ಬೆಂಗಳೂರು: ದೇಶದ ತೆರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಜಿಎಸ್ಟಿ ವ್ಯವಸ್ಥೆ ಕೇವಲ ಒಂದು ತೆರಿಗೆ ಪದ್ಧತಿಯಲ್ಲ, ಬದಲಿಗೆ ದೇಶದ ಆರ್ಥಿಕ ಸ್ವಾವಲಂಬನೆಯ ದಿಕ್ಸೂಚಿ. ಆದರೆ, ಅತ್ಯುತ್ತಮವಾಗಿ ರೂಪಿಸಲಾದ ಈ ವ್ಯವಸ್ಥೆಯಲ್ಲಿ ಇಂದು ಶೇ. 60ಕ್ಕಿಂತ ಹೆಚ್ಚು ಸೋರಿಕೆ ಆಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಹಿರಿಯ ಉದ್ಯಮಿ, ವಿಆರ್ಎಲ್ ಸಮೂಹದ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹೇಳಿದ್ದಾರೆ. ತೆರಿಗೆ ವಂಚನೆ ಅವ್ಯಾಹತವಾಗಿ ನಡೆಯುತ್ತಿದೆ.
ಇಂತಹ ವಾತಾವರಣದಿಂದ ಸರ್ಕಾರಕ್ಕೆ ಬರ ಬೇಕಾದ ರಾಜಸ್ವ ಖೋತಾವಾಗುತ್ತಿದೆ. ಜಿಎಸ್ಟಿ ಸಮರ್ಪಕವಾಗಿ ಮತ್ತು ಪ್ರಾಮಾಣಿಕವಾಗಿ ಸಂಗ್ರಹಗೊಂಡರೆ, ಭಾರತದ ಅಭಿವೃದ್ಧಿಗೆ ಹಣಕಾಸಿನ ಕೊರತೆಯೆಂಬ ಮಾತೇ ಇರುತ್ತಿರಲಿಲ್ಲ. ಆದರೆ, ವ್ಯವಸ್ಥೆಯ ಮೂಲ ಉದ್ದೇಶವೇ ಹಳಿತಪ್ಪುತ್ತಿರುವುದು ದೇಶದ ಆರ್ಥಿಕ ಪ್ರಗತಿಗೆ ದೊಡ್ಡ ಹಿನ್ನಡೆ ಎಂದು ಪ್ರತಿಪಾದಿಸಿದ್ದಾರೆ.
ಈ ತೆರಿಗೆ ಸೋರಿಕೆಗೆ ಪ್ರಮುಖ ಕಾರಣ ವ್ಯವಸ್ಥೆಯಲ್ಲಿರುವ ತಾಂತ್ರಿಕ ಲೋಪ ಮತ್ತು ಅಧಿಕಾರಿ ವರ್ಗದ ಇಚ್ಛಾಶಕ್ತಿಯ ಕೊರತೆ. ತೆರಿಗೆ ವಂಚನೆಯ ಜಾಲಗಳು ರಾಜಾರೋಷವಾಗಿ ಕಾರ್ಯಾಚರಣೆ ನಡೆಸುತ್ತಿದ್ದರೂ, ಜಾಗೃತವಾಗಿರಬೇಕಾದ ಇಲಾಖೆ ಮೌನ ವಹಿಸಿದೆ. ಈ ವಾಸ್ತವವನ್ನು ಕೇಂದ್ರ, ರಾಜ್ಯ ಸರ್ಕಾರಗಳು ಅರಿತು ಅಧಿಕಾರಿ ವರ್ಗವನ್ನು ಕೂಡಲೇ ಬಿಗಿ ಮಾಡಬೇಕಾದ ತುರ್ತು ಅಗತ್ಯವಿದೆ.
ಕೇವಲ ಕಾಗದದ ಮೇಲಿನ ನಿಯಮಗಳಲ್ಲದೆ, ಕಠಿಣ ಪರಿಶೀಲನೆ ಮತ್ತು ದಿಢೀರ್ ದಾಳಿಗಳ ಮೂಲಕ ಸೋರಿಕೆ ರಂಧ್ರಗಳನ್ನು ಮುಚ್ಚಬೇಕು. ವ್ಯವಸ್ಥೆಯಲ್ಲಿ ಕಣ್ಣಿಗೆ ಕಾಣುವ ಮತ್ತು ಕಾಣದ ಲೋಪದೋಷಗಳನ್ನು ಗುರುತಿಸಿ ಕಿತ್ತುಹಾಕದ ಹೊರತು ಪ್ರಾಮಾಣಿಕ ತೆರಿಗೆದಾರರಿಗೆ ನ್ಯಾಯ ಸಿಗುವುದಿಲ್ಲ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಈ ಗಂಭೀರ ಸವಾಲನ್ನು ಎದುರಿಸಿ ವ್ಯವಸ್ಥೆಯನ್ನು ಹಳಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಫಲವಾಗಿಲ್ಲ. ಆಡಳಿತಾರೂಢರು ಇಚ್ಛಾಶಕ್ತಿ ಪ್ರದರ್ಶಿಸಬೇಕು. ಕೆಲವೊಮ್ಮೆ ಮೌನ ಕೂಡ ತೆರಿಗೆ ವಂಚಕರಿಗೆ ಕುಮ್ಮಕ್ಕು ನೀಡಿದಂತಿದೆ ಎಂದು ಖಾರವಾಗಿ ಅಭಿಪ್ರಾಯ ವ್ಯಕ್ತಮಾಡಿದ್ದಾರೆ.
ತುರ್ತಾಗಿ ಜಿಎಸ್ಟಿ ವ್ಯವಸ್ಥೆ ಸ್ಟ್ರೀಮ್ಲೈನ್ ಆಗಬೇಕು
ಸೋರಿಕೆಗೆ ಕಾರಣವಾಗುವ ಬಿಲ ಮುಚ್ಚಬೇಕು
ಅಧಿಕಾರಿ ವೃಂದ ಇನ್ನಷ್ಟು ಬಿಗಿಯಾಗಬೇಕು
ಈಗಿನ ಸಂಗ್ರಹವೇ ಶ್ರೇಷ್ಠ ಎಂದು ಬೀಗಬಾರದು