ಮುಂಬೈ: ಭಾರತೀಯ ಷೇರುಪೇಟೆಯ ಬಾಂಬೆ ಸ್ಟಾಕ್ ಎಕ್ಸ್ಚೇಂಜ್(ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರದ ವಹಿವಾಟಿನಲ್ಲಿ 1,400ಕ್ಕೂ ಹೆಚ್ಚು ಅಂಶ ಕುಸಿತ ಕಂಡಿದ್ದರೂ, ಸೋಮವಾರದ ವಹಿವಾಟಿನಲ್ಲಿ ಮತ್ತೆ 750 ಅಂಶ ಪುಟಿದೇಳುವ ಮೂಲಕ ಆರಂಭಿಸಿದೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ಸೂಚ್ಯಂಕ ನಿಫ್ಟಿ ಕೂಡ ಉತ್ತಮ ಆರಂಭ ದಾಖಲಿಸಿದ್ದು 11,300ರ ಗಡಿ ದಾಟಿದೆ.
ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಷೇರುಗಳು ಮತ್ತೆ ಏರಿಕೆ ದಾಖಲಿಸಿದ ಪರಿಣಾಮ ಇದು. ಜಾಗತಿಕ ಹೂಡಿಕೆದಾರರು ಕಳೆದ ವಾರದ ಸೆಲ್ಆಫ್ ಕೈಬಿಟ್ಟು ಮತ್ತೆ ಬಾಟಂ-ಫಿಶಿಂಗ್(ಪರಿಣತ ಹೂಡಿಕೆದಾರರು ರಿಸ್ಕ್ ತೆಗೆದುಕೊಂಡು ಮಾಡುವ ಹೂಡಿಕೆ) ಶುರುಮಾಡಿದ್ದೇ ಇದಕ್ಕೆ ಕಾರಣ.
ಸೋಮವಾರದ ವಹಿವಾಟಿನ ಆರಂಭಕ್ಕೆ ಸೆನ್ಸೆಕ್ಸ್ 785 ಅಂಶ ಏರಿಕೆ ದಾಖಲಿಸಿ, ವಹಿವಾಟಿನ ವೇಳೆ 449.56 ಅಂಶ(1.17%) ಏರಿಕೆ ಕಾಯ್ದುಕೊಂಡು 38,746.85ರಲ್ಲಿ ಮುನ್ನಡೆದಿದೆ. ಇದೇ ರೀತಿ, ನಿರ್ಫಟಿ 120.05 ಅಂಶ (ಶೇಕಡ 1.07) ಏರಿಕೆ ದಾಖಲಿಸಿ 11,321.80ರಲ್ಲಿ ವಹಿವಾಟು ಮುಂದುವರಿಸಿದೆ.
ಸೆನ್ಸೆಕ್ಸ್ ಪಟ್ಟಿಯಲ್ಲಿ ಐಸಿಐಸಿಐ ಬ್ಯಾಂಕ್, ಎಚ್ಸಿಎಲ್ ಟೆಕ್, ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್, ಒಎನ್ಜಿಸಿ, ಟೈಟಾನ್, ಇನ್ಫೋಸಿಸ್ ಷೇರುಗಳು ಶೇಕಡ 3ರ ತನಕ ಏರಿಕೆ ದಾಖಲಿಸಿವೆ. ಇನ್ನೊಂದೆಡೆ ಕೊಟಾಕ್ ಬ್ಯಾಂಕ್, ಎಂಆ್ಯಂಡ್ಎಂ, ಟೆಕ್ ಮಹಿಂದ್ರಾ ಷೇರುಗಳು ನಷ್ಟ ಅನುಭವಿಸಿವೆ.
ಈ ಹಿಂದಿನ ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ ತನ್ನ ಇತಿಹಾಸದಲ್ಲಿ ಎರಡನೇ ಅತಿದೊಡ್ಡ ಕುಸಿತವನ್ನು ಕಂಡಿತ್ತು. ಕೊರೊನಾ ವೈರಾಣು ಸೋಂಕಿನ ಪರಿಣಾಮ ಪೇಟೆಯಲ್ಲಿ ಗ್ಲೋಬಲ್ ಸೆಲ್ಆಫ್ ನಡೆಯಿತು. ಇದರಿಂದಾಗಿ ಭಾರತೀಯ ಷೇರುಪೇಟೆಯಲ್ಲಿ ಸೆನ್ಸೆಕ್ಸ್ 1,448.37 ಅಂಶ ಅಥವಾ ಶೇಕಡ 3.64 ನಷ್ಟವಾಗಿದ್ದು, 38,297.29ರಲ್ಲೂ ನಿಫ್ಟಿ 431.55 (3.71%) ಅಂಶ ನಷ್ಟವಾಗಿ 11, 201.75ರಲ್ಲಿ ವಹಿವಾಟು ಮುಗಿಸಿದ್ದವು.
ಷೇರುಪೇಟೆ ದತ್ತಾಂಶ ಪ್ರಕಾರ ಶುಕ್ರವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1,428.74 ಕೋಟಿ ರೂಪಾಯಿ ಮೌಲ್ಯದ ಷೇರು ಮಾರಾಟ ಮಾಡಿದರು. ಇದೇ ವೇಳೆ, ದೇಶೀ ಸಾಂಸ್ಥಿಕ ಹೂಡಿಕೆದಾರರು 7,621.16 ಕೋಟಿ ರೂಪಾಯಿ ಮೌಲ್ಯದ ಷೇರು ಖರೀದಿಸಿದ್ದಾರೆ. (ಏಜೆನ್ಸೀಸ್)