ವಿಜಯಪುರ: ಕೋಳಿಗಳಲ್ಲಿ ಕೋವಿಡ್-19 (ಕರೊನಾ) ಸೋಂಕು ಕಂಡು ಬಂದಿದೆ ಎನ್ನುವ ವದಂತಿ ಜಾಲತಾಣಗಳಲ್ಲಿ ಹರಡುತ್ತಿರುವುದರಿಂದ ಕುಕ್ಕು ಟೋದ್ಯಮಕ್ಕೆ ಪೆಟ್ಟು ಬಿದ್ದಿದ್ದು, ಕೋಳಿ ಮಾಂಸದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.
ಕಳೆದ ವಾರ ವಿಜಯಪುರ ಮುಕ್ತ ಮಾರುಕಟ್ಟೆಯಲ್ಲಿ ಕೆಜಿ ಕೋಳಿ ಮಾಂಸಕ್ಕೆ 160 ರೂ. ದರ ಇತ್ತು. ಈಗ 120 ರೂ.ಗೆ ಇಳಿಕೆಯಾಗಿದ್ದು, ಕೋಳಿ ಸಾಕಣೆದಾರರು, ಮಾರಾಟಗಾರರು ಕಂಗಾಲಾಗಿದ್ದಾರೆ. ಕರೊನಾ ವೈರಸ್ ವದಂತಿಯಿಂದ ಕೋಳಿ ಬಳಕೆ ಪ್ರಮಾಣವೂ ಶೇ.30 ಕಡಿಮೆಯಾಗಿದೆ.
ಕುರಿ, ಮೇಕೆ ಮಾಂಸಕ್ಕೆ ಡಿಮಾಂಡ್: ಕೋಳಿಗೆ ಬೇಡಿಕೆ ಕಡಿಮೆಯಾದ ಬೆನ್ನಲ್ಲೇ ಕುರಿ, ಮೇಕೆ ಮಾಂಸ ದರ ಹೆಚ್ಚಳಗೊಂಡಿದೆ. ಕೆಜಿಗೆ 520 ರಿಂದ 540 ರೂ.ಇದ್ದ ಮೇಕೆ ಮಾಂಸದ ದರ 560ರಿಂದ 580 ರೂ.ವರೆಗೆ ಏರಿಕೆಯಾಗಿದೆ. ಕುರಿ ಮಾಂಸ ದರ ಕೂಡ ಹೆಚ್ಚಳವಾಗಿದೆ. ಪ್ರಸ್ತುತ ಪ್ರತಿ ಕೆಜಿಗೆ 550 ರೂ. ನಿಂದ 570 ರೂ. ವರೆಗೆ ದರ ಇದೆ ಎಂದು ವ್ಯಾಪಾರಿ ಮಹಮದ್ ಅಸ್ಲಾಂ ವಿಜಯವಾಣಿಗೆ ತಿಳಿಸಿದ್ದಾರೆ.
ಆತಂಕ ಪಡುವ ಅಗತ್ಯವಿಲ್ಲ: ಕೋಳಿಗಳಲ್ಲಿ ಕರೊನಾ ಸೋಂಕು ಕಂಡು ಬಂದಿದೆ ಎನ್ನುವುದು ಕೇವಲ ವದಂತಿ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಸ್ಪಷ್ಟಪಡಿಸಿವೆ. ವದಂತಿಯಿಂದಾಗಿ ಕೋಳಿ ಮಾಂಸ ತಿನ್ನುವವರ ಸಂಖ್ಯೆ ಇಳಿಕೆಯಾಗಿ ಕುಕ್ಕುಟೋದ್ಯಮಕ್ಕೆ ಸಂಕಷ್ಟ ಎದುರಾಗಿದೆ ಎನ್ನುತ್ತಾರೆ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ವೇಣುಗೋಪಾಲ.
ಕೋಳಿಗಳಲ್ಲಿ ಕರೋನಾ ವೈರಸ್ ಕಂಡು ಬಂದಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ, ಪ್ರತಿ ಜಿಪಂ ಸದಸ್ಯರ ಮೂಲಕ ಫಲಾನುಭವಿಗಳಿಗೆ 400 ಕೋಳಿಮರಿ ವಿತರಣೆಗೆ ಸಿದ್ಧತೆ ನಡೆಸಲಾಗಿದೆ. | ಯು.ಜೆ.ನಾಳ ಸಹಾಯಕ ನಿರ್ದೇಶಕ ಕೋಳಿ ಸಾಕಣೆ ಮತ್ತು ತರಬೇತಿ ಕೇಂದ್ರ ವಿಜಯಪುರ
| ಹೀರಾನಾಯ್ಕ ಟಿ