ಟ್ರಂಪ್ ಶಾಂತಿ ಮಂತ್ರಕ್ಕೆ ಜಿಗಿದ ಮಾರುಕಟ್ಟೆ: ಒಂದೇ ನಿಮಿಷದಲ್ಲಿ ಹೂಡಿಕೆದಾರರ ಕೈ ಸೇರಿದ 14 ಲಕ್ಷ ಕೋಟಿ! Share Market 
ಷೇರು ಮಾರುಕಟ್ಟೆ

ಟ್ರಂಪ್ ಶಾಂತಿ ಮಂತ್ರಕ್ಕೆ ಜಿಗಿದ ಮಾರುಕಟ್ಟೆ: ಒಂದೇ ನಿಮಿಷದಲ್ಲಿ ಹೂಡಿಕೆದಾರರ ಕೈ ಸೇರಿದ 14 ಲಕ್ಷ ಕೋಟಿ! Share Market

ಪ್ರಮುಖ ಮುಖ್ಯಾಂಶಗಳು

  • ಡೊನಾಲ್ಡ್​ ಟ್ರಂಪ್​ ಕದನ ವಿರಾಮ ಘೋಷಣೆ ಮಾಡುತ್ತಿದ್ದಂತೆಯೇ ಪುಟಿದೆದ್ದ ಜಾಗತಿಕ ಮಾರುಕಟ್ಟೆ
  • ಬುಧವಾರ (ಏಪ್ರಿಲ್​ 08) 9.30ರ ಸುಮಾರಿಗೆ ಲಾಭದಲ್ಲಿ ವಹಿವಾಟು ಆರಂಭಿಸಿದ ಭಾರತೀಯ ಮಾರುಕಟ್ಟೆ
  • ಹೂಡಿಕೆದಾರರ ಸಂಪತ್ತು ಸುಮಾರು 14 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಹೆಚ್ಚಳ
Share Market : ಇರಾನ್​ ವಿರುದ್ಧ ನಡೆಯುತ್ತಿರುವ ಯುದ್ಧಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಎರಡು ವಾರಗಳ ಕಾಲ ಕದನ ವಿರಾಮ ಘೋಷಣೆ ಮಾಡುತ್ತಿದ್ದಂತೆಯೇ ಯುದ್ಧದಿಂದ ತತ್ತರಿಸಿ ಹೋಗಿದ್ದ ಜಾಗತಿಕ ಷೇರು ಮಾರುಕಟ್ಟೆ ಇಂದು ಪುಟಿದೆದ್ದಿದೆ.
ಬುಧವಾರ (ಏಪ್ರಿಲ್​ 08) 9.30ರ ಸುಮಾರಿಗೆ ಭಾರತೀಯ ಮಾರುಕಟ್ಟೆ ಲಾಭದಲ್ಲಿ ವಹಿವಾಟು ಆರಂಭಿಸಿದೆ. ಬಿಎಸ್​ಇ ಸೆನ್ಸೆಕ್ಸ್​ ಸುಮಾರು 2,517.88 ಅಂಕಗಳು ಅಥವಾ ಶೇ.3.37 ರಷ್ಟು ಜಿಗಿತದೊಂದಿಗೆ 77,134.46ಕ್ಕೆ ತಲುಪಿದರೆ, ನಿಫ್ಟಿ 50 ಕೂಡ 765.60 ಪಾಯಿಂಟ್‌ಗಳಷ್ಟು ಅಥವಾ ಶೇ.3.28 ರಷ್ಟು ಜಿಗಿದು 23,881.20ರಲ್ಲಿ ವಹಿವಾಟು ಆರಂಭಿಸಿದೆ.
ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕದ ರಂಭಿಕ ವಹಿವಾಟಿನಲ್ಲಿ ಒಟ್ಟು 29 ಷೇರುಗಳು ಲಾಭ ಗಳಿಸಿವೆ ಮತ್ತು ಕೇವಲ 1 ಷೇರು ಮಾತ್ರ ನಷ್ಟ ಅನುಭವಿಸಿದೆ. ಅದೇ ರೀತಿ ನಿಫ್ಟಿ 50 ಸೂಚ್ಯಂಕದಲ್ಲಿ ಸುಮಾರು 43 ಷೇರುಗಳು ಲಾಭ ಕಂಡರೆ, 7 ಷೇರುಗಳು ನಷ್ಟ ಅನುಭವಿಸಿವೆ. ಪ್ರಮುಖವಾಗಿ ಐಟಿ ಮತ್ತು ಮೆಟಲ್ ವಲಯದ ಷೇರುಗಳು ಲಾಭದ ಹಾದಿಯಲ್ಲಿದ್ದು, ವಿಪ್ರೋ, ಹಿಂದೂಸ್ತಾನ್ ಕಾಪರ್, ಎಚ್‌ಸಿಎಲ್ ಟೆಕ್, ಟಿಸಿಎಸ್ ಮತ್ತು ಇನ್ಫೋಸಿಸ್​ ಕಂಪನಿಗಳು ಇಂದಿನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿ ಮುಂಚೂಣಿಯಲ್ಲಿವೆ. ಮತ್ತೊಂದೆಡೆ, ಮಾರುಕಟ್ಟೆಯ ಈ ಏರಿಕೆಯ ನಡುವೆಯೂ ಕೆಲವು ಫಾರ್ಮಾ ಮತ್ತು ಎನರ್ಜಿ ಷೇರುಗಳು ಒತ್ತಡಕ್ಕೆ ಸಿಲುಕಿದ್ದು, ಡಾ. ರೆಡ್ಡೀಸ್, ಅದಾನಿ ಎಂಟರ್‌ಪ್ರೈಸಸ್, ಅಪೋಲೋ ಹಾಸ್ಪಿಟಲ್ಸ್, ಇಂಡಿಗೋ ಮತ್ತು ಮಹೀಂದ್ರಾ ಆಂಡ್ ಮಹೀಂದ್ರಾ ಕಂಪನಿಗಳು ಆರಂಭಿಕ ವಹಿವಾಟಿನಲ್ಲಿ ನಷ್ಟ ಅನುಭವಿಸಿವೆ.

ಒಂದು ನಿಮಿಷದಲ್ಲಿ 14 ಲಕ್ಷ ಕೋಟಿ

ಇಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಯು ಐತಿಹಾಸಿಕ ಏರಿಕೆ ಕಂಡಿದ್ದು, ಹೂಡಿಕೆದಾರರ ಸಂಪತ್ತು ಸುಮಾರು 14 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಹೆಚ್ಚಳವಾಗಿದೆ. ಇದರಿಂದ ಹೂಡಿಕೆದಾರರು ತುಂಬಾ ಖುಷಿಯಾಗಿದ್ದಾರೆ.

ಮಾರುಕಟ್ಟೆ ಚೇತರಿಕೆಗೆ ಕಾರಣವೇನು?

ಅಮೆರಿಕ ಮತ್ತು ಇರಾನ್ ದೇಶಗಳು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿದ್ದ ಸಂಘರ್ಷವನ್ನು ತಣಿಸಲು ಎರಡು ವಾರಗಳ ಕಾಲ ಕದನ ವಿರಾಮಕ್ಕೆ ಸಮ್ಮತಿಸಿವೆ. ಈ ಮಹತ್ವದ ನಿರ್ಧಾರದಿಂದಾಗಿ ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿದ್ದ ಅನಿಶ್ಚಿತತೆ ಮತ್ತು ಆತಂಕ ದೂರವಾಗಿದ್ದು, ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿದೆ. ಸಂಘರ್ಷದ ತೀವ್ರತೆಯಿಂದ ತಲ್ಲಣಗೊಂಡಿದ್ದ ಜಾಗತಿಕ ಷೇರು ಮಾರುಕಟ್ಟೆಗಳು ಈಗ ಈ ವಿರಾಮದ ಹಿನ್ನೆಲೆಯಲ್ಲಿ ಚೇತರಿಕೆಯ ಹಾದಿಗೆ ಮರಳುತ್ತಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ಬಾಂಬ್ ದಾಳಿಯನ್ನು ಸ್ಥಗಿತಗೊಳಿಸಲು ಒಪ್ಪಿಗೆ ನೀಡಿದ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರಿ ಕುಸಿತ ಕಂಡಿದೆ. ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (WTI) ಬೆಲೆಯು ಸುಮಾರು ಶೇ. 19 ರಷ್ಟು ಇಳಿಕೆಯಾಗಿದ್ದರೆ, ಜಾಗತಿಕ ಮಾನದಂಡವಾದ ಬ್ರೆಂಟ್ ಕ್ರೂಡ್ ಬೆಲೆ ಶೇ. 16 ರಷ್ಟು ಕುಸಿದಿದೆ. ಇರಾನ್‌ನ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಣೆಗೆ ಸುರಕ್ಷಿತ ಹಾದಿ ಸಿಗಲಿದೆ ಎಂಬ ಭರವಸೆಯು ತೈಲ ಪೂರೈಕೆ ಸುಗಮಗೊಳ್ಳಲು ಸಹಕಾರಿಯಾಗಿದೆ.
ಮತ್ತೊಂದೆಡೆ, ತೈಲ ಬೆಲೆ ಇಳಿಕೆಯಿಂದಾಗಿ ಹಣದುಬ್ಬರ ನಿಯಂತ್ರಣಕ್ಕೆ ಬಂದು ಆರ್ಥಿಕ ಬೆಳವಣಿಗೆ ವೇಗವಾಗಲಿದೆ ಎಂಬ ನಿರೀಕ್ಷೆಯಲ್ಲಿ ಜಾಗತಿಕ ಮಾರುಕಟ್ಟೆಗಳು ಪುಟಿದೆದ್ದಿವೆ. ಏಷ್ಯಾದ ಎಂಎಸ್ ಸಿಐ (MSCI) ಸೂಚ್ಯಂಕವು ಶೇ. 2.6 ರಷ್ಟು ಏರಿಕೆ ಕಂಡಿದ್ದರೆ, ಅಮೆರಿಕದ ವಾಲ್ ಸ್ಟ್ರೀಟ್ ಫ್ಯೂಚರ್ಸ್ ಕೂಡ ಶೇ. 2 ಕ್ಕಿಂತ ಹೆಚ್ಚು ವೃದ್ಧಿಯಾಗಿದೆ. ಈ ಸಕಾರಾತ್ಮಕ ಜಾಗತಿಕ ಬೆಳವಣಿಗೆಗಳು ಹೂಡಿಕೆದಾರರಲ್ಲಿ ಹೊಸ ವಿಶ್ವಾಸವನ್ನು ತುಂಬಿವೆ, (ಏಜೆನ್ಸೀಸ್​).