ಕರೊನಾ ಸಂಕಷ್ಟ ಅವಧಿಯಲ್ಲಿ ಪಡೆದ ಸಾಲಗಳ ಇಎಂಐ ಮೇಲಿನ ಚಕ್ರಬಡ್ಡಿ ಮನ್ನಾಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಮುಂದಿನ ತಿಂಗಳ 5ರ ಒಳಗಾಗಿ ಈ ಯೋಜನೆ ಜಾರಿಗೆ ಬರಲಿದೆ. ಇದು ಹೇಗೆ ಜಾರಿಗೆ ಬರಲಿದೆ? ಇದರ ಪ್ರಯೋಜನ ಪಡೆಯಲು ಯಾರು ಅರ್ಹರು? ಸಾಲ ಪಡೆದವರಿಗೆ ಇದರಿಂದ ಹೇಗೆ ಪ್ರಯೋಜನ ಆಗಲಿದೆ ಎಂಬ ಕುರಿತು ಮಾಹಿತಿ ಇಲ್ಲಿದೆ.
6 ತಿಂಗಳ ಮಾರಟೋರಿಯಂ ಪಡೆದಿದ್ದರೆ ಈ ಅವಧಿಯ ಬಡ್ಡಿಯನ್ನು ಅಸಲಿಗೆ ಜೋಡಿಸಲಾಗುತ್ತದೆ ಮತ್ತು ಬಾಕಿರುವ ಇಎಂಐ ಪರಿಷ್ಕೃತವಾಗಲಿದೆ. ಬಡ್ಡಿದರ ಸಾಲಗಾರರ ಯೋಜನೆಯ ಅನ್ವಯವೇ ಇರಲಿದೆ.
ಭಾಗಶಃ ಮಾರಟೋರಿಯಂ ಪಡೆದಿದ್ದರೆ ಅವಧಿಗಷ್ಟೇ ಚಕ್ರಬಡ್ಡಿ ಮನ್ನಾ ಅನ್ವಯವಾಗಲಿದೆ. ಉಳಿದ ತಿಂಗಳಿಗೆ ಚಕ್ರಬಡ್ಡಿ ಮನ್ನಾದ ಪರಿಹಾರ ದೊರೆಯಲಿದೆ.
ಸಾಮಾನ್ಯವಾಗಿ ಇಎಂಐ ಬಾಕಿ ಉಳಿಸಿಕೊಂಡರೆ ಆಕರವಾಗುವ ಬಡ್ಡಿಯ ಭಾಗಕ್ಕೆ ಬಡ್ಡಿಯನ್ನು ಹಾಕಲಾಗುತ್ತದೆ (ಚಕ್ರಬಡ್ಡಿ) ಆದರೆ, ಈಗ ಇದನ್ನು ಮನ್ನಾ ಮಾಡಿರುವ ಕಾರಣ ಸಾಲದ ಅಸಲು ಮತ್ತು ಬಡ್ಡಿಯನಷ್ಟೇ (ಪರಿಷ್ಕೃತ) ಪಾವತಿಸಬೇಕು. ಇದರಿಂದ ಸಾಲಗಾರರ ಮೇಲಿನ ಅಧಿಕ ಬಡ್ಡಿಯ ಹೊರೆ ತಗ್ಗಲಿದೆ.
ಸಾಲಗಾರರ ಇಎಂಐ ಕಡೆಯ ಹಂತದಲ್ಲಿದ್ದರೆ ಈ ಯೋಜನೆಯು ಆಲ್ಪಪ್ರಮಾಣದಲ್ಲಿ ಲಾಭದಾಯಕವಾಗಲಿದೆ. ಈಗಷ್ಟೆ ಇಎಂಐ ಆರಂಭವಾಗಿದ್ದರೆ ಹೆಚ್ಚಿನ ಅನುಕೂಲ ದೊರೆಯಲಿದೆ. ಏಕೆಂದರೆ ಇಎಂಐ ಆರಂಭದ ಹಂತದಲ್ಲಿರುವವರು ಅಸಲಿಗಿಂತ ಬಡ್ಡಿ ಮೊತ್ತವನ್ನು ಹೆಚ್ಚು ಪಾವತಿಸುತ್ತಾರೆ. ಕಡೆಯ ಹಂತದಲ್ಲಿರುವವರ ಬಡ್ಡಿ ಪ್ರಮಾಣ ಕಡಿಮೆ ಇದ್ದು, ಅಸಲಿನ ಭಾಗ ಹೆಚ್ಚಿರಲಿದೆ.
- ಕರೊನಾ ಸಾಂಕ್ರಾಮಿಕದ ಕಾರಣ ಘೋಷಿಸಲಾದ ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವ ಸಾಲಗಾರರಿಗೆ ಅನುಕೂಲ ಮಾಡಿಕೊಡಲು ಆರ್ಬಿಐ ಮಾರ್ಚ್ 27ರಂದು 3 ತಿಂಗಳ ಮಾರಟೋರಿಯಂ. ಮೇ ತಿಂಗಳಲ್ಲಿ ಇನ್ನೂ 3 ತಿಂಗಳು ವಿಸ್ತರಣೆ
- ಮಾರಟೋರಿಯಂ ಅವಕಾಶ ನೀಡಿದ್ದು ಒಳ್ಳೆಯದ್ದೆ. ಆದರೆ ಈ ಅವಧಿಯಲ್ಲಿ ಬಡ್ಡಿಗೆ ಬಡ್ಡಿ (ಚಕ್ರಬಡ್ಡಿ) ಹಾಕುವುದುರಿಂದ ಮಾರಟೋರಿಯಂ ಉದ್ದೇಶ ಈಡೇರುವುದಿಲ್ಲ. ಸಾಲಗಾರರಿಗೆ ಭವಿಷ್ಯದಲ್ಲಿ ಹೊರೆಯಾಗುತ್ತದೆ. ಆದ್ದರಿಂದ ಚಕ್ರಬಡ್ಡಿ ಮನ್ನಾ ಮಾಡುವಂತೆ ಆರ್ಬಿಐ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ.
- ಮಾರಟೋರಿಯಂ ಅವಧಿಯಲ್ಲಿ ಬಡ್ಡಿ ಮೇಲಿನ ಬಡ್ಡಿ ಮನ್ನಾ ಮಾಡಿದರೆ ಬ್ಯಾಂಕ್ಗಳಿಗೆ ಹಾನಿ ಆಗಲಿದೆ ಎಂದ ಕೇಂದ್ರ ಮತ್ತು ಆರ್ಬಿಐ
- ಬ್ಯಾಂಕ್ಗಳ ಲಾಭ, ನಷ್ಟವನ್ನೇ ನೋಡಬೇಡಿ ಜನರ ಬದುಕು ಕಷ್ಟದಲ್ಲಿದೆ ಈ ಬಗ್ಗೆಯೂ ಚಿಂತಿಸಿ ಎಂದು ಆರ್ಬಿಐ ಮತ್ತು ಕೇಂದ್ರದ ಕಿವಿಹಿಂಡಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ.
- ಚಕ್ರಬಡ್ಡಿ ಮನ್ನಾ ಕುರಿತಂತೆ ಯೋಜನೆ ಸಿದ್ಧಪಡಿಸಲು ಸೆ. 28ರವರೆಗೆ ಅವಕಾಶ ನೀಡಿದ ನ್ಯಾಯಪೀಠ. ನಂತರ ಇದು ಒಂದು ವಾರ ವಿಸ್ತರಣೆ.
- ಅ. 3ಕ್ಕೆ ಚಕ್ರಬಡ್ಡಿ ಮನ್ನಾ ಯೋಜನೆ ಬಗ್ಗೆ ಅಫಿಡವಿಟ್ ೆ ಸಲ್ಲಿಸಿದ ಸರ್ಕಾರ. 2 ಕೋಟಿ ರೂಪಾಯಿವರೆಗಿನ ಸಾಲಪಡೆದವರಿಗೆ ಮಾರಟೋರಿಯಂ ಅವಧಿಯ ಚಕ್ರಬಡ್ಡಿ ಮನ್ನಾ ಮಾಡುವುದಾಗಿ ಉಲ್ಲೇಖ.
- ಅ.5ರ ವಿಚಾರಣೆ ವೇಳೆ ಈ ಯೋಜನೆ ಕುರಿತು ಸಮಾಧಾನಗೊಳ್ಳದ ನ್ಯಾಯಪೀಠ. ಅರ್ಜಿದಾರರ ಕಳವಳ ಪೂರ್ಣವಾಗಿ ಪರಿಹಾರವಾಗದ ಕಾರಣ ಪರಿಷ್ಕೃತ ಅಫಿಡವಿಟ್ ಸಲ್ಲಿಸಲು ಇನ್ನೊಂದು ವಾರ ಅವಕಾಶ ನೀಡಿಕೆ.
- ಮಾರಟೋರಿಯಂ ಅವಕಾಶವನ್ನು ಪಡೆಯದೆ ಸಾಲದ ಇಎಂಐ ಪಾವತಿ ಮಾಡಿದವರಿಗೂ ಚಕ್ರಬಡ್ಡಿ ಮನ್ನಾದ ಪ್ರಯೋಜನ ಸಿಗುವಂತೆ ಮಾಡಲು ಕ್ಯಾಷ್ಬ್ಯಾಕ್ ನೀಡಲಾಗುವುದು ಎಂದು ಪರಿಷ್ಕೃತ ಅಫಿಡವಿಟ್ನಲ್ಲಿ ಸ್ಪಷ್ಟಪಡಿಸಿದ ಕೇಂದರ.
- ಅ. 14ರ ವಿಚಾರಣೆಯಲ್ಲಿ ಯೋಜನೆ ಸ್ವಾಗತಾರ್ಹವಾಗಿದೆ. ಆದರೆ, ಇದು ಕಾಗದದ ಮೇಲಿದ್ದರೆ ಪ್ರಯೋಜನವಿಲ್ಲ. ಶೀಘ್ರ ಜಾರಿ ಮಾಡುವ ಮೂಲಕ ಜನರಿಗೆ ದೀಪಾವಳಿ ಸಂತಸದಾಯಕವಾಗುವಂತೆ ಮಾಡುವುದು ನಿಮ್ಮ (ಸರ್ಕಾರ) ಕೈಯಲ್ಲಿದೆ ಎಂದು ನ್ಯಾಯಪೀಠ.
- ನ. 2ಕ್ಕೆ ಮುಂದಿನ ವಿಚಾರಣೆ.