ಬೆಂಗಳೂರು: ದೇಶದ ಎರಡನೆ ಅತಿದೊಡ್ಡ ಐಟಿ ಸೇವಾ ಸಂಸ್ಥೆ ಇನ್ಫೋಸಿಸ್ ಶುಕ್ರವಾರ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಇದರಂತೆ, ಡಿಸೆಂಬರ್ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡ 23.7ರ ಹೆಚ್ಚಳ ಆದಾಯದಲ್ಲಿ ಕಂಡಿದ್ದು, ಕನ್ಸೋಲಿಡೇಟೆಡ್ ನೆಟ್ ಪ್ರಾಫಿಟ್ 4,466 ಕೋಟಿ ಆಗಿದೆ.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ಗೆ ಸಲ್ಲಿಸಿದ್ದ ದಾಖಲೆಗಳ ಪ್ರಕಾರ ಕಳೆದ ವರ್ಷದ ಇದೇ ಅವಧಿಯ ನೆಟ್ ಪ್ರಾಫಿಟ್ 3,610 ಕೋಟಿ ರೂಪಾಯಿ ಆಗಿತ್ತು. ಕಳೆದ ಹಣಕಾಸು ವರ್ಷದ ಇದೇ ಅವಧಿಯ ಆದಾಯ 21,400 ಕೋಟಿ ಇದ್ದುದ್ದು, ಈ ವರ್ಷ ಶೇಕಡ 7.9 ಹೆಚ್ಚಳವಾಗಿದ್ದು 23,092 ಕೋಟಿ ಆಗಿದೆ.
ಈ ಬೆಳವಣಿಗೆ ಪ್ರಕಾರ 2019-20ರ ಹಣಕಾಸು ವರ್ಷದ ಆದಾಯದ ಔಟ್ಲುಕ್ ಶೇಕಡ 10-10.5ರ ನಡುವೆ ಇರಬಹುದು. ಈ ಹಿಂದೆ ಅಕ್ಟೋಬರ್ನಲ್ಲಿನ ಅಂಕಿ ಅಂಶದ ಪ್ರಕಾರ ಶೇಕಡ 9-10 ಎಂದು ಅಂದಾಜಿಸಲಾಗಿತ್ತು. ಇನ್ಫೋಸಿಸ್ ಸಿಇಒ, ಎಂಡಿ ಸಲಿಲ್ ಪಾರೇಖ್, ಗ್ರಾಹಕ ಸೇವೆಯಲ್ಲಿ ಸುಸ್ಥಿರತೆಯನ್ನು ನಾವು ಕಾಪಾಡಿಕೊಂಡಿದ್ದೇವೆ. ಡಿಜಿಟಲ್ ಟ್ರಾನ್ಸ್ಫಾರ್ಮೇಷನ್ ಯುಗದಲ್ಲಿ ಗ್ರಾಹಕರು ನಮ್ಮ ಜತೆಗೆ ಪಾಲುದಾರಿಕೆ ಮುಂದುರಿಸುತ್ತಿರುವುದರ ದ್ಯೋತಕ ಇದು ಎಂದಿದ್ದಾರೆ. (ಏಜೆನ್ಸೀಸ್)