ವಾಣಿಜ್ಯ

ಭಾರತದ ವಿದೇಶಿ ವಿನಿಮಯ ಮೀಸಲು ದಾಖಲೆಯ ಏರಿಕೆ

lakshmihegde

ಮುಂಬೈ: ಭಾರತದ ವಿದೇಶಿ ವಿನಿಮಯ (ಫೊರೆಕ್ಸ್) ಮೀಸಲು ಪ್ರಮಾಣ ಇತ್ತೀಚಿನ ದಿನಗಳಲ್ಲಿ ಭಾರಿ ಏರಿಕೆಯನ್ನು ದಾಖಲಿಸಿದೆ. ಇದೇ ಮೊದಲ ಬಾರಿಗೆ ಅದು ಅರ್ಧ ಟ್ರಿಲಿಯನ್ ಡಾಲರ್ (37.97 ಕೋಟಿ ರೂ.) ದಾಟಿದೆ. ಜೂನ್ 5ರ ಅಂತ್ಯಕ್ಕೆ 8.22 ಬಿಲಿಯನ್ ಡಾಲರ್ ( 62,437 ಕೋಟಿ ರೂ.) ಏರಿಕೆ ಕಂಡಿದ್ದೇ ಈ ದಾಖಲೆಗೆ ಕಾರಣವಾಗಿದೆ ಎಂದು ಆರ್​ಬಿಐ ಇತ್ತೀಚಿನ ಅಂಕಿ-ಅಂಶ ತಿಳಿಸಿದೆ. ಆ ವಾರದಲ್ಲಿ ಫೊರೆಕ್ಸ್ 501.70 ಬಿಲಿಯನ್ ಡಾಲರ್​ಗೆ (ಅರ್ಧ ಟ್ರಿಲಿಯನ್) ಏರಿದೆ. ವಿದೇಶಿ ಕರೆನ್ಸಿ ಆಸ್ತಿಯಲ್ಲಿ (ಎಫ್​ಸಿಎ) ಅಪಾರ ಪ್ರಮಾಣದ ಏರಿಕೆಯಾಗಿದ್ದರಿಂದ ಈ ದಾಖಲೆ ಸಾಧ್ಯವಾಗಿದೆ ಎಂದು ಆರ್​ಬಿಐ ತಿಳಿಸಿದೆ. ಮೇ 29ರಂದು ಮುಕ್ತಾಯವಾದ ವಾರದಲ್ಲಿ ವಿದೇಶಿ ವಿನಿಮಯದಲ್ಲಿ 3.44 ಬಿಲಿಯನ್ ಡಾಲರ್( 26 ಸಾವಿರ ಕೋಟಿ ರೂ.) ಏರಿಕೆಯಾಗಿ ಒಟ್ಟು ವಿನಿಮಯ 493.48 ಬಿಲಿಯನ್ ಡಾಲರ್ ( 37.48 ಲಕ್ಷ ಕೋಟಿ ರೂ.) ಆಗಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2019ರ ಸೆಪ್ಟೆಂಬರ್​ನಲ್ಲಿ ಕಾರ್ಪೆರೇಟ್ ತೆರಿಗೆ ಕಡಿತ ಘೊಷಿಸಿದ ನಂತರ ಕಳೆದ ಒಂಬತ್ತು ತಿಂಗಳಿಂದ ಫೊರೆಕ್ಸ್ ಮೀಸಲಿನಲ್ಲಿ ಭಾರಿ ಹೆಚ್ಚಳವಾಗುತ್ತಿರುವುದನ್ನು ಗಮನಿಸಬಹುದಾಗಿದೆ. ಅಂದಿನಿಂದ ಫೊರೆಕ್ಸ್ ಮೀಸಲು 73 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ. ಎಫ್​ಸಿಎಯಲ್ಲಿ ಫೊರೆಕ್ಸ್​ನಲ್ಲಿರುವ ಯೂರೋ, ಪೌಂಡ್ ಮತ್ತು ಯೆನ್​ನಂಥ ಅಮೆರಿಕೇತರ ಕರೆನ್ಸಿಗಳ ಮೌಲ್ಯ ಹೆಚ್ಚಳ (ಅಪ್ರಿಸಿಯೇಷನ್) ಅಥವಾ ಮೌಲ್ಯ ಇಳಿಕೆ (ಡೆಪ್ರಿಸಿಯೇಶನ್) ಡಾಲರ್ ಮೂಲಕ ನಡೆಸುವ ವಿದೇಶಿ ವಿನಿಯಮದ ಮೇಲೆ ಪರಿಣಾಮ ಬೀರುತ್ತದೆ. -ಏಜೆನ್ಸೀಸ್

ಬಂಗಾರದಲ್ಲಿ ವಿದೇಶಿ ವಿನಿಮಯ

ಕೆಲವು ದೇಶಗಳು ಬಂಗಾರವನ್ನು ವಿದೇಶಿ ವಿನಿಮಯದ ಭಾಗವಾಗಿ ಇಡುತ್ತವೆ. ವಿಶೇಷ ಡ್ರಾಯಿಂಗ್ ಹಕ್ಕನ್ನು ಕೂಡ ಮೀಸಲು ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಅರ್ಧ ಟ್ರಿಲಿಯನ್ ಡಾಲರ್​ಗೆ ಹೆಚ್ಚಳ ಕರೊನಾ ಸಂಕಟದ ಮಧ್ಯೆ ಆಶಾಕಿರಣ

ಫೊರೆಕ್ಸ್ ಮೀಸಲು ಅಂದರೇನು?

ಯಾವುದೇ ಒಂದು ದೇಶದ ಕೇಂದ್ರೀಯ ಬ್ಯಾಂಕ್ (ಭಾರತದಲ್ಲಿ ಆರ್​ಬಿಐ) ಅಥವಾ ಇತರ ಯಾವುದೇ ವಿತ್ತೀಯ ಪ್ರಾಧಿಕಾರವು ಹೊಂದಿರುವ ನಗದು ಅಥವಾ ಇತರ ಯಾವುದಾದರೂ ಮೀಸಲು ಆಸ್ತಿಯನ್ನು ವಿದೇಶಿ ವಿನಿಮಯ ಮೀಸಲು (ಫೊರೆಕ್ಸ್ ಮೀಸಲು) ಎನ್ನುತ್ತಾರೆ. ದೇಶದ ಪಾವತಿ ಸಮತೋಲನಕ್ಕೆ, ಆಯಾ ದೇಶದ ಕರೆನ್ಸಿಯ ವಿದೇಶಿ ವಿನಿಮಯ ಮೌಲ್ಯದ ಮೇಲೆ ಪ್ರಭಾವ ಬೀರುವುದಕ್ಕೆ ಹಾಗೂ ಹಣಕಾಸು ಮಾರುಕಟ್ಟೆಯ ವಿಶ್ವಾಸವನ್ನು ನಿರ್ವಹಿಸಲು ಅದು ಮುಖ್ಯ. ಇತ್ತೀಚಿನ ದಿನಗಳಲ್ಲಿ ಮೀಸಲನ್ನು ಒಂದು ಅಥವಾ ಹೆಚ್ಚಿನ ರಿಸರ್ವ್ ಕರೆನ್ಸಿಗಳಲ್ಲಿ ಇಡಲಾಗುತ್ತದೆ. ಬಹುತೇಕವಾಗಿ ಅಮೆರಿಕ ಡಾಲರ್ ಅಥವಾ ಸ್ವಲ್ಪ ಮಟ್ಟಿಗೆ ಯೂರೋದಲ್ಲಿ ಇಡಲಾಗುತ್ತದೆ.

ಕರೊನಾ ನಡುವೆಯೂ ಸಂತಸದ ಸುದ್ದಿ

ಕೋವಿಡ್-19 ಮಹಾಮಾರಿ ವಕ್ಕರಿಸುವ ಮುನ್ನವೇ ದೇಶದ ಬೆಳವಣಿಗೆ ದರ (ಜಿಡಿಪಿ) ತೀವ್ರ ಕುಂಠಿತಗೊಂಡು ಆರ್ಥಿಕತೆ ಕುಸಿತಗೊಂಡಿತ್ತು. ಕರೊನಾ ಕಾರಣ ವಿಧಿಸಲಾದ ಲಾಕ್​ಡೌನ್​ನಿಂದ ಆರ್ಥಿಕ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡು ದೇಶದ ಪರಿಸ್ಥಿತಿ ಕಳವಳಕಾರಿಯಾಗಿದೆ. ಇಂಥ ಸನ್ನಿವೇಶದ ನಡುವೆಯೂ ಫೊರೆಕ್ಸ್​ನಲ್ಲಿ ಹೆಚ್ಚಳವಾಗಿರುವುದು ಸಮಾಧಾನದ ಸಂಗತಿ.

ಚಿನ್ನ ಮೀಸಲು ಕುಸಿತ

ಜೂನ್ 5ಕ್ಕೆ ಅಂತ್ಯವಾದ ವಾರದಲ್ಲಿ ಬಂಗಾರದ ಮೀಸಲು ಪ್ರಮಾಣ 329 ಮಿಲಿಯನ್ ಡಾಲರ್​ನಷ್ಟು (- 2,498 ಕೋಟಿ ರೂ.) ಕುಸಿದು 32.352 ಬಿಲಿಯನ್ ಡಾಲರ್​ಗೆ ( 2.45 ಲಕ್ಷ ಕೋಟಿ ರೂ.) ನಿಂತಿತ್ತು ಎಂದು ಆರ್​ಬಿಐ ವರದಿ ತಿಳಿಸಿದೆ. ಅದೇ ವಾರದಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (ಐಎಂಎಫ್) ವಿಶೇಷ ವಾಪಸಾತಿ (ಸ್ಪೆಷಲ್ ಡ್ರಾಯಿಂಗ್) ಹಕ್ಕಿನ ಪ್ರಮಾಣ 10 ಮಿಲಿಯನ್ ಡಾಲರ್ ( 75.95 ಕೋಟಿ ರೂ.) ಏರಿಕೆಯಾಗಿ 1.44 ಬಿಲಿಯನ್ ಡಾಲರ್​ಗೆ (10,937 ಕೋಟಿ ರೂ.) ತಲುಪಿತ್ತು. ಐಎಂಎಫ್​ನಲ್ಲಿ ಭಾರತದ ಮೀಸಲು ಮೊತ್ತ ಕೂಡ 120 ಮಿಲಿಯನ್ ಡಾಲರ್​ನಷ್ಟು (911 ಕೋಟಿ ರೂ.) ಏರಿಕೆಯಾಗಿ 4.28 ಬಿಲಿಯನ್ ಡಾಲರ್ ( 32,509 ಕೋಟಿ ರೂ.) ಆಗಿತ್ತು ಎಂಬುದು ಆರ್​ಬಿಐ ಮಾಹಿತಿ.

ಹೆಚ್ಚಳಕ್ಕೆ ಕಾರಣ

ಭಾರತೀಯ ಷೇರುಗಳಲ್ಲಿ ವಿದೇಶಿ ವಿಭಾಗದ (ಫಾರಿನ್ ಪೋರ್ಟ್​ಫೋಲಿಯೋ-ಎಫ್​ಪಿಐ) ಹೂಡಿಕೆದಾರರ ಹೂಡಿಕೆ ಹಾಗೂ ಎಫ್​ಡಿಐನಲ್ಲಿ ಏರಿಕೆಯಾಗಿರುವುದೇ ಫೊರೆಕ್ಸ್ ಮೀಸಲು ಹೆಚ್ಚಳಕ್ಕೆ ಪ್ರಮುಖ ಕಾರಣ. ಕಳೆದ 2 ತಿಂಗಳಲ್ಲಿ ವಿದೇಶಿ ಹೂಡಿಕೆದಾರರು ಅನೇಕ ಭಾರತೀಯ ಕಂಪನಿಗಳಲ್ಲಿ ಬಂಡವಾಳ ಹೂಡಿದ್ದಾರೆ. ಮಾರ್ಚ್​ನಲ್ಲಿ 4 ಬಿಲಿಯನ್ ಡಾಲರ್ (30,382 ಕೋಟಿ ರೂ.) ಎಫ್​ಡಿಐ ಬಂದಿದ್ದರೆ ಏಪ್ರಿಲ್​ನಲ್ಲಿ ಅದು 2.10 ಬಿಲಿಯನ್ ಡಾಲರ್ (-15,950 ಕೋಟಿ ರೂ.) ಆಗಿದೆ ಎಂದು ಆರ್​ಬಿಐ ತಿಳಿಸಿದೆ.

ಕಚ್ಚಾ ತೈಲ ಬೆಲೆಯಲ್ಲಿ ಕುಸಿದು, ಆಮದು ವೆಚ್ಚದಲ್ಲಿ ಭಾರಿ ಕಡಿತವಾಗಿ ವಿದೇಶಿ ವಿನಿಮಯ ಉಳಿತಾಯವಾಗಿರುವುದು ಕೂಡ ಫೊರೆಕ್ಸ್ ಏರಿಕೆಗೆ ಕಾರಣವಾಗಿದೆ. ವಿದೇಶಿ ಪಾವತಿಗಳು, ವಿದೇಶ ಪ್ರವಾಸಗಳು ಕೂಡ ತೀವ್ರವಾಗಿ ಕುಸಿದಿದೆ. ಏಪ್ರಿಲ್​ನಲ್ಲಿ ಶೇಕಡಾ 61ರಷ್ಟು ಕುಸಿತವಾಗಿದೆ. ಹೀಗಾಗಿ, ಮೇ-ಜೂನ್ ತಿಂಗಳಲ್ಲಿ ಡಾಲರ್ ಹೊರಹೋಗುವಿಕೆ ಇನ್ನಷ್ಟು ಕಡಿಮೆಯಾಗಿದೆ.

ವಿದೇಶಿ ಆಸ್ತಿ

ಫೊರೆಕ್ಸ್ ಮೀಸಲು ಚಿನ್ನ, ಐಎಂಎಫ್​ನಿಂದ ಸ್ಪೆಷಲ್ ಡ್ರಾಯಿಂಗ್ ಹಕ್ಕು (ಎಸ್​ಡಿಆರ್) ಮತ್ತು ಬಂಡವಾಳ ಮಾರಕಟ್ಟೆಗೆ ಹರಿದು ಬರುವ ಹೂಡಿಕೆ, ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್​ಡಿಐ) ಹಾಗೂ ಬಾಹ್ಯ ವಾಣಿಜ್ಯ ಸಾಲಗಳನ್ನೊಳಗೊಂಡ ವಿದೇಶಿ ಕರೆನ್ಸಿ ಆಸ್ತಿಯಾಗಿರುತ್ತದೆ. ಭಾರತದಲ್ಲಿ ಇದನ್ನು ಆರ್​ಬಿಐ ನಿಯಂತ್ರಿಸುತ್ತದೆ. 1991 ಮಾರ್ಚ್​ನಲ್ಲಿ ಭಾರತದ ಫೊರೆಕ್ಸ್ 5.80 ಬಿಲಿಯನ್ ಡಾಲರ್ ಆಗಿತ್ತು. ಫೊರೆಕ್ಸ್ ಆಸ್ತಿಯು ಬ್ಯಾಂಕ್ ನೋಟ್, ಖಜಾನೆ ಬಿಲ್ ಅಥವಾ ಇತರೆ ಸರ್ಕಾರದ ಬಾಂಡ್​ಗಳನ್ನು ಒಳಗೊಂಡಿರಬಹುದಾಗಿದೆ.

ಮಾರ್ಚ್​ನಲ್ಲಿ ಸಾಲ ಮತ್ತು ಈಕ್ವಿಟಿ ವಿಭಾಗಗಳಿಂದ ತಲಾ 60,000 ಕೋಟಿ ರೂ. ಎಫ್​ಪಿಐ ಹಿಂದೆ ಪಡೆದಿದ್ದವು. ಅದು ಈಗ ಮರಳುತ್ತಿರುವುದು ಉತ್ತಮ ಲಕ್ಷಣ. ಜೂನ್ ಮೊದಲ ವಾರದಲ್ಲೇ ಅವುಗಳಿಂದ 2.75 ಬಿಲಿಯನ್ ಡಾಲರ್ ( 19,520 ಕೋಟಿ ರೂ.) ಬಂಡವಾಳ ಹರಿದುಬಂದಿದೆ.