ವಾಣಿಜ್ಯ

ಪೆಟ್ರೋಲ್, ಡೀಸೆಲ್ ಬೆಲೆ ಗಗನಮುಖಿ: ಸತತ 9ನೇ ದಿನವೂ ಏರಿತು ದರ

ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಸತತ 9ನೇ ದಿನವೂ ಏರಿಕೆಯಾಗಿದೆ. ಒಂಭತ್ತು ದಿನಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ 5 ರೂಪಾಯಿ ಏರಿದರೆ, ಡೀಸೆಲ್ ಬೆಲೆ ಪ್ರತಿ ಲೀಟರ್ ಮೇಲೆ 4.87 ರೂಪಾಯಿ ಏರಿಕೆ ಕಂಡಿದೆ. ಒಂಭತ್ತನೇ ದಿನವಾದ ಸೋಮವಾರ ಪೆಟ್ರೋಲ್ ಬೆಲೆ ಲೀಟರ್​ಗೆ 48 ಪೈಸೆ, ಡೀಸೆಲ್ ಬೆಲೆ ಲೀಟರ್​ಗೆ 23 ಪೈಸೆ ಏರಿಕೆಯಾಗಿದೆ.

ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ ನಿನ್ನೆ 75.78 ರೂಪಾಯಿ ಇದ್ದಿದ್ದು, ಇಂದು 76.26 ರೂಪಾಯಿ ಆಗಿದೆ. ಇದೇ ರೀತಿ ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ ನಿನ್ನೆ 74.03 ರೂಪಾಯಿ ಇದ್ದಿದ್ದು, ಇಂದು 74.26 ರೂಪಾಯಿ ತಲುಪಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್​ಗೆ ನಿನ್ನೆ 78.23 ರೂಪಾಯಿ ಇತ್ತು. ಇಂದು 78.73 ರೂಪಾಯಿ ಆಗಿದೆ. ಡೀಸೆಲ್ ಬೆಲೆ ನಿನ್ನೆ 70.39 ರೂಪಾಯಿ ಇತ್ತು. ಇಂದು 70.95 ರೂಪಾಯಿ ಆಗಿದೆ.

ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಏಕರೂಪದಲ್ಲಿ ಇಲ್ಲದ ಕಾರಣ ಆಯಾ ರಾಜ್ಯದಲ್ಲಿ ಅಲ್ಲಿನ ತೆರಿಗೆಗಳಿಗೆ ಅನುಗುಣವಾಗಿ ಬದಲಾವಣೆ ಕಂಡಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್​, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್​ ಲಿಮಿಟೆಡ್​, ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್​ ಗಳು ನಿತ್ಯವೂ ಮಾಡುತ್ತಿದ್ದ ದರ ಪರಿಷ್ಕರಣೆಯನ್ನು ಮಾರ್ಚ್ 14 ರಂದು ನಿಲ್ಲಿಸಿದ್ದವು. ಇದೇ ಅವಧಿಯಲ್ಲಿ ಸರ್ಕಾರವೂ ಪ್ರತಿ ಲೀಟರ್ ಮೇಲಿನ ಅಬಕಾರಿ ಸುಂಕವನ್ನು 3 ರೂಪಾಯಿ ಏರಿಕೆ ಮಾಡಿತ್ತು.ಈ ಏರಿಕೆಯನ್ನು ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ. (ಏಜೆನ್ಸೀಸ್)