ಮುಂಬೈ: ಕರೊನಾ ಸೋಂಕು ವ್ಯಾಪಕಾಗಿ ಹರಡುತ್ತಿರುವ ಕಾರಣ ತಲ್ಲಣಗೊಂಡಿರುವ ಷೇರುಪೇಟೆ ಕುಸಿಯುತ್ತ ಸಾಗಿತ್ತು. ನಿನ್ನೆ ಸ್ವಲ್ಪ ಚೇತರಿಕೆ ತೋರಿದ್ದ ಭಾರತೀಯ ಷೇರುಪೇಟೆ ಇಂದು ಕೂಡ ಆರಂಭಿಕ ವಹಿವಾಟಿನಲ್ಲಿ ಏರಿಕೆ ದಾಖಲಿಸಿದೆ. ಗುರುವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಲೇ ಬಾಂಬೆ ಸ್ಟಾಕ್ ಎಕ್ಸ್ಚೇಂಜ್(ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ 700ಕ್ಕೂ ಹೆಚ್ಚು ಅಂಶ ಏರಿಕೆ ತೋರಿದರೆ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ನಿಫ್ಟಿ) ಕೂಡ 150ಕ್ಕೂ ಹೆಚ್ಚು ಅಂಶ ಏರಿಕೆ ದಾಖಲಿಸಿದೆ.
ಮೂವತ್ತು ಷೇರುಗಳ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 713.76 ಅಂಶ(2.30%) ಏರಿಕೆ ತೋರಿದ್ದು 29,249.54ರಲ್ಲಿ ವಹಿವಾಟು ಶುರುಮಾಡಿಕೊಂಡಿತ್ತು. ಇದೇ ರೀತಿ 50 ಷೇರುಗಳ ನಿಫ್ಟಿ 167.95 ಅಂಶ (2.02%) ಏರಿಕೆ ದಾಖಲಿಸಿ 8,485.80 ಅಂಶದಲ್ಲಿ ವಹಿವಾಟು ಆರಂಭಿಸಿದೆ.
ಸೆನ್ಸೆಕ್ಸ್ ಪಟ್ಟಿಯಲ್ಲಿ ಇಂಡಸ್ಇಂಡ್ ಬ್ಯಾಂಕ್ ಷೇರು ಶೇಕಡ 20 ಏರಿಕೆ ದಾಖಲಿಸಿದರೆ, ಏಕ್ಸಿಸ್ ಬ್ಯಾಂಕ್, ಬಜಾಜ್ ಆಟೋ, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ, ಬಜಾಜ್ ಫೈನಾನ್ಸ್ಗಳ ಷೇರುಗಳ ಮೌಲ್ಯದಲ್ಲಿ ಏರಿಕೆ ದಾಖಲಾಗಿದೆ. ಇದೇ ವೇಳೆ ಐಟಿಸಿ, ಮಾರುತಿ, ಒಎನ್ಜಿಸಿ ಷೇರುಗಳು ಗರಿಷ್ಠ ಕುಸಿತ ಕಂಡಿವೆ.
ಹಿಂದಿನ ಸೆಷನ್ನಲ್ಲಿ ಸೆನ್ಸೆಕ್ಸ್ 1,861.75 ಅಂಶ ಏರಿಕೆ ದಾಖಲಿಸಿ 28,535.78 ಅಂಶದಲ್ಲಿ ವಹಿವಾಟು ಮುಗಿಸಿತ್ತು. ಇದೇ ರೀತಿ ನಿಫ್ಟಿ 516.80 ಅಂಶ ಏರಿ 8.,317.85ರಲ್ಲಿ ವಹಿವಾಟು ಕೊನೆಗೊಳಿಸಿತ್ತು. ಇತ್ತೀಚಿನ ದಿನಗಳ ವಹಿವಾಟಿನಲ್ಲಿ ಇದೇ ಒಂದು ದಿನದ ಮಟ್ಟಿನ ಗರಿಷ್ಠ ಏರಿಕೆಯಾಗಿ ಇದು ಇತಿಹಾಸದ ಪುಟ ಸೇರಿದೆ.
ಹೂಡಿಕೆದಾರರು, ಟ್ರೇಡರ್ಸ್ ಗಳು ದೇಶದ 21ದಿನಗಳ ಲಾಕ್ಡೌನ್ ಪರಿಣಾಮ ಆರ್ಥಿಕತೆ ಮೇಲೆ ಹೇಗಾಗಲಿದೆ ಎಂಬ ಬಗ್ಗೆ ಕುತೂಹಲಿಗಳಾಗಿ ವೀಕ್ಷಿಸುತ್ತಿದ್ದಾರೆ. ಅಲ್ಲದೆ, ಎಲ್ಲರ ಕಂಗಳೂ ಈಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಡೆಯ ಮೇಲಿದೆ. ಆರ್ಥಿಕ ಪ್ಯಾಕೇಜನ್ನು ಅವರು ಘೋಷಿಸಬಹುದೆಂಬ ನಿರೀಕ್ಷೆಯೂ ಇದರಲ್ಲಿ ಅಡಗಿದೆ. (ಏಜೆನ್ಸೀಸ್)