ಒಂದೊಳ್ಳೆ ಲೈಫು, ಚಿಕ್ಕದಾದ್ರೂ ಚೊಕ್ಕ ಕೆಲಸ. ಅದ್ದೂರಿ ಅಲ್ಲದಿದ್ರೂ ಗೌರವವಾಗಿ ಬದುಕಿ, ಸ್ವಲ್ಪ ಉಳಿಸಿ ಕೂಡಿಡುವಷ್ಟು
ಆದಾಯ…. ಇಂತಹ ಸಣ್ಣ ಸಣ್ಣ ಕನಸುಗಳನ್ನು ಹೊತ್ತ ಎಷ್ಟೋ ಜೀವಗಳು ಇವುಗಳ ನನಸಿನ ಬಗ್ಗೆ ಪ್ರತಿನಿತ್ಯ ಕನವರಿಸುತ್ತಿರುತ್ತವೆ. ತೋಳಲ್ಲಿ ಶಕ್ತಿ ಇದ್ದರೂ ಏನು ಮಾಡಬೇಕೆಂಬ ಗೊಂದಲ, ಗೋಜಲು. ಏನು ಮಾಡಿದರೆ ಅದೇನು ಆಗುವುದೋ ಎಂಬ ಭಯ, ದುಗುಡ. ಈ ಆತಂಕ, ಭಯವನ್ನು ಗಂಟು ಮೂಟೆ ಕಟ್ಟಿ ಪಕ್ಕಕ್ಕಿಟ್ಟು ಮುನ್ನಡೆದ ಅದೆಷ್ಟೋ ಮಂದಿ ಕೇವಲ ಆತ್ಮವಿಶ್ವಾಸ ಎಂಬ ಬಂಡವಾಳ ಹೂಡಿ ಕೋಟಿ ಕೋಟಿ ಗಳಿಸುತ್ತಿದ್ದಾರೆ. ಇಂತಹ ಹಲವು ಸ್ಪೂರ್ತಿದಾಯಕರ ಜತೆಗೆ ವಿಜಯವಾಣಿಯ ಅಪಾರ ಓದುಗರು ನ್ಯಾಯಮಾರ್ಗದಿಂದ ದುಡಿಮೆ ದುಪ್ಪಟ್ಟು ಮಾಡುವ ಬಗ್ಗೆ ತಮ್ಮ ಅನುಭವ, ಸಲಹೆಗಳನ್ನು ಧಾರೆ ಎರೆದಿದ್ದಾರೆ. ಹೊಸ ವರ್ಷದ ದಿನ ನೀವು ಓದುವ ಈ ಆತ್ಮವಿಶ್ವಾಸದ ಸೂತ್ರಗಳು ನಿಮ್ಮ ಜೀವನಕ್ಕೆ ಹೊಸ ದಾರಿಯಾಗಲಿ ಎಂಬುದು ವಿಜಯವಾಣಿ ಆಶಯ, ಕಳಕಳಿ.
ಪರಿಹಾರವೇ ಬಿಜಿನೆಸ್
ಬಿಜಿನೆಸ್ಗೆ ಲಕ್ಷಾಂತರ ರೂ.ಬಂಡವಾಳವೋ, ಲಾಜಿಕ್ಕೋ ಬೇಕಿಲ್ಲ. ನಿಮ್ಮ ಮೇಲೆ ನಿಮಗೆ ವಿಶ್ವಾಸ, ಗುರಿ ಸಾಧನೆಗೆ ಹಾರ್ಡ್ವರ್ಕ್ ಸಾಕಷ್ಟೇ. ನನ್ನ ಐಡಿಯಾ ಬಗ್ಗೆ ಏನು ಅಂದುಕೊಳ್ಳುತ್ತಾರೋ ಎಂಬ ಯೋಚನೆಗಳಿಂದ ಬಿಜಿನೆಸ್ಗೆ ಕೈ ಹಾಕದವರೇ ಹೆಚ್ಚು. ಬಿಜಿನೆಸ್ ಎಂದರೆ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಕಲೆ ಅಷ್ಟೇ. ಪ್ಲಾಸ್ಟಿಕ್ ಬ್ಯಾನ್ ಎನ್ನುವುದು ಸಮಸ್ಯೆಯಾದರೆ ಪೇಪರ್ ಬ್ಯಾಗ್ ಪರಿಹಾರ ತಾನೆ? ಇದು ಕೂಡ ಬಿಜಿನೆಸ್ಸೇ. ಎಲ್ಲವೂ ಇಷ್ಟೇ ಸುಲಭ.
| ನಿವೇದನ್ ನೆಂಪೆ ಅಡಿಕೆ ಚಹಾ ಸಂಶೋಧಕ ಶಿವಮೊಗ್ಗ