ಮುಂಬೈ: ಕಳೆದ ಆರು ದಿನಗಳ ಅವಧಿಯಲ್ಲಿ ನಿರಂತರ ಕುಸಿತ ಕಾಣುತ್ತಲೇ ಬಂದಿರುವ ಭಾರತೀಯ ಷೇರುಪೇಟೆಯಲ್ಲಿ ಶುಕ್ರವಾರ ಕರಡಿ ಕುಣಿತ ಜೋರಾಗಿ ಬ್ಲಡ್ ಬಾತ್ ಕಾಣಿಸಿಕೊಂಡಿತ್ತು. ಜಾಗತಿಕ ಮಟ್ಟದ ಟ್ರೆಂಡ್ ಇಲ್ಲೂ ಅನುರಣಿಸಿದ್ದು, ಕೊರೊನಾ ವೈರಸ್ ಸೋಂಕಿನ ಭೀತಿ ಪೇಟೆಯನ್ನು ತಲ್ಲಣಗೊಳಿಸಿದೆ. ಚೀನಾದ ಈ ಸೋಂಕು ಜಾಗತಿಕವಾಗಿ 83,000ಕ್ಕೂ ಹೆಚ್ಚು ಜನರನ್ನು ಕಾಡಿದೆ.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್(ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ ಒಂದೇ ದಿನ 1,448 ಅಂಶ ಕುಸಿತ ಕಂಡಿದೆ. ಇಂಟ್ರಾ ಡೇ ವಹಿವಾಟಿನಲ್ಲಿ ಗರಿಷ್ಠ 1,525 ಅಂಶ ಕುಸಿತ ಕಂಡ ಸೆನ್ಸೆಕ್ಸ್, ಅಲ್ಪ ಚೇತರಿಕೆ ತೋರಿ ಕೊನೆಗೆ ಶೇಕಡ 3.64 ಅಥವಾ 1,448.37 ಅಂಶ ಕುಸಿತದೊಂದಿಗೆ ದಿನದ ವಹಿವಾಟನ್ನು 38,297.29ರಲ್ಲಿ ಕೊನೆಗೊಳಿಸಿದೆ. ಇದೇ ರೀತಿ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ಸೂಚ್ಯಂಕ ನಿಫ್ಟಿ 431.55 ಅಂಶ ಅಥವಾ ಶೇಕಡ 3.71 ಕುಸಿತ ಕಂಡು 11,201.75ರಲ್ಲಿ ವಹಿವಾಟು ಮುಗಿಸಿದೆ.
ಸೆನ್ಸೆಕ್ಸ್ ಪಟ್ಟಿಯಲ್ಲಿ ಟೆಕ್ ಮಹಿಂದ್ರಾ ಗರಿಷ್ಠ ನಷ್ಟ ಅನುಭವಿಸಿದೆ. ಟಾಟಾ ಸ್ಟೀಲ್, ಮಹಿಂದ್ರಾ ಆ್ಯಂಡ್ ಮಹಿಂದ್ರಾ, ಎಚ್ಸಿಎಲ್ ಟೆಕ್, ಇನ್ಫೋಸಿಸ್, ಎಸ್ಬಿಐ, ಬಜಾಜ್ ಫೈನಾನ್ಸ್ ಷೇರುಗಳು ನಷ್ಟದ ಯಾದಿಯಲ್ಲಿ ನಂತರದ ಸ್ಥಾನಗಳಲ್ಲಿವೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈ ವಾರದ ಅವಧಿಯಲ್ಲಿ ಅಂದಾಜು 9,389 ಕೋಟಿ ರೂಪಾಯಿ ಮೌಲ್ಯದ ಷೇರು ಮಾರಾಟ ಮಾಡಿದ್ದಾರೆ. ಇದು ಕೂಡ ಬ್ಲಡ್ಬಾತ್ಗೆ ಕಾರಣ ಎಂದು ಪರಿಣತರು ವಿಶ್ಲೇಷಿಸಿದ್ದಾರೆ. ಇನ್ನು, ಶಾಂಘೈ, ಹಾಂಕಾಂಗ್, ಸಿಯೋಲ್ ಮತ್ತು ಟೋಕಿಯೋಗಳ ಮಾರುಕಟ್ಟೆ ಕೂಡ ಶೇಕಡ 3.71ರಷ್ಟು ನಷ್ಟ ಅನುಭವಿಸಿವೆ. ಯುರೋಪ್ನ ಷೇರುಪೇಟೆ ಶುಕ್ರವಾರ ಬೆಳಗ್ಗೆ ವಹಿವಾಟಿನಲ್ಲಿ ಶೇಕಡ 4 ನಷ್ಟ ಅನುಭವಿಸಿದೆ. ವಾಲ್ಸ್ಟ್ರೀಟ್ನ ಓವರ್ನೈಟ್ ಟ್ರೇಡ್ನಲ್ಲಿ ದ ಡೌ ಜೋನ್ಸ್ ಇಂಡಸ್ಟ್ರಿಯಲ್ ಆ್ಯವರೇಜ್ 1,190.95 ಅಂಶ ಒಂದೇ ದಿನ ಕುಸಿತ ಕಂಡು ದಾಖಲೆ ಬರೆದಿದೆ.
ಕರೆನ್ಸಿ ಮಾರುಕಟ್ಟೆಯಲ್ಲಿ ಇಂಟ್ರಾ ಡೇ ವಹಿವಾಟಿನ ವೇಳೆ ಭಾರತೀಯ ರೂಪಾಯಿ ಮೌಲ್ಯ ಅಮೆರಿಕದ ಡಾಲರ್ ಎದುರು 55 ಪೈಸೆ ಕುಸಿತ ಕಂಡು 72.16ರಲ್ಲಿ ವಹಿವಾಟು ಮುಂದುವರಿಸಿದೆ. (ಏಜೆನ್ಸೀಸ್)