ವಾಣಿಜ್ಯ

ಈರುಳ್ಳಿಗೆ ಬೆಂಬಲ ಬೆಲೆ ನಿಗದಿಗೆ ಪಟ್ಟು

ಪರಶುರಾಮಪುರ: ಈರುಳ್ಳಿಗೆ ಪ್ರತಿ ಕ್ವಿಂಟಾಲ್‌ಗೆ 2 ಸಾವಿರ ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಕೋಟೆ ಓಬಳಾಪುರದ ಬೆಳೆಗಾರರು ಸೋಮವಾರ ಪ್ರತಿಭಟನೆ ನಡೆಸಿದರು.

ರೈತರು ಲಭ್ಯ ನೀರಿನಲ್ಲಿ ಸಾವಿರಾರು ರೂ. ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದಾರೆ. ಲಾಕ್‌ಡೌನ್‌ನಿಂದ ಬೆಲೆ ಕುಸಿದ ಕಾರಣ ಕಂಗಾಲಾಗಿದ್ದಾರೆ. ಈಗಾಗಲೇ ಈರುಳ್ಳಿ ಕೊಳೆಯಲಾರಂಬಿಸಿದೆ ಎಂದು ಆತಂಕ ತೋಡಿಕೊಂಡರು.

ಈರುಳ್ಳಿ ಸಂಪೂರ್ಣ ಕೊಳೆತರೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸಬೇಕು. ಇಲ್ಲದಿದ್ದರೆ ಲಾರಿಗಳಲ್ಲಿ ತುಂಬಿಕೊಂಡು ತಾಲೂಕು ಹಾಗೂ ಜಿಲ್ಲಾಡಳಿತ ಕಚೇರಿ ಎದುರು ಸುರಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗ್ರಾಪಂ ಅಧ್ಯಕ್ಷ ಒ.ಬೈಲಪ್ಪ ಮಾತನಾಡಿ, ಟಿ.ಎನ್.ಕೋಟೆ, ಓಬಳಾಪುರ, ಗೋಸಿಕೆರೆ, ಮೇಲುಕೋಟೆ, ತೊರೆಬೀರನಹಳ್ಳಿ, ಕೋನಿಗರಹಳ್ಳಿ, ದೊಡ್ಡಬೀರನಹಳ್ಳಿ, ಚಿಕ್ಕಚೆಲ್ಲೂರು, ದೊಡ್ಡಚೆಲ್ಲೂರು, ಪಿ.ಓಬನಹಳ್ಳಿ ಮತ್ತಿತರ ಹಳ್ಳಿಗಳಲ್ಲಿ 5000-10,000 ಈರುಳ್ಳಿ ಚೀಲಗಳನ್ನು ಸಂಗ್ರಹಿಸಿದ್ದಾರೆ. ಆದರೆ, ದಿನದಿಂದ ದಿನಕ್ಕೆ ಈರುಳ್ಳಿ ತಿಪ್ಪೆ ಪಾಲಾಗುತ್ತಿದೆ ಎಂದು ಹೇಳಿದರು.

ಬೆಳೆಗಾರರಾದ ಮಹಾಂತೇಶ, ನಾಗರಾಜು, ಶಿವಶಂಕರಪ್ಪ, ರಾಜಣ್ಣ, ನೀಲಕಂಠಪ್ಪ, ಕುಮಾರ, ತಿಪ್ಪೇಸ್ವಾಮಿ, ಈರಣ್ಣ, ಗೋವಿಂದಪ್ಪ ಇತರರಿದ್ದರು.

250ಕ್ಕೂ ಅಧಿಕ ಚೀಲ ಈರುಳ್ಳಿ ಬೆಳೆದಿದ್ದು, ದರ ಕಡಿಮೆಯಾಗಿ ಕೇಳುವವರಿಲ್ಲ. ಜಿಲ್ಲಾಡಳಿತ ಕೂಡಲೇ ಗ್ರಾಮೀಣ ಭಾಗಕ್ಕೆ ಧಾವಿಸಿ 2 ಸಾವಿರ ರೂ. ಬೆಂಬಲ ಬೆಲೆ ನೀಡಿ ಈರುಳ್ಳಿ ಖರೀದಿಸಬೇಕು.
ಭಾಗ್ಯಮ್ಮ, ಕೋಟೆ ಒಬಳಾಪುರ