ಮಧ್ಯಪ್ರಾಚ್ಯ ಯುದ್ಧದ ಭಯಕ್ಕೆ ಷೇರು ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್, ನಿಫ್ಟಿ ಭಾರಿ ಕುಸಿತ, 8 ಲಕ್ಷ ಕೋಟಿ ನಷ್ಟ! Share Market
- ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಸಾರಿರುವ ಯುದ್ಧದಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕದನ ಕಾರ್ಮೋಡ
- ಜಾಗತಿಕ ಹಾಗೂ ಭಾರತದ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧ
- ಸೋಮವಾರ (ಮಾರ್ಚ್ 02) ಸೆನ್ಸೆಕ್ಸ್ ಮತ್ತು ನಿಫ್ಟಿ ತೀವ್ರ ಕುಸಿತದೊಂದಿಗೆ ವಹಿವಾಟು ಆರಂಭಿಸಿವೆ
ನವದೆಹಲಿ: ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಸಾರಿರುವ ಯುದ್ಧದಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕದನ ಕಾರ್ಮೋಡ ಕವಿದಿದೆ. ಇದರ ಪರಿಣಾಮ ಜಾಗತಿಕ ಹಾಗೂ ಭಾರತದ ಷೇರು ಮಾರುಕಟ್ಟೆಯ ( Share Market ) ಮೇಲೂ ಬೀರಿದ್ದು, ಸೋಮವಾರ (ಮಾರ್ಚ್ 02) ಸೆನ್ಸೆಕ್ಸ್ ಮತ್ತು ನಿಫ್ಟಿ ತೀವ್ರ ಕುಸಿತದೊಂದಿಗೆ ವಹಿವಾಟು ಆರಂಭಿಸಿದವೆ,
ಇಂದು ಬೆಳಗ್ಗೆ 10.45ರ ಸುಮಾರಿಗೆ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 1,170 ಪಾಯಿಂಟ್‌ಗಳಷ್ಟು ಅಥವಾ ಶೇ.1.44ರಷ್ಟು ಕುಸಿದು 80,116.38 ಕ್ಕೆ ತಲುಪಿದರೆ, ನಿಫ್ಟಿ 50 ಕೂಡ ಶೇ. 1 ರಷ್ಟು ಅಂದರೆ, 354.35 ಪಾಯಿಂಟ್‌ಗಳಷ್ಟು ಅಥವಾ ಶೇ.1.41 ರಷ್ಟು ಇಳಿದು 24,824ಕ್ಕೆ ತಲುಪಿತು. ಸದ್ಯ ಮಾರುಕಟ್ಟೆಯ ಎಲ್ಲಾ ಸೆಕ್ಟರ್‌ಗಳೂ ಕುಸಿತಕಂಡಿದೆ.
ಬಿಎಸ್ಇಯಲ್ಲಿ ಸುಮಾರು 714 ಷೇರುಗಳು ಏರಿಕೆ ಕಂಡರೆ, 3,010 ಷೇರುಗಳು ಇಳಿಕೆ ಕಂಡಿವೆ ಮತ್ತು 164 ಷೇರುಗಳು ಯಾವುದೇ ಬದಲಾವಣೆ ಇಲ್ಲದೆ ಹಾಗೇ ಉಳಿದಿವೆ. ಇದರಿಂದ ಮಾರುಕಟ್ಟೆಯ ವಹಿವಾಟು ತೀವ್ರ ನಕಾರಾತ್ಮಕವಾಗಿದ್ದು, ಭಯದ ಮನೋಭಾವ ಹೆಚ್ಚಾಗಿದೆ. ಲೋಹಗಳನ್ನು ಹೊರತುಪಡಿಸಿ, ಇತರ ಎಲ್ಲಾ ಪ್ರಮುಖ ವಲಯಗಳು ನಷ್ಟವನ್ನು ಅನುಭವಿಸಿವೆ. ವಿಶಾಲವಾದ ಸ್ಮಾಲ್-ಕ್ಯಾಪ್ ಮತ್ತು ಮಿಡಲ್ - ಕ್ಯಾಪ್‌ಗಳು ತಲಾ 0.8% ರಷ್ಟು ಕುಸಿತಕಂಡಿವೆ.
ಹೂಡಿಕೆದಾರರ ನಷ್ಟ
ಬಿಎಸ್‌ಇ (BSE) ಪಟ್ಟಿಯಲ್ಲಿರುವ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವು ಒಂದೇ ದಿನದಲ್ಲಿ ಸುಮಾರು 8 ಲಕ್ಷ ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಿದೆ.
ಕುಸಿತಕ್ಕೆ ಕಾರಣವೇನು?
ಅಂದಹಾಗೆ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ಭವಿಸಿರುವ ಉದ್ವಿಗ್ನತೆ ಹಾಗೂ ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಭಾರಿ ಇಳಿಕೆ ಕಾಣುತ್ತಿವೆ. ಸೋಮವಾರ ಕಚ್ಚಾ ತೈಲವು ಶೇ.7 ಕ್ಕಿಂತ ಹೆಚ್ಚು ಏರಿಕೆಯಾಗಿ ತಿಂಗಳುಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ತಾರಕ್ಕೇರಿದೆ. ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೆನಿಯನ್ನು ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಕೊಂದ ನಂತರ ಇರಾನ್ ಪ್ರತೀಕಾರ ದಾಳಿಗಳು ನಡೆಸಿದ್ದು, ಇದರಿಂದ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಏರಿಕೆಯಾಗಿದೆ. ಇದರ ಪರಿಣಾಮ ಜಾಗತಿಕ ಮಾರುಕಟ್ಟೆಗಳ ಮೇಲೆ ಬೀರಿದೆ. ಅಲ್ಲದೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸತತವಾಗಿ ಷೇರುಗಳನ್ನು ಮಾರಾಟ ಮಾಡುತ್ತಿರುವುದು ಹಾಗೂ ರೂಪಾಯಿ ಮೌಲ್ಯದಲ್ಲಿನ ಇಳಿಕೆ ಕೂಡ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ, (ಏಜೆನ್ಸೀಸ್).