ವಾಣಿಜ್ಯ

ಸರ್ಕಾರಕ್ಕೆ 57 ಸಾವಿರ ಕೋಟಿ ಡಿವಿಡೆಂಡ್ ನೀಡೋದಕ್ಕೆ ಆರ್​ಬಿಐ ನಿರ್ಧಾರ

ಮುಂಬೈ: ಕೇಂದ್ರ ಸರ್ಕಾರಕ್ಕೆ 57,128 ಕೋಟಿ ರೂಪಾಯಿ ಡಿವಿಡೆಂಡ್ ನೀಡುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್​ (ಆರ್​ಬಿಐ) ಶುಕ್ರವಾರ ನಿರ್ಧರಿಸಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೇಂದ್ರೀಯ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಸಭೆಯಲ್ಲಿ ಕಂಟಿನ್​ಜೆನ್ಸಿ ರಿಸ್ಕ್ ಬಫರ್​ ಅನ್ನು ಶೇಕಡ 5.5 ರ ಮಟ್ಟದಲ್ಲಿ ಸ್ಥಿರೀಕರಿಸುವುದಕ್ಕೂ ತೀರ್ಮಾನಿಸಲಾಗಿದೆ.

ಪ್ರಸ್ತುತ ಆರ್ಥಿಕ ಸ್ಥಿತಿಗತಿಯನ್ನು ಅವಲೋಕಿಸಿದ ಕೇಂದ್ರೀಯ ಮಂಡಳಿ, ಜಾಗತಿಕ ಮತ್ತು ಪ್ರಾದೇಶಿಕ ಸವಾಲುಗಳ ಬಗ್ಗೆಯೂ ಗಮನಹರಿಸಿತು. ಆರ್​ಬಿಐ ತೆಗೆದುಕೊಂಡ ವಿತ್ತೀಯ ಮತ್ತು ನಿಯಂತ್ರಕ ಹಾಗೂ ಇತರೆ ಕ್ರಮಗಳನ್ನೂ ಪರಾಮರ್ಶಿಸಿತು. ಒಂದು ಇನ್ನೋವೇಶನ್ ಹಬ್ ಸ್ಥಾಪಿಸುವ ಬಗ್ಗೆಯೂ ಮಂಡಳಿ ಚರ್ಚೆ ನಡೆಸಿದೆ. ವಿವಿಧ ಕ್ಷೇತ್ರಗಳಲ್ಲಿ ಬ್ಯಾಂಕಿಂಗ್ ವಹಿವಾಟು ಕಳೆದ ಹಣಕಾಸು ವರ್ಷದಲ್ಲಿ ಹೇಗಾಗಿತ್ತು ಎಂಬುದನ್ನೂ ಅವಲೋಕಿಸಿದ ಮಂಡಳಿ, ವಾರ್ಷಿಕ ವರದಿಯನ್ನು ಮತ್ತು ಲೆಕ್ಕಪತ್ರಗಳನ್ನು ಅಂಗೀಕರಿಸಿತು ಎಂದು ಆರ್​ಬಿಐ ತಿಳಿಸಿದೆ.

ಕಳೆದ ವರ್ಷ ಆರ್​ಬಿಐ ಮಂಡಳಿ ದಾಖಲೆಯ 1.76 ಲಕ್ಷ ಕೋಟಿ ರೂಪಾಯಿಯನ್ನು ಸರ್ಕಾರಕ್ಕೆ ಪಾವತಿಸಿತ್ತು. ಇದರಲ್ಲಿ 1.23 ಲಕ್ಷ ಕೋಟಿ ಡಿವಿಡೆಂಡ್ ಆದರೆ, 52,640 ಕೋಟಿ ರೂಪಾಯಿ ಹೆಚ್ಚುವರಿ ಬಂಡವಾಳವಾಗಿತ್ತು. ಕೇಂದ್ರೀಯ ಮಂಡಳಿ ಸಭೆಯಲ್ಲಿ ಡೆಪ್ಯುಟಿ ಗವರ್ನರ್​ಗಳಾದ ಬಿ.ಪಿ.ಕನುಂಗೊ, ಮಹೇಶ್ ಕುಮಾರ್ ಜೈನ್​, ಮೈಕಲ್ ದೇಬಬ್ರತ ಪಾತ್ರಾ ಮತ್ತು ಇತರೆ ನಿರ್ದೇಶಕರು ಹಾಜರಿದ್ದರು. ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ತರುಣ್​ ಬಜಾಜ್​, ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ದೇವಶಿಶ್ ಪಾಂಡಾ ಕೂಡ ಉಪಸ್ಥಿತರಿದ್ದರು. (ಏಜೆನ್ಸೀಸ್)