ಮುಂಬೈ: ಸತತ ನಾಲ್ಕನೇ ದಿನವೂ ಏರಿಕೆಯನ್ನು ಮುಂದುವರಿಸಿದ ಬಾರತೀಯ ಷೇರುಪೇಟೆ ಸೂಚ್ಯಂಕಗಳು, ದಿನದ ವಹಿವಾಟನ್ನು ಕೂಡ ಏರಿಕೆಯೊಂದಿಗೇ ಮುಗಿಸಿವೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗುರುವಾರ ವಿತ್ತೀಯ ನೀತಿ ಪ್ರಕಟಿಸಿದ್ದು, ಇದು ಕೂಡ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ದಿನದ ವಹಿವಾಟಿನ ಅಂತ್ಯಕ್ಕೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್(ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ 163 ಅಂಶ ಏರಿಕೆಯೊಂಧಿಗೆ ವಹಿವಾಟು ಮುಗಿಸಿದೆ.
2019-20ನೇ ಸಾಲಿನ ಆರನೇ ದ್ವೈಮಾಸಿಕ ವಿತ್ತೀಯ ನೀತಿ ಪರಾಮರ್ಶೆಯಲ್ಲಿ ಆರ್ಬಿಐ, ಜಿಡಿಪಿ ಬೆಳವಣಿಗೆ ದರವನ್ನು ಈ ಹಣಕಾಸು ವರ್ಷಕ್ಕೆ ಶೇಕಡ 5 ಎಂಬುದನ್ನು ಹಾಗೆಯೇ ಉಳಿಸಕೊಂಡಿದೆ. ಮುಂದಿನ ವರ್ಷಕ್ಕೆ ಶೇಕಡ 6 ಎಂದು ನಿಗದಿಪಡಿಸಿದೆ. ಈ ಬೆಳವಣಿಗೆ ಕಾರಣ, ಷೇರುಪೇಟೆ ಏರಿಕೆ ಮುಂದುವರಿಸಿದ್ದು, ಸೆನ್ಸೆಕ್ಸ್ ದಿನದ ವಹಿವಾಟಿನ ಅಂತ್ಯಕ್ಕೆ 163.37 ಅಂಶ (0.40%) ಏರಿಕೆಯೊಂದಿಗೆ 41,306.03 ಅಂಶ ತಲುಪಿದೆ. ಇದೇ ವೇಳೆ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ಸೂಚ್ಯಂಕ ನಿಫ್ಟಿ 48.80 ಅಂಶ(0.40%) ಏರಿಕೆಯೊಂದಿಗೆ 12,137.95ರಲ್ಲಿ ವಹಿವಾಟು ಕೊನೆಗೊಳಿಸಿದೆ.
ಸೆನ್ಸೆಕ್ಸ್ ಪಟ್ಟಿಯಲ್ಲಿ ಇಂಡಸ್ಇಂಡ್ ಬ್ಯಾಂಕ್ ಷೇರುಗಳು ಶೇಕಡ 4ಕ್ಕೂ ಹೆಚ್ಚು ಏರಿಕೆ ದಾಖಲಿಸಿದ್ದು, ಎಸ್ಬಿಐ, ಬಜಾಜ್ ಫೈನಾನ್ಸ್, ಭಾರ್ತಿ ಏರ್ಟೆಲ್, ಏಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ, ಎಚ್ಡಿಎಫ್ಸಿ, ಪವರ್ ಗ್ರಿಡ್ ಷೇರುಗಳು ಲಾಭಗಳಿಸಿವೆ.
ಇದೇ ವೇಳೆ, ಟೈಟಾನ್, ಇನ್ಫೋಸಿಸ್, ಐಟಿಸಿ, ಕೊಟಾಕ್ ಬ್ಯಾಂಕ್ ಏಷ್ಯನ್ ಪೇಂಟ್ಸ್ ಷೇರುಗಳು ನಷ್ಟ ಅನುಭವಿಸಿವೆ. ರೆಪೋದರಕ್ಕೆ ಸ್ಪಂದಿಸುವ ಹಣಕಾಸು ಮತ್ತು ಬ್ಯಾಂಕಿಂಗ್ ಷೇರುಗಳು ಬಿಎಸ್ಇ ಬ್ಯಾಂಕೆಕ್ಸ್ನಲ್ಲಿ ಶೇಕಡ 1.21 ಏರಿಕೆ ದಾಖಲಿಸಿವೆ. ಆದಾಗ್ಯೂ ರಿಯಾಲ್ಟಿ ಷೇರುಗಳು ನಷ್ಟ ಅನುಭವಿಸಿವೆ. (ಏಜೆನ್ಸೀಸ್)