗಳನ್ನು ಕಾನೂನು ಮಾಪನ ಇಲಾಖೆ ಪ್ರತಿ ವರ್ಷ ಪರಿಶೀಲಿಸಿ, ಮುದ್ರೆ ಹಾಕುತ್ತದೆ. ಈ ವಿಚಾರವನ್ನು ಗ್ರಾಹಕರು ತಿಳಿದಿರಬೇಕು. ಆಹಾರ ಪದಾರ್ಥಗಳ ಪ್ಯಾಕೆಟ್​ಗಳ ಮೇಲೆ ತಯಾರಕರ ಹೆಸರು, ವಿಳಾಸ, ನಿವ್ವಳ ತೂಕ, ಪ್ಯಾಕ್ ಮಾಡಿದ ದಿನಾಂಕ, ಅವಧಿ ಮುಗಿಯುವ ದಿನಾಂಕ, ಗರಿಷ್ಠ ಮಾರಾಟ ಬೆಲೆ ಇದೆಯೇ ಎಂದು ನೋಡಬೇಕು. ಐಎಸ್​ಐ ಮಾರ್ಕ್ ಹೊಂದಿರುವ ಸರಕುಗಳನ್ನೇ ಕೊಳ್ಳುವುದು ಉತ್ತಮ. ರಿಯಾಯತಿ ಆಮಿಷಗಳ ಬಗ್ಗೆ ಎಚ್ಚರದಿಂದಿರಬೇಕು. ಉದ್ಯಮ, ವ್ಯಾಪಾರ ಅಭಿವೃದ್ಧಿಯಾದಂತೆ ಮಾರಾಟದ ಮಾದರಿಗಳು ಬದಲಾಗುತ್ತಿವೆ. ಆನ್​ಲೈನ್ ಶಾಪಿಂಗ್, ಟೆಲಿಮಾರ್ಕೆಟಿಂಗ್ ಎಂಬ ಹೊಸ ಹೊಸ ಮಾರ್ಗಗಳ ಮೂಲಕವೂ ವ್ಯಾಪಾರ ನಡೆಯುತ್ತಿದ್ದು, ಗ್ರಾಹಕರು ಕಾಳಜಿ ವಹಿಸಿ ಗುಣಮಟ್ಟದ ವಸ್ತುಗಳನ್ನು ಖರೀದಿಸುವುದು ಅಗತ್ಯ

ಪರಿಹಾರ ಪಡೆಯುವುದು ಹೇಗೆ?

ಖರೀದಿಸಿದ ವಸ್ತು ಅಥವಾ ಪಡೆದ ಸೇವೆ ತೃಪ್ತಿ ನೀಡದಿದ್ದರೆ ಪರಿಹಾರ ಕೋರಿ ಕೋರ್ಟ್ ಮೊರೆ ಹೋಗಬಹುದು. ಆದರೆ, ಅದಕ್ಕೂ ಮುನ್ನ ವರ್ತಕರಿಗೆ ಖುದ್ದಾಗಿ ಅಥವಾ ವಕೀಲರ ಮೂಲಕ ನೋಟಿಸ್ ಜಾರಿಗೊಳಿಸಿ, ಸಮಸ್ಯೆಗೆ ಪರಿಹಾರ ಕೋರಬೇಕು. ನೋಟಿಸ್ ನೀಡಿದ 15 ದಿನಗಳ ಒಳಗೆ ಉತ್ತರ ಬಾರದಿದ್ದಲ್ಲಿ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿ ಪರಿಹಾರ ಕೋರಬಹುದು. ಈ ವೇಳೆ, ವಸ್ತುಗಳನ್ನು ಇಂಥ ವರ್ತಕರಿಂದಲೇ ಖರೀದಿಸಲಾಗಿದೆ ಎಂಬುದನ್ನು ಸಾಬೀತುಪಡಿಸುವ ರಸೀತಿ ಹಾಗೂ ಇತರ ದಾಖಲೆಗಳನ್ನು ದೂರಿನೊಂದಿಗೆ ಲಗತ್ತಿಸಬೇಕು. ಮೋಸ ಹೋದ ದಿನದಿಂದ 2 ವರ್ಷಗಳ ಒಳಗೆ ಯಾವಾಗ ಬೇಕಿದ್ದರೂ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಬಹುದು.

ಹಳೆ, ಹೊಸ ಕಾನೂನುಗಳ ನಡುವಿನ ವ್ಯತ್ಯಾಸಗಳು

ನಿಯಂತ್ರಣಾಧಿಕಾರ: 1986- ಈ ಕಾಯ್ದೆಯನ್ನು ಯಾವುದೇ ರೆಗ್ಯುಲೇಷನ್ ಅಡಿಯಲ್ಲಿ ಜಾರಿಗೊಳಿಸಿರಲಿಲ್ಲ.

2019- ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದಡಿ ಈ ಕಾಯ್ದೆ ಜಾರಿಗೆ ತರಲಾಗಿದೆ.

ಗ್ರಾಹಕ ನ್ಯಾಯಾಲಯದ ಅಧಿಕಾರ ವ್ಯಾಪ್ತಿ: 1986- ಗ್ರಾಹಕರು ವರ್ತಕರೊಡನೆ ಎಲ್ಲಿ ವ್ಯವಹಾರ ನಡೆಸಿರುತ್ತಾರೋ ಅಲ್ಲಿ, ಅಂದರೆ ವರ್ತಕನ ವ್ಯವಹಾರ ಸಂಸ್ಥೆ ಇರುವ ಸ್ಥಳದ ವ್ಯಾಪ್ತಿಗೆ ಬರುವ ಗ್ರಾಹಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು.

2019- ಗ್ರಾಹಕ ಎಲ್ಲಿ ವಾಸವಿರುತ್ತಾನೋ ಅಥವಾ ಎಲ್ಲಿ ಕೆಲಸ ಮಾಡುತ್ತಿರುತ್ತಾನೋ ಅಲ್ಲಿನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು.

ಸರಕು, ಸೇವೆಗಳ ಬಗ್ಗೆ ಜವಾಬ್ದಾರಿ: 1986- ಯಾವುದೇ ಕಲಂಗಳಿರಲಿಲ್ಲ. ಜವಾಬ್ದಾರಿಯ ಬಗ್ಗೆ ಸಿವಿಲ್ ನ್ಯಾಯಾಲಯಗಳಲ್ಲಿ ದಾವೆ ಹೂಡಬೇಕಿತ್ತು. ಗ್ರಾಹಕ ನ್ಯಾಯಾಲಯದಲ್ಲಿ ಅವಕಾಶವಿರಲಿಲ್ಲ.

2109- ಗ್ರಾಹಕನು ಸೇವೆ ಅಥವಾ ಸರಕಿನಿಂದ ತನಗಾದ ಹಾನಿಯ ಬಗ್ಗೆ ನಷ್ಟ ಪರಿಹಾರ ಕೇಳಿ ಗ್ರಾಹಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು.

ಮೌಲಿಕ ವ್ಯಾಪ್ತಿ: 1986- ಗ್ರಾಹಕ ತನ್ನ ಅರ್ಜಿಯನ್ನು ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ 20 ಲಕ್ಷ ರೂ.ವರೆಗಿನ ವ್ಯವಹಾರದ ದೂರು, 20 ಲಕ್ಷದಿಂದ 1 ಕೋಟಿ ರೂ.ವರೆಗಿನ ವ್ಯವಹಾರಗಳ ಬಗ್ಗೆ ರಾಜ್ಯ ಗ್ರಾಹಕರ ನ್ಯಾಯಾಲಯಗಳಲ್ಲಿ ಹಾಗೂ 1 ಕೋಟಿ ರೂ.ಗೂ ಅಧಿಕ ವ್ಯವಹಾರದ ಬಗೆಗಿನ ದೂರುಗಳನ್ನು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯಗಳಿಗೆ ನೀಡಬಹುದು.

2019- ಒಂದು ಕೋಟಿ ರೂ.ವರೆಗಿನ ವ್ಯವಹಾರದಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯ, 1 ಕೋಟಿಯಿಂದ 10 ಕೋಟಿ ರೂ.ವರೆಗಿನ ವ್ಯವಹಾರಗಳ ಸಂಬಂಧ ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ ಹಾಗೂ 10 ಕೋಟಿಗೂ ಮೇಲ್ಪಟ್ಟ ವ್ಯವಹಾರಗಳಲ್ಲಿ ರಾಷ್ಟ್ರೀಯ ಗ್ರಾಹಕ ನ್ಯಾಯಾಲಗಳಲ್ಲಿ ದೂರು ದಾಖಲಿಸಬಹುದು.

ಅಂತರ್ಜಾಲ ವ್ಯವಹಾರ: 1986- ಇ ಕಾಮರ್ಸ್​ಗೆ ಸಂಬಂಧಿಸಿದಂತೆ ಕಾಯ್ದೆಯಲ್ಲಿ ಕಲಂಗಳಿರಲಿಲ್ಲ.

2019- ವಸ್ತುಗಳ ನೇರ ವ್ಯವಹಾರದ ನಿಯಮಗಳು ಇ-ಕಾಮರ್ಸ್ ವ್ಯಾಪ್ತಿಗೆ ಒಳಪಡುತ್ತವೆ.

ಮಧ್ಯಸ್ಥಿಕಾ ಕೇಂದ್ರಗಳು: 1986- ಈ ಕಾಯ್ದೆಯಲ್ಲಿ ಯಾವುದೇ ಅವಕಾಶವಿರಲಿಲ್ಲ.

2019- ಈ ಕಾಯ್ದೆಯಲ್ಲಿ ಗ್ರಾಹಕರ ನ್ಯಾಯಾಲಯವು ವ್ಯಾಜ್ಯ ತೀರ್ವನಿಸಲು ಪಕ್ಷಗಾರರನ್ನು ಮಧ್ಯಸ್ಥಿಕಾ ಕೇಂದ್ರಗಳಿಗೆ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ.

ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನು 1983ರಿಂದ ಪ್ರತಿ ವರ್ಷ ಮಾ. 15ರಂದು ಪ್ರಪಂಚದಾದ್ಯಂತ ನಿರ್ದಿಷ್ಟ ಧ್ಯೇಯದೊಂದಿಗೆ ಆಚರಿಸಲಾಗುತ್ತದೆ. ಈ ವರ್ಷ ’ಸಸ್ಟೇನೆಬಲ್ ಕಸ್ಟಮರ್’ ಎಂಬುದು ಧ್ಯೇಯ. ಪ್ಯಾರಿಸ್ ಒಪ್ಪಂದದಂತೆ ಹವಾಮಾನ ವೈಪರೀತ್ಯಗಳ ನಿಯಂತ್ರಣಕ್ಕೆ ಹಾಗೂ ಜೀವವೈವಿಧ್ಯದ ರಕ್ಷಣೆಗೆ 2020 ಕೊನೆಯ ಅವಕಾಶ. ಹವಾಮಾನದ ಶೇಕಡಾವಾರು ಮಿತಿಯನ್ನು ಕೈಗಾರಿಕಾ ಕ್ರಾಂತಿಗೂ ಮೊದಲಿನ ಶೇಕಡಾವಾರು ಮಿತಿಗೆ ತರುವುದು ಹಾಗೂ ಜೀವ ವೈವಿಧ್ಯವನ್ನು ಮುಂದಿನ ಪೀಳಿಗೆಗೆ ಕಾಪಿಡುವ ನಿಟ್ಟಿನಲ್ಲಿ ಗ್ರಾಹಕರಲ್ಲಿ ಜಾಗೃತಿ ಮೂಡಿಸುವುದು ಈ ಸಲದ ಗ್ರಾಹಕ ದಿನದ ಪ್ರಮುಖ ಉದ್ದೇಶ. ಪ್ಲಾಸ್ಟಿಕ್ ಬಳಕೆ, ಆಹಾರ ನಷ್ಟ ಮುಂತಾದ ವಿಷಯಗಳಲ್ಲಿ ತಮ್ಮ ಹೊಣೆ ಏನು ಎಂಬುದನ್ನು ಗ್ರಾಹಕರು ಅರಿತುಕೊಳ್ಳಬೇಕಿದೆ. | ಹರಿಶ್ಚಂದ್ರ ಮವ್ವಾರು, ಹೈಕೋರ್ಟ್ ವಕೀಲರು

ಜಗನ್ ರಮೇಶ್