ನವದೆಹಲಿ: ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 3 ರೂ. ಹೆಚ್ಚಳ ಮಾಡಿದೆ. ಇದರಿಂದ 39,000 ಕೋಟಿ ರೂ. ರೂಪಾಯಿ ಹೆಚ್ಚುವರಿ ಆದಾಯ ನಿರೀಕ್ಷಿಸಿದೆ. ಆದರೆ, ತೆರಿಗೆ ಹೆಚ್ಚಳದ ಬಿಸಿ ಗ್ರಾಹಕರಿಗೆ ಸದ್ಯ ತಟ್ಟುವುದಿಲ್ಲ. ಏಕೆಂದರೆ ಅಂತಾರಾಷ್ಟ್ರೀಯ ಕಚ್ಚಾ ತೈಲ ದರದಲ್ಲಿನ ಕುಸಿತದ ಲಾಭವನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗ್ರಾಹಕರಿಗೆ ದಾಟಿಸುವ ಬದಲು ಸುಂಕ ಏರಿಕೆಗೆ ಸರಿದೂಗಿಸಿಕೊಳ್ಳುತ್ತವೆ. ಆದರೆ, ಕಚ್ಚಾ ತೈಲದ ಬೆಲೆ ಹೆಚ್ಚಳವಾದಾಗ ತೆರಿಗೆ ಏರಿಕೆಯ ಬಿಸಿ ಗ್ರಾಹಕರಿಗೆ ಖಂಡಿತ ತಟ್ಟುತ್ತದೆ. ಹೆಚ್ಚಳ ಮಾಡಲಾಗಿರುವ ಸುಂಕದಲ್ಲಿ 2 ರೂ. ಅಬಕಾರಿ ತೆರಿಗೆಯಾಗಿದ್ದು, ಮತ್ತೊಂದು ರೂಪಾಯಿ ರಸ್ತೆ ಶುಲ್ಕವಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ತೈಲ ಬೆಲೆಗಳ ಕುಸಿತದಿಂದ ಉಂಟಾಗುವ ಲಾಭಗಳನ್ನು ಗ್ರಾಹಕ ರಿಗೆ ರವಾನಿಸದ 2014-15ರ ಕಾಯ್ದೆಯನ್ನು ಸರ್ಕಾರ ಪುನರಾವರ್ತಿಸಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಒಟ್ಟು 19.98 ರೂ. ಅಬಕಾರಿ ಸುಂಕ ವಿಧಿಸಲಾಗುತ್ತಿದ್ದು, ಈಗ ಇದು 22.98 ರೂ.ಕ್ಕೆ ಏರಿಕೆಯಾಗಿದೆ. ಡೀಸೆಲ್ ಮೇಲೆ ಅಬಕಾರಿ ಸುಂಕ - 15.83ರೂ.ರಿಂದ 18.83 ರೂ.ಕ್ಕೆ ಏರಿದೆ.
ಕರೊನಾ ವೈರಸ್ ವಿಶ್ವದಾದ್ಯಂತ ತನ್ನ ದಾಳಿ ಪ್ರಾರಂಭಿಸಿದಾಗಿನಿಂದಲೂ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕಚ್ಚಾತೈಲ ಬೆಲೆ ನಿರಂತರವಾಗಿ ಇಳಿಕೆಯಾಗುತ್ತಿದೆ. ಇದರಿಂದಾಗಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಳೆದ ಎರಡು ತಿಂಗಳಿನಿಂದಲೂ ಇಳಿಮುಖವಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ ಒಟ್ಟು 6.14 ರೂ.ಮತ್ತು ಡೀಸೆಲ್ - 6.59 ರೂ.ಗೆ ತಗ್ಗಿದೆ. ಜನವರಿ 11 ರಂದು ಪೆಟ್ರೋಲ್ ಬೆಲೆ ಈ ವರ್ಷದ ಗರಿಷ್ಠ ಮಟ್ಟ 76.01 ರೂ.ಇತ್ತು. ಇದು ಈಗ (ಮಾ.14) 69.87 ರೂ.ಕ್ಕೆ ಇಳಿದಿದೆ.ಡೀಸೆಲ್ 69.17 ರೂ. ಗಳಿಂದ - 62.58 ರೂ.ಕ್ಕೆ ಕುಸಿದಿದೆ.
ಕರೊನಾದಿಂದ ಉಂಟಾಗಿರುವ ಆರ್ಥಿಕ ಹಿಂಜರಿತದ ಕಾರಣ ಮೂಲಸೌಕರ್ಯ ಮತ್ತು ಇತರ ಯೋಜನೆಗಳಿಗೆ ಹೂಡಿಕೆಗೆ ಹಣ ಕೊರತೆ ಎದುರಿಸುತ್ತಿರುವ ಕೇಂದ್ರ ಸರ್ಕಾರ ಕಚ್ಚಾತೈಲ ಬೆಲೆ ಇಳಿಕೆ ಲಾಭ ಪಡೆಯುವ ಸಲುವಾಗಿಯೇ ಅಬಕಾರಿ ಸುಂಕ ಹೆಚ್ಚಿಸಿದೆ. 2014ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಒಟ್ಟು ಅಬಕಾರಿ ಸುಂಕದ ಪ್ರಮಾಣ ಪೆಟ್ರೋಲ್ ಮೇಲೆ 9.48 ರೂ.ಹಾಗೂ ಡೀಸೆಲ್ ಮೇಲೆ 3.56 ರೂ. ಇತ್ತು. ಪೆಟ್ರೋಲ್ ಮತ್ತು ಡೀಸೆಲ್ನಲ್ಲಿ ಉಂಟಾಗುವ ಬೆಲೆ ಇಳಿಕೆಯ ಲಾಭ ಪಡೆಯಲು ಕೇಂದ್ರ ಸರ್ಕಾರ 2014ರಿಂದ 2016 ಅವಧಿಯಲ್ಲಿ ಒಟ್ಟು 9 ಬಾರಿ ಅಬಕಾರಿ ಸುಂಕ ಹೆಚ್ಚಳ ಮಾಡಿದೆ.