ಮಧ್ಯಪ್ರಾಚ್ಯದಲ್ಲಿ ಕದನ ಕಾರ್ಮೋಡ: ಈ ವಾರ ಚಿನ್ನದ ಬೆಲೆ ಏರಿಕೆಯಾಗುತ್ತಾ? ತಜ್ಞರ ಅಭಿಪ್ರಾಯವೇನು? Gold Price
- ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕವಿದ ಕದನ ಕಾರ್ಮೋಡ
- ಇರಾನ್ ಮೇಲೆ ಇಸ್ರೇಲ್-ಅಮರಿಕದಿಂದ ಜಂಟಿ ದಾಳಿ
- ಇರಾನ್‌ನಿಂದ ನಿರಂತರವಾಗಿ ಪ್ರತೀಕಾರದ ದಾಳಿ
- ಜಾಗತಿಕ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿನಲ್ಲಿ ಭಾರಿ ತಲ್ಲಣ
Gold Price : ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸಿರುವ ದಾಳಿಯಿಂದ ಹಾಗೂ ಪ್ರತೀಕಾರವಾಗಿ ಇರಾನ್ ನಿರಂತರವಾಗಿ ನಡೆಸುತ್ತಿರುವ ಕಾರ್ಯಾಚರಣೆಯಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕದನ ಕಾರ್ಮೋಡ ಕವಿದಿದೆ. ಒಂದೆಡೆ ಸಾವು-ನೋವುಗಳು ಸಂಭವಿಸುತ್ತಿದ್ದರೆ, ಇನ್ನೊಂದೆಡೆ ಜಾಗತಿಕ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿನಲ್ಲಿ ಭಾರಿ ತಲ್ಲಣ ಉಂಟಾಗಿದೆ.
ಇಸ್ರೇಲ್, ಅಮೆರಿಕ ಮತ್ತು ಇರಾನ್ ಸುತ್ತಲೂ ನಡೆಯುತ್ತಿರುವ ಈ ಆಘಾತಕಾರಿ ಬೆಳವಣಿಗೆಯಿಂದ ಈ ವಾರ ಚಿನ್ನದ ಬೆಲೆಯಲ್ಲಿ ಏರಿಳಿತ ಉಂಟಾಗುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ಪಂಡಿತರು ತಿಳಿಸಿದ್ದಾರೆ.
ಕಳೆದ ವಾರ, ಹೆಚ್ಚಿದ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಹೊಸ ವ್ಯಾಪಾರ ಅನಿಶ್ಚಿತತೆಯಿಂದಾಗಿ ಚಿನ್ನ ಮತ್ತು ಬೆಳ್ಳಿ ಮೂರು ವಾರಗಳ ಗರಿಷ್ಠ ಮಟ್ಟಕ್ಕೆ ಏರಿತು. ಅಲ್ಲದೆ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ಭಾರಿ ಸುಂಕಗಳನ್ನು ಯುಎಸ್ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ನಂತರವೂ ಬೆಲೆಗಳು ಗಗನಕ್ಕೇರಿದವು. ಇದೀಗ ಅಮೆರಿಕ-ಇರಾನ್ ಸಂಘರ್ಷದಿಂದಾಗಿ ಹಳದಿ ಲೋಹದ ಬೆಲೆಯಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆಗಳಿವೆ.
ತಮ್ಮ ಸುಪ್ರೀಂ ಲೀಡರ್ ಖಮೇನಿಯನ್ನು ಹತ್ಯೆ ಮಾಡಿದ ಬಳಿಕ ತುಂಬಾ ಆಕ್ರೋಶಗೊಂಡಿರುವ ಇರಾನ್, ನಿರಂತರವಾಗಿ ದಾಳಿ ಮಾಡುತ್ತಿದೆ. ಇಸ್ರೇಲ್ ಮಾತ್ರವಲ್ಲದೆ, ಅಮೆರಿಕದ ಮಿಲಿಟರಿ ನೆಲೆಗಳಿರುವ ಅರಬ್ ರಾಷ್ಟ್ರಗಳ ಮೇಲೂ ಇರಾನ್ ದಾಳಿ ಮಾಡುತ್ತಿದೆ. ಹೀಗಾಗಿ, ಜಾಗತಿಕವಾಗಿ ಭಾರಿ ಅನಿಶ್ಚಿತತೆ ಮುಂದುವರಿದಿದ್ದು, ಚಿನ್ನದ ಬೆಲೆಯಲ್ಲಿ ಏರಿಳಿತಗಳು ಉಂಟಾಗುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಬೆಳ್ಳಿ ಬೆಲೆ ಏರಿಕೆಯಲ್ಲಿ ಮಿತಿ
ಬೆಳ್ಳಿಯ ದಾಸ್ತಾನು ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಪೂರೈಕೆ ಕೊರತೆ ಉಂಟಾಗುತ್ತಿರುವುದು ಬೆಲೆ ಏರಿಕೆ ಸೂಚನೆಯಾಗಿದೆ. ಆದರೆ, ಫೆಡರಲ್ ರಿಸರ್ವ್ (ಅಮೆರಿಕದ ಕೇಂದ್ರ ಬ್ಯಾಂಕ್) ಬಡ್ಡಿ ದರಗಳನ್ನು ಇನ್ನಷ್ಟು ಕಾಲ ಹೆಚ್ಚಿನ ಮಟ್ಟದಲ್ಲೇ ಇರಿಸಿಕೊಳ್ಳುವ ನಿಲುವು ಹೊಂದಿರುವುದು ಮತ್ತು ಅಮೆರಿಕದ ಆರ್ಥಿಕತೆ ದೃಢವಾಗಿರುವುದರಿಂದ ಬೆಳ್ಳಿಯ ಬೆಲೆ ಏರಿಕೆಯು ಮಿತಿಯಲ್ಲಿರಲಿದೆ ಎನ್ನಲಾಗುತ್ತಿದೆ.
ಚಿನ್ನದ ಬೆಲೆಯಲ್ಲಿ ಏರಿಕೆ
ಇನ್ನು MCX ಗೋಲ್ಡ್ ದೈನಂದಿನ ಚಾರ್ಟ್‌ನಲ್ಲಿ ಬಲವಾದ ಏರಿಕೆಯ ಟ್ರೆಂಡ್‌ನಲ್ಲಿದೆ. ಚಿನ್ನದ ಬೆಲೆ ಅಪ್ಪರ್ ಬಾಲಿಂಜರ್ ಬ್ಯಾಂಡ್‌ಗೆ ಅಂಟಿಕೊಂಡು ಏರುತ್ತಿದ್ದು, ಇದು ಚಿನ್ನದ ಬೆಲೆಯಲ್ಲಿನ ನಿರಂತರ ಏರಿಕೆಯನ್ನು ಸೂಚಿಸುತ್ತದೆ. ಇತ್ತೀಚಿನ 1,71,800ರ ಸಮೀಪದ ಫಿಬೊನಾಚಿ ಎಕ್ಸ್‌ಟೆನ್ಷನ್ ಮಟ್ಟವನ್ನು ಮುರಿದು ಮುಂದುವರೆದಿದ್ದು, ಮುಂಬರುವ ದಿನಗಳಲ್ಲಿ 1,75,000 ರಿಂದ 1,78,000ಕ್ಕೆ ಏರಿಕೆಯ ಸಾಧ್ಯತೆ ಇದೆ. ಮಧ್ಯ ಬಾಲಿಂಜರ್ ಬ್ಯಾಂಡ್ ಮೇಲೆ ಸ್ಥಿರವಾಗಿ ಇರಿಸಿಕೊಂಡರೆ ಚಿನ್ನದ ಬೆಲೆ ಏರಿಕೆಯ ನಿಲುವು ಮುಂದುವರೆಯುತ್ತದೆ.
ಅಂದಹಾಗೆ, ಅಮೆರಿಕ ಅಥವಾ ಇರಾನ್‌ನಿಂದ ಯುದ್ಧ ತಿಳಿಯಾಗುವ ಯಾವುದೇ ಸಂಕೇತಗಳು ಅಥವಾ ಅಪ್‌ಡೇಟ್‌ಗಳು ಚಿನ್ನದ ಬೆಲೆಯಲ್ಲಿ ಹೆಚ್ಚಿನ ಅಸ್ಥಿರತೆ ಉಂಟುಮಾಡಬಹುದು. ಒಟ್ಟಾರೆಯಾಗಿ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು (ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ) ಸುರಕ್ಷಿತ ಆಸ್ತಿಯಾಗಿ ಗೋಲ್ಡ್‌ಗೆ ಬಲವಾದ ಬೆಂಬಲ ನೀಡುತ್ತಿವೆ. ಹೀಗಾಗಿ, ಬಹುತೇಕ ಮಂದಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದು, ಚಿನ್ನದ ಬೆಲೆ ಏರಿಕೆಯತ್ತ ಸಾಗಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ, (ಏಜೆನ್ಸೀಸ್).