ಮುಂಬೈ: ಮುಂಬೈ ಷೇರುಪೇಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ ಭರ್ಜರಿ ಏರಿಕೆ ಕಂಡುಬಂದಿದೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 2,476 ಅಂಶಗಳ ಏರಿಕೆ ದಾಖಲಿಸಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 702.10 ಅಂಶ ದಾಖಲಿಸಿತು.
2009ರ ನಂತರದಲ್ಲಿ ಷೇರುಪೇಟೆಯಲ್ಲಿ ಒಂದೇ ದಿನ ಇಷ್ಟೊಂದು ಏರಿಕೆ ಕಂಡುಬಂದಿದ್ದು ಇದೇ ಮೊದಲಾಗಿದೆ.
ಮಂಗಳವಾರದ ಮಧ್ಯಾವಧಿ ವಹಿವಾಟಿನಲ್ಲಿ ಸೆನ್ಸೆಕ್ಸ್ ದಿನದ ಅತ್ಯಧಿಕ 2,566.70 ಅಂಶಗಳ ಏರಿಕೆ ದಾಖಲಿಸಿತ್ತು. ನಂತರ ಸ್ವಲ್ಪ ಇಳಿಕೆಯೊಂದಿಗೆ 2,476.26 ಅಂಶಗಳಿಗೆ ಇಳಿದು, 30,157.65 ಅಂಶಗಳಿಗೆ ವಹಿವಾಟು ಮುಗಿಸಿತು. ನಿಫ್ಟಿ ಒಟ್ಟಾರೆ 702.10 ಅಂಶಗಳ ಏರಿಕೆಯೊಂದಿಗೆ 8,785.90 ಅಂಶಗಳಿಗೆ ವಹಿವಾಟು ನಿಲ್ಲಿಸಿತು.
ಸೆನ್ಸೆಕ್ಸ್ ಶುಕ್ರವಾರ 674.36 ಅಂಶಗಳ ಕುಸಿತದೊಂದಿಗೆ 27,590.95 ಅಂಶಗಳಿಗೆ ಇಳಿದಿತ್ತು. ನಿಫ್ಟಿ 170 ಅಂಶಗಳ ಇಳಿಕೆಯೊಂದಿಗೆ 8,083.80 ಅಂಶಗಳಿಗೆ ಇಳಿದಿತ್ತು.