ಐದು ಗ್ಯಾರಂಟಿ ಯೋಜನೆಗಳು, ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಇನ್ನಿತರ ಬದ್ಧತಾ ವೆಚ್ಚಗಳನ್ನು ಭರಿಸುವ ಜತೆಗೆ ಅಭಿವೃದ್ಧಿ ವೆಚ್ಚ ಸರಿದೂಗಿಸಲು ರಾಜ್ಯ ಸರ್ಕಾರ ಏದುಸಿರು ಬಿಡುತ್ತಿದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಹೊರ ಬಿದ್ದಿದೆ.
ರಾಜ್ಯ ಸರ್ಕಾರಿ ಸ್ವಾಮ್ಯದ ಲಾಭದಾಯಕ ಸಾರ್ವಜನಿಕ ನಿಗಮಗಳು ಬ್ಯಾಂಕ್ನಲ್ಲಿರಿಸಿದ ಠೇವಣಿಗಳನ್ನು ಅಂತರ್ ನಿಗಮಗಳಲ್ಲಿ ಹೂಡಿಕೆಗೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ (ಡಿ.7) ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿತ್ತು. ಈ ನಿರ್ಣಯದ ಹಿಂದಿನ ಗುಟ್ಟು ಇದೀಗ ರಟ್ಟಾಗಿದೆ. ಆರ್ಥಿಕ ಇಲಾಖೆ ಉಪ ಕಾರ್ಯದರ್ಶಿ ಇಕ್ರಂ ಷರೀಫ್ ಇದೇ ಅ.29ರಂದು ಹೊರಡಿಸಿದ್ದ ಸುತ್ತೋಲೆ ಪ್ರಕಾರ ಶೇ.30 ವಿಶೇಷ ಲಾಭಾಂಶ ಪಾವತಿಗೆ ಲಾಭದಾಯಕ ಪಿಎಸ್ಯುುಗಳು ನಿರೀಕ್ಷೆಯಂತೆ ಸ್ಪಂದಿಸಿಲ್ಲ. ನಿಗಮಗಳು ಹಿಂದೇಟು ಹಾಕಿದರೂ ಸರ್ಕಾರ ಪಟ್ಟು ಸಡಿಲಿಸಿಲ್ಲ. ಠೇವಣಿ ಅಂತರ್ ನಿಗಮ ಹೂಡಿಕೆ ಹೆಸರಿನಲ್ಲಿ ಲಾಭದಾಯಕ ನಿಗಮಗಳ ‘ಅಸಲು’ಗೆ ಕೈಹಾಕಿದೆ.
ಪ್ರಪಾತಕ್ಕೆ ಬೀಳುವ ಕಳವಳ: ರಾಜ್ಯದಲ್ಲಿ ಸಾರ್ವಜನಿಕ ವಲಯದ 140 ನಿಗಮ/ಸಂಸ್ಥೆ/ ಉದ್ದಿಮೆಗಳಿವೆ. ಈ ಪೈಕಿ ಪಾನೀಯ ನಿಗಮ, ಹಟ್ಟಿ ಚಿನ್ನದ ಗಣಿ ಕಂಪನಿ, ಖನಿಜ ಅಭಿವೃದ್ಧಿ ನಿಗಮ ಸೇರಿ 19 ಸಾರ್ವಜನಿಕ ಉದ್ದಿಮೆಗಳು ಲಾಭದಲ್ಲಿವೆ. ಸಾರ್ವಜನಿಕ ಉದ್ದಿಮೆಗಳು ಪ್ರತಿ ಆರ್ಥಿಕ ವರ್ಷಾಂತ್ಯಕ್ಕೆ ತೆರಿಗೆ ಪಾವತಿಸಿದ ನಂತರ ಉಳಿಯುವ ಮೊತ್ತದಲ್ಲಿ ಶೇ.12 ಲಾಭಾಂಶವಾಗಿ ಪಾವತಿಸಲಾಗುತ್ತಿತ್ತು. ಹಿಂದಿನ ಸರ್ಕಾರ ಲಾಭಾಂಶ ಮೊತ್ತವನ್ನು ವಾರ್ಷಿಕ ಶೇ.30ಕ್ಕೆ ಏರಿಕೆ ಮಾಡಿದ್ದು ಅದನ್ನೂ ಒಪ್ಪಿಕೊಂಡು ಪಾವತಿಸುತ್ತ ಬರಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಇದೇ ಮೊದಲ ಬಾರಿಗೆ ಮಧ್ಯಂತರ ವಿಶೇಷ ಲಾಭಾಂಶವಾಗಿ ಶೇ.30 ಪಾವತಿಗೆ ಸೂಚಿಸಿದೆ. ಇದು ಲಾಭದಾಯಕ ಉದ್ದಿಮೆಗಳನ್ನೂ ಸಹಿತ ನಷ್ಟದ ಪ್ರಪಾತಕ್ಕೆ ತಳ್ಳಲಿದೆ ಎಂದು ಸಾರ್ವಜನಿಕ ವಲಯದ ಸಂಸ್ಥೆಯೊಂದರ ಹಿರಿಯ ಅಧಿಕಾರಿ ಕಳವಳ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳು 31.03.24ಕ್ಕೆ ಅನ್ವಯಿಸುವ ಲೆಕ್ಕಪತ್ರಗಳ ಪ್ರಕಾರ ಮತ್ತು ಎಲ್ಲ ಬ್ಯಾಂಕ್ ಖಾತೆಗಳಲ್ಲಿನ ನಿಯಮಿತ/ನಿಶ್ಚಿತ ಠೇವಣಿಗಳನ್ನು ಒಳಗೊಂಡಂತೆ ನಗದು ಮತ್ತು ನಗದೇತರ ಉಳಿತಾಯದ ಕನಿಷ್ಠ ಶೇ.30 ಮಧ್ಯಂತರ ಲಾಭಾಂಶವನ್ನು 2023-24 ಆರ್ಥಿಕದ ವಿಶೇಷ ಲಾಭಾಂಶವೆಂದು ಸೆಪ್ಟೆಂಬರ್ 30 ಅಥವಾ ಅದಕ್ಕಿಂತ ಮೊದಲೇ ಪಾವತಿಸಬೇಕು ಎಂದು ಸೂಚಿಸಲಾಗಿತ್ತು. ಆದಾಗ್ಯೂ ಪಾವತಿ ಮಾಡಿಲ್ಲ. ಆದ್ದರಿಂದ 31-10-2024 ರೊಳಗೆ ಪಾವತಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆರ್ಥಿಕ ಇಲಾಖೆ ಉಪ ಕಾರ್ಯದರ್ಶಿ ಇಕ್ರಂ ಷರೀಫ್ ಅ.29ರಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿ, ಈ ಕುರಿತು 2024ರ ಜುಲೈ 15ರಂದು ಸುತ್ತೋಲೆ ಹೊರಡಿಸಿದ್ದನ್ನು ನೆನಪಿಸಿದ್ದಾರೆ. ಎಲ್ಲ ಸಾರ್ವಜನಿಕ ಉದ್ದಿಮೆಗಳು ಸರ್ಕಾರಕ್ಕೆ ನಿಯಮಿತವಾಗಿ ಪಾವತಿಸಬೇಕಾದ ಲಾಭಾಂಶ (ಡಿವಿಡೆಂಡ್) ಜತೆಗೆ ತಮ್ಮ ನಗದು ಮತ್ತು ನಗದೇತರ ಉಳಿತಾಯದ ಶೇ.30 ಪಾವತಿಸದೇ ಇದ್ದರೆ, ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದೂ ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.
ಐದು ಗ್ಯಾರಂಟಿಗಳು, ಬದ್ಧತಾ ವೆಚ್ಚಗಳನ್ನು ಭರಿಸುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ಸರಿದೂಗಿಸಲು ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಸರ್ಕಾರ ಕಸರತ್ತು ನಡೆಸಿದೆ. ಇದರಲ್ಲಿ ಹೊಸತಾಗಿ ಅಂತರ್ ನಿಗಮ ಠೇವಣಿ ಹೂಡಿಕೆಯು ಆಪತ್ತು ತರಲಿದೆ ಎಂದು ಸಾರ್ವಜನಿಕ ವಲಯದ ಲಾಭದಾಯಕ ಉದ್ದಿಮೆಗಳು ಭೀತಿಗೊಂಡಿವೆ. ವಿಶೇಷ ಲಾಭಾಂಶ ಪಾವತಿಗೂ ಓಗೊಡದ ಕಾರಣ ಇಂತಹ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ನಷ್ಟದಲ್ಲಿರುವ ಪಿಎಸ್ಯುುಗಳ ಜತೆಗೆ ಲಾಭದಾಯಕ ಉದ್ದಿಮೆಗಳನ್ನೂ ನಷ್ಟದ ಕೂಪಕ್ಕೆ ತಳ್ಳುವ ‘ಅಪಾಯಕಾರಿ ನಿರ್ಧಾರ’ವೆಂದು ಸಶಕ್ತ ಪಿಎಸ್ಯುುಗಳು ಎಚ್ಚರಿಕೆ ನೀಡಿವೆ.
ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಬ್ಯಾಂಕ್ನಲ್ಲಿರಿಸಿದ ಠೇವಣಿ ಮೊತ್ತವು ಸಂಕಷ್ಟದಲ್ಲಿ ಸರ್ಕಾರದ ಕಣ್ಣು ಕುಕ್ಕಿರಬಹುದು. ಆದರೆ ಸಾವಿರಾರು ಕೋಟಿ ರೂ.ಗಳ ಠೇವಣಿ ದಿಢೀರ್ ವೃದ್ಧಿಯಾದದ್ದಲ್ಲ. ಸರ್ಕಾರದಿಂದ ನಯಾ ಪೈಸೆ ನೆರವು ಪಡೆಯದೆ ಸ್ವಂತ ಕಾಲ ಮೇಲೆ ನಿಂತಿವೆ. ಸಂಸ್ಥೆಗಳ ಸಿಬ್ಬಂದಿ ವೇತನ, ಭತ್ಯೆ, ಬೋನಸ್, ಪಿಂಚಣಿ, ಸಾಲದ ನೆರವು ನೀಡುತ್ತಿವೆ. ಕಾಲಕಾಲಕ್ಕೆ ಸಾಮರ್ಥ್ಯ ವಿಸ್ತರಣೆ, ಆಧುನೀಕರಣ, ಬದಲಾದ ತಂತ್ರಜ್ಞಾನ ಬಳಕೆ, ಮತ್ತಿತರ ಅವಶ್ಯಕತೆಗಳನ್ನು ತುಂಬಿಕೊಳ್ಳುತ್ತಿದೆ. ತುರ್ತು ಅಗತ್ಯಗಳಿಗೆ ಬೇಕಾದಾಗ ಬ್ಯಾಂಕ್ನಲ್ಲಿರಿಸಿದ ಠೇವಣಿ ಬಳಕೆಯಾಗುತ್ತದೆ. ದುಬಾರಿ ಬಡ್ಡಿ ದರದ ಸಾಲ, ಸರ್ಕಾರದ ಸಹಾಯ ಕೇಳುವಂತಹ ಅನಿವಾರ್ಯತೆಯೂ ಎದುರಾಗಿಲ್ಲವೆಂದು ಹೆಸರು ಹೇಳಲು ಇಚ್ಚಿಸದ ಮತ್ತೊಂದು ನಿಗಮದ ಅಧಿಕಾರಿ ಹೇಳುತ್ತಾರೆ.
ಅದಕ್ಷ ಆಡಳಿತ, ಲೋಪದೋಷ, ಅವ್ಯವಹಾರ, ವ್ಯರ್ಥ ಹಣಪೋಲು, ಕಾಲಕಾಲಕ್ಕೆ ನವೀಕರಣ ಮಾಡದೇ ಹೋದದ್ದು ನೂರಕ್ಕೂ ಅಧಿಕ ಸಾರ್ವಜನಿಕ ಉದ್ದಿಮೆಗಳು ರೋಗಗ್ರಸ್ತವಾಗಿವೆ. ಲಾಭದ ಹಳಿಗೆ ಬರಲು ಶಕ್ತವಾದ ಕೆಲವು ಸಂಸ್ಥೆಗಳು ಸರ್ಕಾರದ ಮರ್ಜಿಗೆ ಬಿದ್ದಿವೆ. ಲಾಭದಾಯಕ ಪಿಎಸ್ಯುುಗಳು ಬ್ಯಾಂಕ್ನಲ್ಲಿರಿಸಿದ ಠೇವಣಿಯು ‘ಹೆಚ್ಚುವರಿ ಮೊತ್ತ’ವೆಂದು ಸರ್ಕಾರ ಪರಿಗಣಿಸಿದೆ. ಸಂಪುಟ ಸಭೆ ಕೈಗೊಂಡ ಅಂತರ್ ನಿಗಮ ಠೇವಣಿ ಹೂಡಿಕೆಯು ಲಾಭದಾಯಕ ಉದ್ದಿಮೆಗಳ ಪಾಲಿಗೆ ಮುಚ್ಚುವಿಕೆಯಾಗಲಿದೆ ಎನ್ನಬಹುದಾಗಿದೆ ಎಂಬ ದಿಗಿಲು ಹೊರ ಬಿದ್ದಿದೆ.
ಆರ್ಬಿಐ ನಿಯಮಾವಳಿ ಪ್ರಕಾರ ಪಿಎಸ್ಯುುಗಳು ಸಾಲ, ಬಡ್ಡಿ ವ್ಯವಹಾರ ನಡೆಸುವಂತಿಲ್ಲ. ಈ ಕಾರಣಕ್ಕೆ ಠೇವಣಿ ಹೂಡಿಕೆ ಎನ್ನುವ ಪರ್ಯಾಯ ಮಾರ್ಗವನ್ನು ಸರ್ಕಾರ ಕಂಡುಕೊಂಡಿದೆ. ಹೆಚ್ಚುವರಿ ಮೊತ್ತ ವರ್ಗಾವಣೆ ಮಾಡಿದರೆ ಬ್ಯಾಂಕ್ಗಿಂತ ಹೆಚ್ಚಿನ ಬಡ್ಡಿ ಲಾಭ, ಸರ್ಕಾರ ಖಾತರಿ ನೀಡುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಸಮರ್ಥಿಸಿಕೊಂಡಿದ್ದಾರೆ. ಸರ್ಕಾರದ ದೃಷ್ಟಿಯಲ್ಲಿ ‘ಹೆಚ್ಚುವರಿ’ಯಾದ ಠೇವಣಿ ಬೇರೆ ನಿಗಮಗಳಲ್ಲಿ ಹೂಡಿಕೆ ಮಾಡಿದರೆ, ಅವು ತಮ್ಮ ಅವಶ್ಯಕತೆಗೆ ಬಳಕೆ ಮಾಡಿಕೊಳ್ಳುತ್ತವೆ. ಹೂಡಿಕೆ ಮಾಡಿದ ಉದ್ದಿಮೆಗಳು ಬೇಕೆಂದಾಗ ಈ ಠೇವಣಿ ಭಾಗಶಃ ಸಿಗುವುದು ಅನುಮಾನ.
ಸರ್ಕಾರವೇ ಪ್ರಕಟಿಸಿದ ಸಬ್ಸಿಡಿ ಮೊತ್ತವನ್ನು ಸಕಾಲಕ್ಕೆ ಪಾವತಿಸದೆ ಕೊನೆಗೆ ಬುಕ್ ಅಡ್ಜಸ್ಟ್ಮೆಂಟ್ ಮಾಡಿದ ಉದಾಹರಣೆಗಳು ಹೇರಳವಾಗಿವೆ. ಕರ್ನಾಟಕದ ವಿದ್ಯುತ್ ನಿಗಮಕ್ಕೆ ಕೆಪಿಟಿಸಿಎಲ್, ಎಸ್ಕಾಂಗಳು 20 ಸಾವಿರ ಕೋಟಿ ರೂ.ಗೂ ಹೆಚ್ಚು ಬಾಕಿಯಿರಿಸಿಕೊಂಡಿವೆ. ಅತ್ತ ಸರ್ಕಾರ ಕೂಡ ಸಾಥ್ ನೀಡಿಲ್ಲ. ಹೀಗಾಗಿ ಕೆಪಿಸಿಎಲ್ ಹೊಸ ಯೋಜನೆಗಳಿಗೆ ಪಡೆದ ಸಾಲ, ಬಡ್ಡಿ ಮೊತ್ತವನ್ನು ಸಕಾಲಕ್ಕೆ ಕಟ್ಟಲು ವಿಫಲವಾಗಿದೆ. ಈ ನಿಗಮ ಲಾಭದಾಯಕವಾಗುವ ಅವಕಾಶಗಳಿವೆ. ವಿಪುಲ ಯೋಜನೆಗಳೂ ಇವೆ. ಆದರೆ ಬಂಡವಾಳದ ಕೊರತೆ, ಬೇರೆ ಹಣಕಾಸು ಸಂಸ್ಥೆಗಳು ಸಾಲ ನೀಡುವುದಕ್ಕೂ ಹಿಂದೆಮುಂದೆ ನೋಡುವ ಪರಿಸ್ಥಿತಿಯಿದೆ. ಇದು, ಅಂತರ್ ನಿಗಮ ಹೂಡಿಕೆ ಭವಿಷ್ಯದ ಕೈಗನ್ನಡಿ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.