ನವದೆಹಲಿ: ಇಲೆಕ್ಟ್ರಾನಿಕ್ ಟೋಲ್ ಸಂಗ್ರಹ ಹೆಚ್ಚಿಸುವ ಸಲುವಾಗಿ ಫಾಸ್ಟ್ಯಾಗ್ ಮೇಲಿನ ಶುಲ್ಕ ಮನ್ನಾ ಯೋಜನೆಯನ್ನು ಫೆ.29ರ ತನಕ ವಿಸ್ತರಿಸಲು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ) ನಿರ್ಧರಿಸಿದೆ.
ಸರ್ಕಾರ ಈಗಾಗಲೇ ದೇಶದ 527 ಕ್ಕೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಟೋಲ್ಗಳಲ್ಲಿ ಡಿಜಿಟಲ್ ಪಾವತಿ ಮೂಲಕ ಹೆದ್ದಾರಿ ಶುಲ್ಕ ಸಂಗ್ರಹಿಸುವುದನ್ನು ಹೆಚ್ಚಿಸುವ ಸಲುವಾಗಿ ಎನ್ಎಚ್ಎಐ, ಫಾಸ್ಟ್ಯಾಗ್ ವೆಚ್ಚ 100 ರೂಪಾಯಿಯನ್ನು ಫೆಬ್ರವರಿ 15-29ರ ಅವಧಿಯಲ್ಲಿ ಮನ್ನಾ ಮಾಡಲು ತೀರ್ಮಾನಿಸಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಇದರಲ್ಲಿರುವ ಮಾಹಿತಿ ಪ್ರಕಾರ, ರಸ್ತೆ ಬಳಕೆದಾರರು ಯಾವುದಾದರೂ ಅಧಿಕೃತ ಪಾಯಿಂಟ್ ಆಫ್ ಸೇಲ್ ಕೇಂದ್ರಕ್ಕೆ ವಾಹನದ ಅಧಿಕೃತ ನೋಂದಣಿ ಪ್ರಮಾಣಪತ್ರ ಕೊಂಡು ಹೋಗಿ ಫಾಸ್ಟ್ಯಾಗ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಫಾಸ್ಟ್ಯಾಗ್ ಕೇಂದ್ರಗಳಿದ್ದು, ಇದಲ್ಲದೆ, ಪ್ರಾದೇಶಿಕ ಸಾರಿಗೆ ಕಚೇರಿಗಳು, ಕಾಮನ್ ಸರ್ವೀಸ್ ಸೆಂಟರ್, ಟ್ರಾನ್ಸ್ಪೋರ್ಟ್ ಹಬ್, ಪೆಟ್ರೋಲ್ ಪಂಪ್ ಮತ್ತು ಇತರೆಡೆ ಫಾಸ್ಟ್ಯಾಗ್ ಲಭ್ಯ ಇದೆ.
ಹತ್ತಿರದ ಎನ್ಎಚ್ಎಐ ಫಾಸ್ಟ್ಯಾಗ್ ಪಾಯಿಂಟ್ ಆಫ್ ಸೇಲ್ ಸ್ಥಳ ಹುಡುಕಬೇಕಾದರೆ, MyFASTag ಆ್ಯಪ್ ಡೌನ್ ಲೋಡ್ ಮಾಡಬೇಕು ಅಥವಾ www.ihmcl.com ತಾಣಕ್ಕೆ ಭೇಟಿ ನೀಡಬಹುದು ಅಥವಾ ಎನ್ಎಚ್ ಸಹಾಯವಾಣಿ 1033 ಕ್ಕೆ ಕರೆ ಮಾಡಬಹುದು. (ಏಜೆನ್ಸೀಸ್)