ವಾಣಿಜ್ಯ

ಮುಕೇಶ್ ವಿಶ್ವದ 6ನೇ ಶ್ರೀಮಂತ

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಇದೀಗ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ. ಇತ್ತೀಚೆಗಷ್ಟೇ ಎಂಟನೇ ಸ್ಥಾನದಲ್ಲಿದ್ದ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಆರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಆರು ಮತ್ತು ಏಳನೇ ಸ್ಥಾನದಲ್ಲಿದ್ದ ಆಲ್ಪಾಬೆಟ್ ಸಂಸ್ಥೆಯ ಸಹ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಜೆ ಬ್ರಿನ್ ಅವರನ್ನು ಅಂಬಾನಿ ಹಿಂದಿಕ್ಕಿದ್ದಾರೆ. ಅಂಬಾನಿ ಹೊಂದಿರುವ ರಿಲಯನ್ಸ್ ಷೇರುಮೌಲ್ಯದಲ್ಲಿ ಸೋಮವಾರ 16 ಸಾವಿರ ಕೋಟಿ ರೂಪಾಯಿ ಏರಿಕೆ ಕಂಡುಬಂದಿದೆ. ಇದೀಗ ಅಂಬಾನಿಯ ಒಟ್ಟು ಆಸ್ತಿ ಮೌಲ್ಯ 5.458 ಲಕ್ಷ ಕೋಟಿ ರೂಪಾಯಿ ಆಗಿದೆ. ಏಳನೇ ಸ್ಥಾನದಲ್ಲಿರುವ ಲ್ಯಾರಿ ಪೇಜ್ 5.397 ಲಕ್ಷ ಕೋಟಿ ರೂಪಾಯಿ ಮತ್ತು ಸೆರ್ಜೆ ಬ್ರಿನ್ 5.23 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ತಿಂಗಳ ಹಿಂದೆ ಒಂಬತ್ತನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದ ಅಂಬಾನಿ, ವಾರೆನ್ ಬಫೆ ಅವರನ್ನು ಹಿಂದಿಕ್ಕಿ ಎಂಟನೇ ಸ್ಥಾನಕ್ಕೇರಿದ್ದರು. ಅದಾದ ನಂತರ ಒಂದೇ ವಾರದಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯ ಮೊದಲ ಹತ್ತು ಸ್ಥಾನಗಳೊಳಗೆ ಕಾಣಿಸಿಕೊಂಡಿರುವ ಏಷ್ಯಾದ ಏಕೈಕ ವ್ಯಕ್ತಿ ಎನ್ನುವ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ.

ಭರ್ಜರಿ ಹೂಡಿಕೆ: ಲಾಕ್​ಡೌನ್ ಹಿನ್ನೆಲೆಯಲ್ಲಿ ಬಹುತೇಕ ಉದ್ದಿಮೆಗಳು ನಷ್ಟದಲ್ಲಿದ್ದರೂ ಅಂಬಾನಿ ಆಸ್ತಿ ಮೌಲ್ಯ ಹೆಚ್ಚಾಗುತ್ತಲೇ ಇದೆ. ಜಿಯೊಗೆ ಭಾರಿ ಪ್ರಮಾಣದ ಹೂಡಿಕೆ ಹರಿದು ಬರುತ್ತಿರುವುದು ಇದಕ್ಕೆ ಕಾರಣ. ಫೇಸ್​ಬುಕ್, ಇಂಟೆಲ್ ಸೇರಿ 13 ಸಂಸ್ಥೆಗಳು ಕಳೆದ ನಾಲ್ಕು ತಿಂಗಳಲ್ಲಿ ಜಿಯೊದಲ್ಲಿ ಹೂಡಿಕೆ ಮಾಡಿವೆ. ಅಮೆರಿಕದ ಕ್ವಾಲ್​ಕಾಮ್ ಸಂಸ್ಥೆಯು 730 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಹಾಗಾಗಿ ಸಂಸ್ಥೆಯ ಮೌಲ್ಯ ಜತೆಗೆ ಮಾಲೀಕ ಅಂಬಾನಿಯ ಆಸ್ತಿ ಮೌಲ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದೆ.

57ನೇ ಸ್ಥಾನದಲ್ಲಿ ರಿಲಯನ್ಸ್: ರಿಲಯನ್ಸ್ ಸಂಸ್ಥೆಯ ಮಾರುಕಟ್ಟೆ ಬಂಡವಾಳ (ಎಂ-ಕ್ಯಾಪ್) ವಿಶ್ವದಲ್ಲಿ 57 ಸ್ಥಾನದಲ್ಲಿದೆ. ಕ್ವಾಲ್​ಕಾಮ್ ಸಂಸ್ಥೆ ಹೂಡಿಕೆಯ ನಂತರ ಆರ್​ಐಎಲ್​ನ ಎಂ-ಕ್ಯಾಪ್ 12 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಗೂಗಲ್​ನಿಂದಲೂ ಹೂಡಿಕೆ?

ರಿಲಯನ್ಸ್ ಟೆಲಿಕಾಂನ ಜಿಯೋದಲ್ಲಿ ಗೂಗಲ್ ಸಂಸ್ಥೆ ಹೂಡಿಕೆ ಮಾಡುವ ಸಾಧ್ಯತೆಯಿದೆ. ಮುಂಬರುವ ವರ್ಷಗಳಲ್ಲಿ 10 ಬಿಲಿಯನ್ ಡಾಲರ್​ನ್ನು ಭಾರತದಲ್ಲಿ ಹೂಡಿಕೆ ಮಾಡುವ ಯೋಜನೆಯನ್ನು ಗೂಗಲ್ ಹೊಂದಿದ್ದು, ಅದರಲ್ಲಿ 4 ಬಿಲಿಯನ್ ಡಾಲರ್​ನ್ನು ಜಿಯೋದಲ್ಲಿ ಹೂಡಿಕೆ ಮಾಡಲಿದೆ ಎನ್ನಲಾಗಿದೆ. ಈ ವಿಚಾರವಾಗಿ ಮುಂದಿನ ವಾರದಲ್ಲಿ ಅಧಿಕೃತ ಪ್ರಕಟಣೆ ಬರುವ ಸಾಧ್ಯತೆಯಿದೆ.