ವಾಣಿಜ್ಯ

10 ವರ್ಷಗಳ ನಂತರದ 1 ಕೋಟಿ ರೂಪಾಯಿಗಿಂತ ಇಂದಿನ 50 ಲಕ್ಷವೇ ಹೆಚ್ಚಾ?...ಲೆಕ್ಕ ಹಾಕುವುದು ಹೇಗೆ..? ಹಣದುಬ್ಬರ ತೆರೆದಿಟ್ಟ ಅಚ್ಚರಿಯ ಸತ್ಯ ಹೀಗಿದೆ! | Inflation Impact

Inflation Impact: ನಾವು ಪ್ರತಿದಿನ ದುಡಿದು ಹಣ ಉಳಿಸುತ್ತೇವೆ. ಆದರೆ ನಾವು ಉಳಿಸಿದ ಹಣವು ಭವಿಷ್ಯದಲ್ಲೂ ಅದೇ ಮೌಲ್ಯವನ್ನು ಹೊಂದಿರುತ್ತದೆಯೇ..? ಖಂಡಿತ ಇಲ್ಲ.

Inflation Impact: ನಾವು ಪ್ರತಿದಿನ ದುಡಿದು ಹಣ ಉಳಿಸುತ್ತೇವೆ. ಆದರೆ ನಾವು ಉಳಿಸಿದ ಹಣವು ಭವಿಷ್ಯದಲ್ಲೂ ಅದೇ ಮೌಲ್ಯವನ್ನು ಹೊಂದಿರುತ್ತದೆಯೇ..? ಖಂಡಿತ ಇಲ್ಲ. ಅದಕ್ಕೆ ಪ್ರಮುಖ ಕಾರಣ ಹಣದುಬ್ಬರ. ದಿನಸಿ ಪದಾರ್ಥಗಳಿಂದ ಹಿಡಿದು ಶಿಕ್ಷಣ, ಆರೋಗ್ಯ ಮತ್ತು ಗೃಹ ನಿರ್ಮಾಣದವರೆಗೂ ಎಲ್ಲ ವೆಚ್ಚಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಈ ಬೆಲೆ ಏರಿಕೆಯು ನಮ್ಮ ಹಣದ ಕೊಳ್ಳುವ ಶಕ್ತಿಯನ್ನು ದಿನದಿಂದ ದಿನಕ್ಕೆ ಕ್ಷೀಣಿಸುವಂತೆ ಮಾಡುತ್ತದೆ.

ಸಾಮಾನ್ಯವಾಗಿ ಹೂಡಿಕೆ ಅಥವಾ ನಿವೃತ್ತಿ ಜೀವನಕ್ಕಾಗಿ ಯೋಜನೆ ರೂಪಿಸುವಾಗ ಅನೇಕರು ತೆರಿಗೆಯ ಬಗ್ಗೆ ಮಾತ್ರ ಯೋಚಿಸುತ್ತಾರೆ. ಆದರೆ ಹಣದುಬ್ಬರವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ಮರೆಯುತ್ತಾರೆ. ಹೀಗೆ ಮಾಡಿದಾಗ ಕಾಗದದ ಮೇಲೆ ಅಥವಾ ಬ್ಯಾಂಕ್ ಖಾತೆಯಲ್ಲಿ ನಮ್ಮ ಹೂಡಿಕೆಯ ಮೊತ್ತ ದೊಡ್ಡದಾಗಿ ಕಂಡರೂ, ವಾಸ್ತವದಲ್ಲಿ ಅದರ ಕೊಳ್ಳುವ ಶಕ್ತಿ ಅತ್ಯಂತ ಕಡಿಮೆಯಾಗಿರುತ್ತದೆ.

1 ಕೋಟಿ ರೂ ನೈಜ ಮೌಲ್ಯದ ಲೆಕ್ಕಾಚಾರ

ಇಂದಿನ ದಿನಗಳಲ್ಲಿ 50 ಲಕ್ಷ ರೂಪಾಯಿಂದ 1 ಕೋಟಿ ರೂ. ಉಳಿತಾಯ ಮಾಡುವುದು ಪ್ರತಿಯೊಬ್ಬರ ಪ್ರಮುಖ ಆರ್ಥಿಕ ಗುರಿಯಾಗಿರುತ್ತದೆ. ಆದರೆ ಕಾಲ ಕ್ರಮೇಣ ಹಣದುಬ್ಬರ ಹೆಚ್ಚಿದಂತೆ ಈ ಗುರಿಗಳ ಮೌಲ್ಯ ಬದಲಾಗುತ್ತಾ ಹೋಗುತ್ತದೆ. ಉದಾಹರಣೆಗೆ, ಪ್ರಸ್ತುತ 6% ವಾರ್ಷಿಕ ಹಣದುಬ್ಬರ ದರವನ್ನು ಆಧಾರವಾಗಿಟ್ಟುಕೊಂಡು ಲೆಕ್ಕಾಚಾರ ಮಾಡಿದರೆ.

  • ಇಂದಿನ ಮೌಲ್ಯ: 1 ಕೋಟಿ ರೂ

  • ಸಮಯ: 10 ವರ್ಷಗಳು

  • ವಾರ್ಷಿಕ ಹಣದುಬ್ಬರ ದರ: 6%

  • ಭವಿಷ್ಯದಲ್ಲಿ ಬೇಕಾಗುವ ಮೊತ್ತ: 1.79 ಕೋಟಿ

  • 10 ವರ್ಷಗಳ ನಂತರ 1 ಕೋಟಿಯ ಇಂದಿನ ಮೌಲ್ಯ: 55.84 ಲಕ್ಷ ರೂ

ಇದರರ್ಥ, ಇಂದಿನ 55.84 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಖರೀದಿಸಲು 10 ವರ್ಷಗಳ ನಂತರ ನಮಗೆ ಬರೊಬ್ಬರಿ 1 ಕೋಟಿ ರೂ ಹಣ ಬೇಕಾಗುತ್ತದೆ. ಅಂದರೆ ಇಂದಿನ 1 ಕೋಟಿ ರೂಪಾಯಿಯ ಕೊಳ್ಳುವ ಶಕ್ತಿ 10 ವರ್ಷಗಳಲ್ಲಿ ಸುಮಾರು ಅರ್ಧದಷ್ಟು ಕುಸಿಯುತ್ತದೆ.

ಇದೇ ರೀತಿ, 15 ವರ್ಷಗಳ ನಂತರ ಲೆಕ್ಕಾಚಾರ ಮಾಡಿದರೆ

  • ಸಮಯ: 15 ವರ್ಷಗಳು

  • ವಾರ್ಷಿಕ ಹಣದುಬ್ಬರ ದರ: 6%

  • 15 ವರ್ಷಗಳ ನಂತರ 1 ಕೋಟಿ ರೂ ಇಂದಿನ ಮೌಲ್ಯ: 42 ಲಕ್ಷ ರೂ

ಅಂದರೆ, ಇಂದಿನ 1 ಕೋಟಿ ರೂಪಾಯಿಯಿಂದ ಪಡೆಯಬಹುದಾದ ಜೀವನಶೈಲಿಯನ್ನು 15 ವರ್ಷಗಳ ನಂತರ ಪಡೆಯಬೇಕಾದರೆ, ನಮಗೆ 2.40 ಕೋಟಿ ರೂ ಹಣದ ಅಗತ್ಯವಿರುತ್ತದೆ.

ಆರ್ಥಿಕ ಯೋಜನೆಗೆ ಪ್ರಮುಖ ಸಲಹೆಗಳು

ನಿವೃತ್ತಿ ಅಥವಾ ಭವಿಷ್ಯದ ಆರ್ಥಿಕ ಭದ್ರತೆಗಾಗಿ ಯೋಜನೆ ರೂಪಿಸುವಾಗ ಕೇವಲ ಶೇವಿಂಗ್ಸ್ ಅಷ್ಟೇ ಸಾಕಾಗುವುದಿಲ್ಲ.

ಹಣದುಬ್ಬರ ಮೀರಿಸುವ ಹೂಡಿಕೆ (Inflation-beating Investments): ಸಾಂಪ್ರದಾಯಿಕ ಬ್ಯಾಂಕ್‌ ಡೆಪಾಸಿಟ್‌ಗಳಿಗಿಂತ ಹಣದುಬ್ಬರವನ್ನು ಮೀರಿಸಿ ಆದಾಯ ನೀಡುವ ಈಕ್ವಿಟಿ, ಮ್ಯೂಚುವಲ್ ಫಂಡ್‌ಗಳು ಅಥವಾ ವೈವಿಧ್ಯಮಯ ಹೂಡಿಕೆ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಆರೋಗ್ಯ ವೆಚ್ಚ ಹಾಗೂ ಜೀವನಶೈಲಿ: ನಿವೃತ್ತಿ ನಿಧಿಯನ್ನು ಅಂದಾಜಿಸುವಾಗ ಭವಿಷ್ಯದ ವೈದ್ಯಕೀಯ ವೆಚ್ಚಗಳನ್ನು ವಿಶೇಷವಾಗಿ ಗಮನದಲ್ಲಿಡಬೇಕು. ಆದ್ದರಿಂದ, ಭವಿಷ್ಯದ ಆರ್ಥಿಕ ಗುರಿಗಳನ್ನು ನಿಗದಿಪಡಿಸುವಾಗ ಹಣದುಬ್ಬರವನ್ನು ಪರಿಗಣಿಸಿ ಸೂಕ್ತ ಹೂಡಿಕೆ ತಂತ್ರಗಳನ್ನು ರೂಪಿಸುವುದು ಜಾಣತನ(ಏಜೆನ್ಸೀಸ್​).