ವಾಣಿಜ್ಯ

ಚಹಾ ಪುಡಿ ಬೆಲೆ ಗಣನೀಯ ಏರಿಕೆ ಕಂಡರೆ ಅಚ್ಚರಿ ಇಲ್ಲ ಅಂತಿದ್ದಾರೆ ಪರಿಣತರು

Mandara

ಕೋಲ್ಕತ: ಏಪ್ರಿಲ್ ಮತ್ತು ಮೇ ತಿಂಗಳ ಲಾಕ್​ಡೌನ್ ಮತ್ತು ಅತಿವೃಷ್ಟಿ ಕಾರಣ ಈ ಸಲ 2 ಲಕ್ಷ ಟನ್​ ಚಹಾ ಬೆಳೆ ಹಾನಿಗೀಡಾಗಿದೆ. ಪರಿಣಾಮ ಚಹಾ ಬೆಳೆ ಉತ್ಪಾದನೆ ಕುಸಿತ ಕಂಡಿದೆ. ಇದರಿಂದಾಗಿ ಈ ಸಲ ಬೆಲೆ ಏರಿಕೆ ಉಂಟಾಗಬಹುದು ಎಂದು ಚಹಾ ಕ್ಷೇತ್ರದ ಪರಿಣತರು ಸುಳಿವು ನೀಡಿದ್ದಾರೆ.

ಇಂಡಿಯನ್ ಟೀ ಅಸೋಸಿಯೇಷನ್​ (ಐಟಿಎ) ಅಂದಾಜು ಪ್ರಕಾರ ಅಸ್ಸಾಂ ಮತ್ತು ಉತ್ತರ ಬಂಗಾಳವನ್ನು ಒಳಗೊಂಡಂತೆ ಉತ್ತರ ಭಾರತದಲ್ಲಿ ಚಹಾ ಬೆಳೆ 2019ರ ಜನವರಿ ಮತ್ತು ಜೂನ್ ಅವಧಿಗೆ ಹೋಲಿಸಿದರೆ 2020ರ ಅದೇ ಅವಧಿಯಲ್ಲಿ ಶೇಕಡ 40 ಕುಸಿತ ಕಂಡಿದೆ. ಜುಲೈ ತಿಂಗಳ ಉತ್ಪಾದನೆಯ ಡೇಟಾ ಇನ್ನು ಕೆಲವೇ ದಿನಗಳಲ್ಲಿ ಕೇ ಸೇರಲಿದೆ. ಅದಕ್ಕಾಗಿ ಉದ್ಯಮ ರಂಗ ಕಾಯುತ್ತಿದೆ ಎಂದು ಐಟಿಎ ಸೆಕ್ರೆಟರಿ ಅರಿಜಿತ್ ರಹಾ ಹೇಳಿದ್ದಾರೆ.

ಉತ್ತರ ಬಂಗಾಳದ ಅರಿಪುರದೌರ್​ ಮತ್ತು ಜಲ್​ಪಾಯಿಗುರಿಗಳಲ್ಲಿ ಕೋವಿಡ್ 19 ಲಾಕ್​ಡೌನ್ ಸಂದರ್ಭದಲ್ಲಿ ಬೃಹತ್​ ಪ್ರಮಾಣದಲ್ಲಿ ಕಾರ್ಮಿಕರ ಗೈರಾದ ಕಾರಣಕ್ಕೆ ಚಹಾ ಸೊಪ್ಪು ಚಿವುಟುವ ಕೆಲಸ ತುಂಬ ಕಡಿಮೆ ಪ್ರಮಾಣದಲ್ಲಿ ಸಾಗಿದೆ. ಕೋಲ್ಕತದಲ್ಲಿ ನಡೆಯುವ ಚಹಾ ಹರಾಜು ಪ್ರಕ್ರಿಯೆಯನ್ನೂ ಐಟಿಎ ಗಮನಿಸುತ್ತಿದ್ದು, ಲಾಕ್​ಡೌನ್ ಮತ್ತು ಮಳೆಯ ಕಾರಣಕ್ಕೆ ಇಳುವರಿ ಕಡಿಮೆಯಾಗಿರುವುದು ಗಮನಕ್ಕೆ ಬಂದಿದೆ. ಇದು ಚಹಾ ಪುಡಿಯ ಬೆಲೆ ಏರಿಕೆಯಾಗಲಿರುವ ಮುನ್ಸೂಚನೆ ಎಂದು ಪರಿಣತರು ಸುಳಿವು ನೀಡಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಪೂರೈಕೆ ಪ್ರಮಾಣ ಕಡಿಮೆಯಾಗಿರುವ ಕಾರಣ ಚಹಾ ಹರಾಜು ಪ್ರಕ್ರಿಯೆಯಲ್ಲಿ ಬೆಲೆಗಳು ಬಿಗಿಯಾಗಿವೆ. ಮತ್ತು ಏರಿಕೆಯ ಹಾದಿಯಲ್ಲಿವೆ. ಈ ವರ್ಷ ಹೆಚ್ಚು ಕಡಿಮೆ 2 ಲಕ್ಷ ಟನ್ ಚಹಾ ಬೆಳೆ ಹಾನಿಗೀಡಾಗಿದೆ. ಚಹಾ ಬೆಲೆಯೂ ಏರಿಕೆಯಾಗಿದೆ. ಪ್ರಾದೇಶಿಕ ಮಾರುಕಟ್ಟೆಯಲ್ಲಿ ಅತ್ಯುತ್ತಮ ಗುಣಮಟ್ಟದ ಚಹಾ ಪುಡಿ ಬೆಲೆ ಸದ್ಯ ಕಿಲೋ ಮೇಲೆ 100 ರೂಪಾಯಿ ತನಕವೂ ಏರಿಕೆಯಾದೀತು ಎಂದು ಕಲ್ಕತಾ ಟೀ ಟ್ರೇಡರ್ಸ್​ ಅಸೋಸಿಯೇಷನ್​(ಸಿಟಿಟಿಎ) ಚೇರ್ಮನ್ ವಿಜಯ್ ಜಗನ್ನಾಥ್​ ಅಂದಾಜಿಸಿದ್ದಾರೆ. (ಏಜೆನ್ಸೀಸ್)