ವಾಣಿಜ್ಯ

ಬೆಲೆ ಕುಸಿತದಿಂದ ಬೀದಿಗೆ ಬಿದ್ದ ಬೆಳ್ಳುಳ್ಳಿ; ರಸ್ತೆಗೆ ಸುರಿದು ರೈತರ ಪ್ರತಿಭಟನೆ

malli

ರಾಣೆಬೆನ್ನೂರು: ಬೆಳ್ಳುಳ್ಳಿ ಬೆಲೆ ದಿಢೀರ್ ಕುಸಿತಕ್ಕೆ ಕಂಗಾಲಾದ ರೈತರು ಭಾನುವಾರ ಎಪಿಎಂಸಿ ಮುಂಭಾಗ ಹಲಗೇರಿ ವೃತ್ತದಲ್ಲಿ ರಸ್ತೆಗೆ ಬೆಳ್ಳುಳ್ಳಿ ಸುರಿದು ಪ್ರತಿಭಟನೆ ನಡೆಸಿದರು. ಪ್ರವಾಹದ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ತಿಂಗಳ ಹಿಂದೆ ಒಂದು ಕ್ವಿಂಟಾಲ್ ಬೆಳ್ಳುಳ್ಳಿ ಬೆಲೆ 25 ಸಾವಿರ ರೂ. ಇತ್ತು. ಆ ವೇಳೆ ಹಲಗೇರಿ ಭಾಗದಲ್ಲಿ ಬೆಳ್ಳುಳ್ಳಿ ಬೆಳೆಯನ್ನು ಕಳ್ಳರಿಂದ ರಕ್ಷಿಸಲು ಪೊಲೀಸರೇ ಕಾವಲಿಗಿದ್ದರು.

ಈಗ ಬೆಲೆ ಕುಸಿತದಿಂದಾಗಿ ಬೀದಿಗೆ ಬಿದ್ದಿದೆ. ಕಳೆದ ವಾರ ಕ್ವಿಂಟಾಲ್​ಗೆ 8-10 ಸಾವಿರ ರೂ. ದರ ಇತ್ತು. ಭಾನುವಾರ ಸ್ಥಳೀಯ ರೈತರು ಮಾರುಕಟ್ಟೆಗೆ 200ಕ್ಕೂ ಅಧಿಕ ಚೀಲ ಬೆಳ್ಳುಳ್ಳಿ ತಂದಿದ್ದರು. ಹರಾಜಿನಲ್ಲಿ ವಿಜಯಪುರ ಭಾಗದ ಬೆಳ್ಳುಳ್ಳಿಯನ್ನು ಕ್ವಿಂಟಾಲ್​ಗೆ 6- 8 ಸಾವಿರ ರೂ.ಗೆ ಕೂಗಿದ ಖರೀದಿದಾರರು, ಸ್ಥಳೀಯರ ಬೆಳ್ಳುಳ್ಳಿಗೆ 2-3 ಸಾವಿರ ರೂ. ಕೂಗಿದರು.

ಆಕ್ರೋಶಗೊಂಡ ರಾಣೆಬೆನ್ನೂರು ಮತ್ತು ಹಿರೇಕೆರೂರು ತಾಲೂಕಿನ ರೈತರು 50ಕ್ಕೂ ಅಧಿಕ ಚೀಲ ಬೆಳ್ಳುಳ್ಳಿಯನ್ನು ರಸ್ತೆಗೆ ಸುರಿದು ಪ್ರತಿಭಟಿಸಿದರು. ಸಾರ್ವಜನಿಕರು ಮುಗಿಬಿದ್ದು ಪುಕ್ಕಟ್ಟೆಯಾಗಿ ಬೆಳ್ಳುಳ್ಳಿ ಹೊತ್ತೊಯ್ದರು. ಸ್ಥಳಕ್ಕೆ ಬಂದ ಎಪಿಎಂಸಿ ಹಿರಿಯ ಮೇಲ್ವಿಚಾರಕ ಪರಮೇಶ ನಾಯ್ಕ, ಖರೀದಿದಾರರು ಸ್ಥಳೀಯ ರೈತರ ಬೆಳ್ಳುಳ್ಳಿಯನ್ನೇ ಖರೀದಿಸಬೇಕು ಎಂದು ಸೂಚಿಸಿದರು. ನಂತರದ ಹರಾಜಿನಲ್ಲಿ 1 ಕ್ವಿಂಟಾಲ್​ಗೆ 5-7 ಸಾವಿರ ರೂ. ಬೆಲೆ ದೊರೆಯಿತು.