ಮುಂಬಯಿ: ಮೀಟರ್ ಬಡ್ಡಿ ಸಾಲ ನೀಡುವವರೂ ಈಗ ಜಾಣರಾಗಿದ್ದಾರೆ. ಅವರ ವ್ಯವಹಾರಕ್ಕೂ ಡಿಜಿಟಲ್ ಸ್ಪರ್ಶ ಸಿಕ್ಕಿದೆ. ಮನೆ ಮನೆಗೆ ಹೋಗಿ ಸಾಲ ನೀಡುವ ಬದಲು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ, ಸೆಕೆಂಡ್ಗಳಲ್ಲಿ ಸಾಲ ಪಡ್ಕೊಳ್ಳಿ ಅಂತ ಹೇಳೋಕೆ ಶುರುಮಾಡಿದ್ದಾರೆ. ಆದ್ದರಿಂದ ತತ್ಕ್ಷಣದ ಹಣಕಾಸಿನ ಮುಗ್ಗಟ್ಟಿನಿಂದ ಚೇತರಿಸಿಕೊಳ್ಳಲು ಮೊಬೈಲ್ ಆ್ಯಪ್ಗೆ ಲಾಗಿನ್ ಆಗಿ ಸುಲಭವಾಗಿ ಒಂದೇ ಕ್ಲಿಕ್ನಲ್ಲಿ ಸಾಲ ಪಡೆಯಬಹುದು. ಇನ್ನೇಕೆ ತಡ ಎಂದು ಹಿಂದೆ ಮುಂದೆ ಯೋಚಿಸದೇ ಸಾಲ ಪಡೆದುಕೊಳ್ಳಬೇಡಿ. ಈ ರೀತಿ ಸಾಲ ತಗೊಂಡ್ರೆ ಸಂಕಷ್ಟಕ್ಕೆ ಸಿಲುಕೋದು ಗ್ಯಾರೆಂಟಿ!
ಸಮಸ್ಯೆ ಆದ್ರೆ ದೂರು ಕೊಡಿ ಗುರುತುಪರಿಚಯವಿಲ್ಲದ ಆ್ಯಪ್ಗಳ ಮೂಲಕ ಸಾಲ ಪಡೆದುಕೊಂಡರೆ ನಿಮ್ಮ ಕೆವೈಸಿ ದಾಖಲೆಗಳು ಯಾರದ್ದೋ ಕೈ ಸೇರುತ್ತದೆ. ಅವರು ಅದನ್ನು ಬೇರೆ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಆ್ಯಪ್ಗಳು ಗಮನಕ್ಕೆ ಬಂದರೆ ಅಥವಾ ಇಂತಹ ಆ್ಯಪ್ಗಳಲ್ಲಿ ಸಾಲ ಪಡೆದು ತೊಂದರೆ ಒಳಗಾಗಿದ್ದರೆ https://sachet.rbi.org.in ಜಾಲತಾಣದಲ್ಲಿ ದೂರು ದಾಖಲಿಸಬಹುದು ಎಂದು ಆರ್ಬಿಐ ತಿಳಿಸಿದೆ.
ಬಹುತೇಕ ಆ್ಯಪ್ಗಳು ಅನಧಿಕೃತ. ಸಾಲ ನೀಡುವುದಕ್ಕೆ ಮತ್ತು ಹಿಂಪಡೆಯುವ ವಹಿವಾಟು ನಡೆಸುವುದಕ್ಕೆ ಅವುಗಳು ಪರವಾನಗಿ ಹೊಂದಿಲ್ಲ. ತ್ವರಿತವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ. ಆದರೆ, ನಂತರ ಸಮಸ್ಯೆಗಳು ಶುರುವಾಗುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸಾರ್ವಜನಿಕರನ್ನು ಎಚ್ಚರಿಸಿದೆ.
ಸಾರ್ವಜನಿಕರಿಂದ ಈ ಬಗ್ಗೆ ವೈಯಕ್ತಿಕವಾಗಿ ಬರುತ್ತಿರುವ ದೂರುಗಳ ಸಂಖ್ಯೆ ಹೆಚ್ಚಾದ ಕಾರಣ ಆರ್ಬಿಐ ಈ ಎಚ್ಚರಿಕೆ ಸಂದೇಶ ಪ್ರಕಟಿಸಿದೆ. ಮೀಟರ್ ಬಡ್ಡಿ ಅಷ್ಟೇ ಅಲ್ಲ, ವಿವಿಧ ರೀತಿಯ ಶುಲ್ಕಗಳನ್ನೂ ಇಂತಹ ಆ್ಯಪ್ಗಳು ವಿಧಿಸುತ್ತಿದ್ದು, ರಹಸ್ಯ ಶುಲ್ಕಗಳೂ ಇರುವ ಕಾರಣ ಸಾಲ ಹೊರೆಯಾಗಿ ಪರಿಣಮಿಸುತ್ತದೆ. ಈ ಬಗ್ಗೆ ಎಚ್ಚರವಿರಲಿ. ಬ್ಯಾಂಕುಗಳು ಮತ್ತು ಬ್ಯಾಂಕಿಂಗೇತರ ಹಣಕಾಸು ವಹಿವಾಟಿನ ಸಂಸ್ಥೆಗಳಿಗಷ್ಟೇ ಕಾನೂನು ಬದ್ಧ ಸಾಲ ವಿತರಣೆಗೆ ಅವಕಾಶವಿರುವಂಥದ್ದು ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..