ವಾಣಿಜ್ಯ

ಕನ್ನಡವೂ ಸೇರಿ 8 ಭಾಷೆಗಳನ್ನು ಬೆಂಬಲಿಸುವ ಮೇಡ್​ ಇನ್ ಇಂಡಿಯಾ ಜಿಯೋ ಬ್ರೌಸರ್​

ನವದೆಹಲಿ: ಸ್ವದೇಶಿ ಸ್ವಾವಲಂಬನೆಯ ಆತ್ಮನಿರ್ಭರ ಭಾರತದ ಜಪ ಅನುರಣಿಸುತ್ತಿರುವಾಗಲೇ ಜಿಯೋ ಹೊಚ್ಚ ಹೊಸ ಸ್ವದೇಶಿ ನಿರ್ಮಿತ ಜಿಯೋ ಪೇಜಸ್​ ಎಂಬ ಮೊಬೈಲ್ ಬ್ರೌಸರ್ ಅನ್ನು ಇಂದು ಅನಾವರಣಗೊಳಿಸಿದೆ. ಇದು ಕನ್ನಡವೂ ಸೇರಿ 8 ಭಾರತೀಯ ಭಾಷೆಗಳನ್ನು ಸ್ವೀಕರಿಸಿ ಕಾರ್ಯಾಚರಿಸುತ್ತದೆ.

ಹೊಸ ಮಾದರಿಯ ಬ್ರೌಸರ್ ನಿನ್ನೆಯಿಂದ ಗೂಗಲ್ ಪ್ಲೇಸ್ಟೋರ್​ನಲ್ಲಿ ಲಭ್ಯವಿದೆ. ಜಿಯೋ ಪೇಜಸ್​ ಅನ್ನು ಕ್ರೋಮಿಯಮ್ ಬ್ಲಿಂಕ್ ಎಂಜಿನ್​ನ ಆಧಾರದಲ್ಲಿ ನಿರ್ಮಿಸಲಾಗಿದೆ.ಇದು ಕ್ಷಿಪ್ರವಾಗಿ ಕೆಲಸ ಮಾಡುತ್ತಿದ್ದು, ವೆಬ್​ಪೇಜ್ ರೆಂಡರಿಂಗ್​, ವೇಗವಾಗಿ ಪೇಜ್ ಲೋಡಿಂಗ್​, ತಡೆ ಇಲ್ಲದ ಮೀಡಿಯಾ ಸ್ಟ್ರೀಮಿಂಗ್​, ಇಮೋಜಿ ಡೊಮೈನ್​ ಸಪೋರ್ಟ್​, ಎನ್​ಕ್ರಿಪ್ಟೆಡ್ ಕನೆಕ್ಷನ್​ಗಳನ್ನು ಹೊಂದಿದೆ.

ಈ ಬ್ರೌಸರ್​ನ ಪರಿಕಲ್ಪನೆ ಮತ್ತು ವಿನ್ಯಾಸ, ನಿರ್ಮಾಣ ಎಲ್ಲವೂ ಭಾರತದಲ್ಲೇ ಆಗಿದೆ. ಇಂಗ್ಲಿಷ್ ಭಾಷೆಯ ಹೊರತಾಗಿ, ಹಿಂದಿ, ಮರಾಠಿ, ತಮಿಳು, ಗುಜರಾತಿ, ತೆಲುಗು, ಮಲಯಾಳಂ, ಕನ್ನಡ ಮತ್ತು ಬಂಗಾಳಿ ಭಾಷೆಯಲ್ಲಿ ಇದು ಕಾರ್ಯಾಚರಿಸುತ್ತದೆ. ಬಳಕೆದಾರರು ತಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ರಾಜ್ಯವನ್ನು ಆಯ್ಕೆ ಮಾಡಿಕೊಂಡರೆ ಸ್ಥಳೀಯವಾಗಿ ಜನಪ್ರಿಯವಾಗಿರುವ ವೆಬ್​ ತಾಣಗಳು ಪರದೆ ಮೇಲೆ ಮೂಡುತ್ತವೆ ಎಂದು ಕಂಪನಿ ಮೂಲಗಳು ತಿಳಿಸಿವೆ.(ಏಜೆನ್ಸೀಸ್)