ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ, ಸಂಕಷ್ಟಕೀಡಾಗಿರುವ ಯಸ್ ಬ್ಯಾಂಕ್ನಲ್ಲಿ ಹೂಡಿಕೆ ಮಾಡುವ ಪ್ರಸ್ತಾವನೆಗೆ ಭಾರತೀಯ ಸ್ಟೇಟ್ ಬ್ಯಾಂಕ್ನ ಆಡಳಿತ ಮಂಡಳಿ ತಾತ್ತ್ವಿಕ ಒಪ್ಪಿಗೆ ನೀಡಿದೆ. ಗುರುವಾರ ಈ ಬಗ್ಗೆ ಕ್ಷಿಪ್ರ ಸಭೆ ನಡೆಸಿದ ಆಡಳಿತ ಮಂಡಳಿ, ತನ್ನ ನಿರ್ಧಾರವನ್ನು ಸೆಬಿಗೂ ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಸಂಕಷ್ಟಕ್ಕೀಡಾಗಿರುವ ಯೆಸ್ ಬ್ಯಾಂಕನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಒಂದು ತಿಂಗಳ ಮಟ್ಟಿಗೆ ಯೆಸ್ ಬ್ಯಾಂಕ್ ಗ್ರಾಹಕರು ತಮ್ಮ ಖಾತೆಯಿಂದ ಹಣ ವಿತ್ಡ್ರಾ ಮಾಡುವಾಗ ಗರಿಷ್ಠ ಮಿತಿ 50,000 ರೂಪಾಯಿಯನ್ನು ಆರ್ಬಿಐ ನಿಗದಿ ಪಡಿಸಿದೆ. ಎಸ್ಬಿಐ ಆಡಳಿತ ಮಂಡಳಿ ಸಭೆಯಲ್ಲಿ ಯೆಸ್ ಬ್ಯಾಂಕ್ನಲ್ಲಿ ಹೂಡಿಕೆಗೆ ಇರುವ ಅವಕಾಶದ ಬಗ್ಗೆ ವಿಸ್ತೃತವಾದ ಚರ್ಚೆ ನಡೆದಿದೆ. ಸದ್ಯದ ವರದಿ ಪ್ರಕಾರ, ಎಸ್ಬಿಐ, ಎಲ್ಐಸಿ ಕಂಪನಿಗಳು ಒಟ್ಟಾಗಿ ಯೆಸ್ ಬ್ಯಾಂಕ್ನ ಶೇಕಡ 49 ಪಾಲುದಾರಿಕೆ ಹೊಂದುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿ ಅವುಗಳಿಗೆ ರವಾನಿಸಿದೆ.
ಈ ವರ್ಷ ಆರಂಭದಲ್ಲಿ ದಾವೋಸ್ನ ಶೃಂಗದಲ್ಲಿ ಎಸ್ಬಿಐ ಚೇರ್ಮನ್ ರಜನೀಶ್ ಕುಮಾರ್ ಮಾತನಾಡಿದ ವೇಳೆ, ಯೆಸ್ ಬ್ಯಾಂಕ್ನಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ 2 ಲಕ್ಷ ಕೋಟಿ ರೂಪಾಯಿಗಳ ಠೇವಣಿ ಇದ್ದು, ಅದು ನಷ್ಟಕ್ಕೀಡಾಗಲು ಬಿಡುವುದಿಲ್ಲ. ಅದರ ಹೂಡಿಕೆ ಟೆಕ್ನಾಲಜಿ ಚೆನ್ನಾಗಿದ್ದು, ಬ್ರಾಂಡ್ಗೂ ಉತ್ತಮ ಹೆಸರು ಇದೆ ಎಂದು ಹೇಳಿದ್ದರು. (ಏಜೆನ್ಸೀಸ್)