ಒಂದೊಳ್ಳೆ ಲೈಫು, ಚಿಕ್ಕದಾದ್ರೂ ಚೊಕ್ಕ ಕೆಲಸ. ಅದ್ದೂರಿ ಅಲ್ಲದಿದ್ರೂ ಗೌರವವಾಗಿ ಬದುಕಿ, ಸ್ವಲ್ಪ ಉಳಿಸಿ ಕೂಡಿಡುವಷ್ಟು ಆದಾಯ.... ಇಂತಹ ಸಣ್ಣ ಸಣ್ಣ ಕನಸುಗಳನ್ನು ಹೊತ್ತ ಎಷ್ಟೋ ಜೀವಗಳು ಇವುಗಳ ನನಸಿನ ಬಗ್ಗೆ ಪ್ರತಿನಿತ್ಯ ಕನವರಿಸುತ್ತಿರುತ್ತವೆ. ತೋಳಲ್ಲಿ ಶಕ್ತಿ ಇದ್ದರೂ ಏನು ಮಾಡಬೇಕೆಂಬ ಗೊಂದಲ, ಗೋಜಲು. ಏನು ಮಾಡಿದರೆ ಅದೇನು ಆಗುವುದೋ ಎಂಬ ಭಯ, ದುಗುಡ. ಈ ಆತಂಕ, ಭಯವನ್ನು ಗಂಟು ಮೂಟೆ ಕಟ್ಟಿ ಪಕ್ಕಕ್ಕಿಟ್ಟು ಮುನ್ನಡೆದ ಅದೆಷ್ಟೋ ಮಂದಿ ಕೇವಲ ಆತ್ಮವಿಶ್ವಾಸ ಎಂಬ ಬಂಡವಾಳ ಹೂಡಿ ಕೋಟಿ ಕೋಟಿ ಗಳಿಸುತ್ತಿದ್ದಾರೆ. ಇಂತಹ ಹಲವು ಸ್ಪೂರ್ತಿದಾಯಕರ ಜತೆಗೆ ವಿಜಯವಾಣಿಯ ಅಪಾರ ಓದುಗರು ನ್ಯಾಯಮಾರ್ಗದಿಂದ ದುಡಿಮೆ ದುಪ್ಪಟ್ಟು ಮಾಡುವ ಬಗ್ಗೆ ತಮ್ಮ ಅನುಭವ, ಸಲಹೆಗಳನ್ನು ಧಾರೆ ಎರೆದಿದ್ದಾರೆ. ಹೊಸ ವರ್ಷದ ದಿನ ನೀವು ಓದುವ ಈ ಆತ್ಮವಿಶ್ವಾಸದ ಸೂತ್ರಗಳು ನಿಮ್ಮ ಜೀವನಕ್ಕೆ ಹೊಸ ದಾರಿಯಾಗಲಿ ಎಂಬುದು ವಿಜಯವಾಣಿ ಆಶಯ, ಕಳಕಳಿ.
ಕಷ್ಟಪಡಬೇಡಿ, ಇಷ್ಟಪಡಿ
ನಿಮ್ಮನ್ನು ನೀವು ಗೆದ್ದರೆ ಈ ಪ್ರಪಂಚವನ್ನೇ ಗೆದ್ದಂತೆ. ಮೊದಲು ನಿಮಗೆ ಏನು ಬೇಕು? ನೀವು ಯಾವ ಕೆಲಸ ಮಾಡಿದರೆ ಮನಸ್ಸಿಗೆ ಖುಷಿ ಕೊಡುತ್ತದೆ? ಎಂಬುದನ್ನು ತಿಳಿದುಕೊಳ್ಳಿ. ಬೇರೆಯವರು ಏನು ಹೇಳುತ್ತಾರೆ ಎಂಬುದರ ಬಗ್ಗೆ ಯಾವತ್ತೂ ತಲೆಕೆಡಿಸಿಕೊಳ್ಳಬೇಡಿ. ನೀವು ಕಷ್ಟಪಟ್ಟು ಏನನ್ನೂ ಸಾಧಿಸಲಾರಿರಿ, ಇಷ್ಟಪಟ್ಟು ಏನು ಬೇಕಾದರೂ ಸಾಧಿಸಬಲ್ಲಿರಿ. ಯಾವತ್ತೂ ಅಷ್ಟೇ.. ಇಷ್ಟಪಟ್ಟು ಮಾಡುವ ಕೆಲಸದಲ್ಲಿ ಕಷ್ಟ ಎಂಬುದೇ ಇರುವುದಿಲ್ಲ.