ವಾಣಿಜ್ಯ

ಕಲ್ಯಾಣಪುರ ಸಂತೆಮಾರುಕಟ್ಟೆ ಆರಂಭ ಮುನ್ನವೇ ಅವ್ಯವಸ್ಥೆ

ಉಡುಪಿ: ಸಂತೆಕಟ್ಟೆಯಲ್ಲಿ ಸುಸಜ್ಜಿತ ಸಂತೆ ಮಾರುಕಟ್ಟೆ ನಿರ್ಮಾಣವಾಗಿ ವರ್ಷ ಕಳೆದಿದ್ದು, ಸಂತೆ ಆರಂಭಗೊಳ್ಳುವ ಮುನ್ನವೇ ಅವ್ಯವಸ್ಥೆ ಆಗರವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನೆಗುದಿಗೆ ಬಿದ್ದಿದ್ದ ಸಂತೆ ಮಾರುಕಟ್ಟೆ ಉದ್ಘಾಟನೆ ಶನಿವಾರ ನೆರವೇರಿದೆ. ಉದ್ಘಾಟನೆ ಆದರೂ ಸಂತೆ ಮಾರುಕಟ್ಟೆ ಸದ್ಯಕ್ಕೆ ಹೆದ್ದಾರಿಯಿಂದ ನೂತನ ಮಾರುಕಟ್ಟೆಗೆ ಸ್ಥಳಾಂತರಗೊಂಡಿಲ್ಲ. ಸಂತೆಕಟ್ಟೆ ಜಂಕ್ಷನ್ ಸಮೀಪ ರಸ್ತೆ. ಫುಟ್‌ಪಾತ್ ಮೇಲೆ ಸಂತೆ ನಡೆಯುವಂತಾಗಿದೆ. ಗೋಪಾಲಪುರ ವಾರ್ಡ್‌ನ ಮೌಂಟ್ ರೋಸರಿ ಚರ್ಚ್ ಎದುರಿನ ವಿಶಾಲ ಜಾಗದಲ್ಲಿ ಸಂತೆಮಾರುಕಟ್ಟೆ ನಿರ್ಮಿಸಲಾಗಿದೆ. 17,500 ಚದರ ಅಡಿ ಪ್ರದೇಶದಲ್ಲಿ 99.5 ಲಕ್ಷ ರೂ. ವೆಚ್ಚದಲ್ಲಿ ಎತ್ತರದ ಕಟ್ಟೆಗಳು ಹಾಗೂ ಕಾಂಕ್ರೀಟ್ ನೆಲಹಾಸಿನಿಂದ ಆಧುನೀಕರಣಗೊಳಿಸಿ ನಿರ್ಮಿಸಲಾಗಿದೆ. ಏಕಕಾಲದಲ್ಲಿ 85ಕ್ಕೂ ಅಧಿಕ ಮಂದಿ ಕುಳಿತು ವ್ಯಾಪಾರ ನಡೆಸಬಹುದು. ಸಾರ್ವಜನಿಕರಿಗೆ, ವ್ಯಾಪಾರಿಗಳಿಗೆ ಸಾಕಷ್ಟು ಅನುಕೂಲಕರ ವ್ಯವಸ್ಥೆ ಇಲ್ಲಿದೆ. ಮಳೆ ನೀರು ಹರಿಯುವ ಪೈಪ್ ಮುರಿದಿದ್ದು, ಶೌಚಗೃಹ ಅವ್ಯವಸ್ಥೆಯ ಆಗರವಾಗಿದೆ.

ಮಾರುಟಕಟೆ ಶೌಚಗೃಹ ನಿರ್ವಹಣೆ ಇಲ್ಲದೆ ಶೋಚನೀಯ ಸ್ಥಿತಿಯಲ್ಲಿದೆ. ಕಮೋಡ್‌ಗೆ ಸಂಪರ್ಕಿಸುವ ಪೈಪ್‌ಗಳು ತುಂಡರಿಸಿಕೊಂಡು ಬಿದ್ದಿವೆ. ಕಿಟಕಿ ಗಾಜುಗಳು ಪುಡಿಯಾಗಿವೆ. ನೀರಿನ ಸಂಪರ್ಕ ಇಲ್ಲದ ಕಾರಣ ಉಪಯೋಗಿಸಿದ ಪರಿಣಾಮ ಶೌಚಗೃಹ ನರಕಮಯವಾಗಿದೆ.

ಸಂತೆಕಟ್ಟೆಯ ನೂತನ ಸಂತೆ ಮಾರುಕಟ್ಟೆ ಉದ್ಘಾಟನೆಯಾಗಿದ್ದು, ಕೆಲವು ಸಣ್ಣಪುಟ್ಟ ಕೆಲಸಗಳು ಮುಗಿಸಬೇಕಿದೆ. ಜನವರಿ 1ರಿಂದ ನೂತನ ಸಂತೆಮಾರುಕಟ್ಟೆ ಕಾರ್ಯಾರಂಭವಾಗಲಿದೆ. ತುಂಡಾಗಿರುವ ಮಳೆ ನೀರು ಹರಿಯುವ ಪೈಪು, ಶೌಚಗೃಹ ಅವ್ಯವಸ್ಥೆ ಸರಿಪಡಿಸಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು.

-ಸುಮಿತ್ರಾ ನಾಯಕ್, ಉಡುಪಿ ನಗರಸಭೆ ಅಧ್ಯಕ್ಷೆ

ಸಂತೆಕಟ್ಟೆ ನೂತನ ಸಂತೆ ಮಾರುಕಟ್ಟೆ ಮೂಲಭೂತ ಸೌಕರ್ಯಗಳು ಸಂಪುರ್ಣ ವ್ಯವಸ್ಥಿತವಾಗಬೇಕು. ನೂತನ ಶೌಚಗೃಹ ಪರಿಸ್ಥಿತಿ ಅಧೋಗತಿಯಾಗಿದೆ. ಸಾರ್ವಜನಿಕರಿಗೆ, ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೀರು, ಶೌಚಗೃಹ ವ್ಯವಸ್ಥೆ ಕಲ್ಪಿಸಿಕೊಡಬೇಕು.

-ಜನಾರ್ದನ ತೋನ್ಸೆ, ಜಿಲ್ಲಾ ಪಂಚಾಯಿತಿ ಸದಸ್ಯ