ವಾಣಿಜ್ಯ

600ಕ್ಕೂ ಹೆಚ್ಚು ಅಂಶ ಕುಸಿತ ಕಂಡ ಸೆನ್ಸೆಕ್ಸ್, 11,000ಕ್ಕಿಂತಲೂ ಕೆಳಕ್ಕೆ ಜಾರಿದೆ ನಿಫ್ಟಿ

ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ)ನ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಆರಂಭಿಕ ವಹಿವಾಟಿನಲ್ಲಿ 600ಕ್ಕೂ ಹೆಚ್ಚು ಅಂಶ ಕುಸಿತ ಕಂಡರೆ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ 11,000ಕ್ಕಿಂತಲೂ ಕೆಳಕ್ಕೆ ಜಾರಿದೆ. ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ನಿಧಿ ಹೊರಹೋದ ಕಾರಣ ಈ ಕುಸಿತ ಉಂಟಾಗಿದೆ.

ಗುರುವಾರ ಬೆಳಗ್ಗೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 609.63 ಅಂಶ ಕುಸಿದಿದ್ದು, ಬಳಿಕ 571.26 ಅಂಶ ಇಳಿಕೆಯಲ್ಲಿ 37,097.16 ಅಂಶದಲ್ಲಿ ವಹಿವಾಟು ಮುಂದುವರಿಸಿದೆ. ಇದೇ ರೀತಿ ನಿಫ್ಟಿ 169.40 ಅಂಶ ಕುಸಿದು 10,962.45ರಲ್ಲಿ ವಹಿವಾಟು ಮುಂದುವರಿಸಿದೆ. ಸೆನ್ಸೆಕ್ಟ್ ಪಟ್ಟಿಯಲ್ಲಿರುವ ಎಲ್ಲ ಷೇರುಗಳೂ ನಷ್ಟದಲ್ಲೇ ವಹಿವಾಟು ಮುಂದುವರಿಸಿವೆ. ಈ ಪೈಕಿ ಎಂಆ್ಯಂಡ್ಎಂ, ಬಜಾಜ್ ಫೈನಾನ್ಸ್, ಇಂಡಸ್​ ಇಂಡ್ ಬ್ಯಾಂಕ್, ಮಾರುತಿ, ಏಕ್ಸಿಸ್ ಬ್ಯಾಂಕ್​, ಬಜಾಜ್ ಫಿನ್​ಸರ್ವ್​, ಐಸಿಐಸಿಐ ಬ್ಯಾಂಕ್ ಷೇರುಗಳು ಶೇಕಡ 3ಕ್ಕೂ ಹೆಚ್ಚು ನಷ್ಟ ಅನುಭವಿಸಿವೆ.

ನಿನ್ನೆಯ ಸೆಷನ್​ನಲ್ಲಿ ಸೆನ್ಸೆಕ್ಸ್ 65.66 ಅಂಶ ಕುಸಿದು 37,668.42ರಲ್ಲೂ, ನಿಫ್ಟಿ 21.80 ಅಂಶ ಕುಸಿದು 11,131.85ರಲ್ಲಿ ವಹಿವಾಟು ಮುಗಿಸಿವೆ. ವಿನಿಮಯ ಡೇಟಾ ಪರಕಾರ, ನಿನ್ನೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಒಟ್ಟು 3,912.44 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. (ಏಜೆನ್ಸೀಸ್)