ವಾಣಿಜ್ಯ

ಲಕ್ಷ್ಮೀ ವಿಲಾಸ್ ಬ್ಯಾಂಕ್ ಗ್ರಾಹಕರ ಗಮನಕ್ಕೆ- ಡಿಸೆಂಬರ್ 16ರ ತನಕ ನಗದೀಕರಣಕ್ಕೆ 25,000 ರೂಪಾಯಿ ಮಿತಿ

ನವದೆಹಲಿ: ಲಕ್ಷ್ಮೀ ವಿಲಾಸ ಬ್ಯಾಂಕ್​ ಮೇಲೆ ಸರ್ಕಾರ ಒಂದು ತಿಂಗಳ ಮಾರಟೋರಿಯಂ ವಿಧಿಸಿದ್ದು, ಠೇವಣಿದಾರರು ಡಿಸೆಂಬರ್ 16ರ ತನಕ 25,000 ರೂಪಾಯಿ ಮಿತಿಯಲ್ಲಿ ಹಣ ನಗದೀಕರಿಸಬಹುದು ಎಂದು ತಿಳಿಸಿದೆ.ಈ ಸಂಬಂಧ ಹಣಕಾಸು ಸಚಿವಾಲಯ ಎರಡು ಪುಟಗಳ ಆದೇಶವನ್ನು ಪ್ರಕಟಿಸಿದೆ.

ಇದರಂತೆ, ಲಕ್ಷ್ಮೀ ವಿಲಾಸ ಬ್ಯಾಂಕ್​ ಇಂದು ಸಂಜೆ 6ರಿಂದ ಡಿಸೆಂಬರ್​ 17ರ ತನಕ ಮಾರಟೋರಿಯಂ ವ್ಯಾಪ್ತಿಯಲ್ಲಿ ಇರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್​ ಕಾಯ್ದೆಯ ಸೆಕ್ಷನ್ 45ರ ಪ್ರಕಾರ ಮಾರಟೋರಿಯಂ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಸಾಲಗಾರರಿಗೆ ಬ್ಯಾಂಕ್ ಪಾವತಿ ಕೂಡ 25,000 ರೂಪಾಯಿ ಮಿತಿಯಲ್ಲೇ ಮಾಡಬೇಕಾಗಿದೆ. ಅಲ್ಲದೆ, ಠೇವಣಿದಾರರಿಗೂ ಈ ಮಿತಿ ಅನ್ವಯವಾಗಲಿದೆ.

ಶಿಕ್ಷಣ, ವೈದ್ಯಕೀಯ ವೆಚ್ಚ ಮುಂತಾದವುಗಳಿಗೆ ಈ ಮಿತಿ ಅನ್ವಯವಾಗುವುದಿಲ್ಲ. ಅಂತಹ ಸನ್ನಿವೇಶದಲ್ಲಿ ಠೇವಣಿದಾರರು 25,000 ರೂಪಾಯಿಗೂ ಅಧಿಕ ಹಣ ನಗದೀಕರಿಸುವುದಕ್ಕೆ ಅವಕಾಶವಿದೆ ಎಂದು ಸರ್ಕಾರ ತಿಳಿಸಿದೆ. (ಏಜೆನ್ಸೀಸ್)