ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಸೋಮವಾರದ ವಹಿವಾಟಿನ ಅಂತ್ಯಕ್ಕೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ 137 ಅಂಶ ಚೇತರಿಕೆ ತೋರಿದ್ದು, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್(ಎನ್ಎಸ್ಇ) ಸೂಚ್ಯಂಕ ನಿಫ್ಟಿ ಮತ್ತೆ 11,700ಕ್ಕೆ ಏರಿದೆ.
ಎಚ್ಯುಎಲ್, ಐಸಿಐಸಿಐ ಬ್ಯಾಂಕ್, ಏಷ್ಯನ್ ಪೇಂಟ್ಸ್ ಷೇರುಗಳ ಕಾರಣ ಪೇಟೆಯಲ್ಲಿ ಏರಿಕೆ ದಾಖಲಾಗಿದೆ.ಕೇಂದ್ರ ಬಜೆಟ್ ಮಂಡನೆ ಬಳಿಕ ಏರಿಳಿತದ ಹಾದಿಯಲ್ಲಿದ್ದ ಷೇರು ಸೂಚ್ಯಂಕಗಳ ಪೈಕಿ ಸೆನ್ಸೆಕ್ಸ್ 136.78 ಅಂಶ (0.34%) ಏರಿಕೆ ದಾಖಲಿಸಿ 40,014.90 ಅಂಶದಲ್ಲೂ, ನಿಫ್ಟಿ 46.05 ಅಂಶ (0.39%) ಏರಿಕೆಯೊಂದಿಗೆ 11,707.90 ಅಂಶದಲ್ಲೂ ದಿನದ ವಹಿವಾಟು ಮುಗಿಸಿವೆ.
ಸೆನ್ಸೆಕ್ಸ್ ಪಟ್ಟಿಯಲ್ಲಿ ಏಷ್ಯನ್ ಪೇಂಟ್ಸ್ ಷೇರುಗಳು ಟಾಪ್ ಗೇನರ್ ಆಗಿದ್ದು ಶೇಕಡ 6.32 ಏರಿಕೆ ದಾಖಲಿಸಿವೆ. ಇದರ ಬೆನ್ನಿಗೆ, ನೆಸ್ಸ್ಲೆ ಇಂಡಿಯಾ, ಎಚ್ಯುಎಲ್, ಬಜಾಜ್ ಆಟೋ, ಇಂಡಸ್ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಮಾರುತಿ, ಪವರ್ ಗ್ರಿಡ್ ಷೇರುಗಳು ಏರಿಕೆ ದಾಖಲಿಸಿವೆ. ಇನ್ನೊಂದೆಡೆ, ಐಟಿಸಿ ಶೇಕಡ 5.09 ಇಳಿಕೆ ದಾಖಲಿಸಿದರೆ, ಟಿಸಿಎಸ್, ಎಚ್ಸಿಎಲ್ ಟೆಕ್, ಹೀರೋ ಮೋಟೋ ಕಾರ್ಪ್, ಟೆಕ್ ಮಹೀಂದ್ರಾ ಷೇರುಗಳು ನಷ್ಟ ಅನುಭವಿಸಿವೆ.
ಇದೇ ವೇಳೆ ಕರೆನ್ಸಿ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಸೋಮವಾರ ಅಮೆರಿಕನ್ ಡಾಲರ್ ಎದುರು 17 ಇಳಿಕೆ ಕಂಡಿದ್ದು 71.49ರ ದರದಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. (ಏಜೆನ್ಸೀಸ್)