ಮುಂಬೈ: ಏಷ್ಯನ್ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್ ಆತಂಕ ತೀವ್ರವಾಗಿ ಕಾಡಿದ್ದು, ಜಾಗತಿಕ ಹೂಡಿಕೆದಾರರು ವಹಿವಾಟಿಗೆ ಹಿಂದೇಟು ಹಾಕಿದ್ದರ ಪರಿಣಾಮ ಷೇರುಗಳು ನಷ್ಟ ಅನುಭವಿಸಿವೆ. ಇದರ ಪರಿಣಾಮ ಭಾರತದ ಷೇರುಪೇಟೆಯ ಮೇಲೂ ಆಗಿದ್ದು, ನಿರಂತರ ನಾಲ್ಕು ಅವಧಿಗೆ ಏರಿಕೆ ದಾಖಲಿಸಿದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಸೂಚ್ಯಂಕ ನಿಫ್ಟಿ ಕೂಡ ಕುಸಿತ ದಾಖಲಿಸಿವೆ.
ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 164.18 ಅಂಶ (0.40%) ಇಳಿಕೆಯೊಂದಿಗೆ 41,141.85ರಲ್ಲೂ, ನಿಫ್ಟಿ 39.60 ಅಂಶ (0.33%) ಇಳಿಕೆಯೊಂದಿಗೆ 12,098.35ರಲ್ಲೂ ವಹಿವಾಟು ಮುಗಿಸಿವೆ. ಇಂಟ್ರಾ ಡೇ ವಹಿವಾಟಿನಲ್ಲಿ ಸೆನ್ಸೆಕ್ಸ್ ಕನಿಷ್ಠ 41,073.36 ಅಂಶ ಮತ್ತು ಗರಿಷ್ಠ 41,394.41 ಅಂಶದ ನಡುವೆ ಹೊಯ್ದಾಡುತ್ತಿತ್ತು. ಇದೇ ರೀತಿ ನಿಫ್ಟಿ 12,073.95 ಮತ್ತು 12,154.70 ನಡುವೆ ವಹಿವಾಟು ನಡೆಸಿತ್ತು.
ಸೆನ್ಸೆಕ್ಸ್ ಚಾರ್ಟ್ನಲ್ಲಿ ಇಂಡಸ್ಇಂಡ್ ಬ್ಯಾಂಕ್, ಎಂಆ್ಯಂಡ್ ಎಂ, ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಸ್ಟೀಲ್, ಭಾರ್ತಿ ಏರ್ಟೆಲ್ ಷೇರುಗಳು ಹೆಚ್ಚಿನ ನಷ್ಟ ಅನುಭವಿಸಿದರೆ ಎನ್ಟಿಪಿಸಿ, ಒಎನ್ಜಿಸಿ, ಏಕ್ಸಿಸ್ ಬ್ಯಾಂಕ್, ಎಚ್ಸಿಎಲ್ ಟೆಕ್, ಹೀರೋ ಮೋಟೋಕಾರ್ಪ್ ಲಾಭ ಗಳಿಸಿವೆ. ಸೆನ್ಸೆಕ್ಸ್ ಪಟ್ಟಿಯಲ್ಲಿನ 30 ಷೇರುಗಳ ಪೈಕಿ 14 ನಷ್ಟದಲ್ಲೂ, 16 ಲಾಭದದಲ್ಲೂ ವಹಿವಾಟು ಮುಗಿಸಿವೆ. (ಏಜೆನ್ಸೀಸ್)