ಸಾಂದರ್ಭಿಕ ಚಿತ್ರ 
ವಾಣಿಜ್ಯ

ಒಂದೇ ಉತ್ಪನ್ನಕ್ಕೆ ಬೇರೆ-ಬೇರೆ ಬೆಲೆ! ಡಿಜಿಟಲ್ ಮಾರುಕಟ್ಟೆಯ ಹೊಸ ಬೆಲೆ ಆಟದ ತಂತ್ರ

ಆನ್​ಲೈನ್​ನಲ್ಲಿ ಒಂದೇ ಉತ್ಪನ್ನವನ್ನು ಇಬ್ಬರು ಗ್ರಾಹಕರು ಹುಡುಕಿದಾಗ, ಇಬ್ಬರಿಗೂ ಬೇರೆ ಬೇರೆ ಬೆಲೆ ಕಾಣಿಸಿಕೊಳ್ಳಬಹುದೇ? ಹೌದು, ಡಿಜಿಟಲ್ ಮಾರುಕಟ್ಟೆಯಲ್ಲಿ ಗ್ರಾಹಕರ ಖರೀದಿ ಆಸಕ್ತಿ, ಹಿಂದಿನ ಹುಡುಕಾಟ, ಅವರಿರುವ ಸ್ಥಳ, ಅವರು ಬಳಸುವ ಫೋನ್​ನ ಮಾಡೆಲ್ ಹಾಗೂ ಆನ್​ಲೈನ್ ಚಟುವಟಿಕೆಗಳನ್ನು ಆಧರಿಸಿ ಬೆಲೆ ನಿಗದಿಪಡಿಸುವ ತಂತ್ರಗಳು ಬಳಕೆಯಾಗುತ್ತಿವೆ. ಇದನ್ನೇ ಸರ್ವೈಲೆನ್ಸ್ ಪ್ರೖೆಸಿಂಗ್ ಎನ್ನಲಾಗುತ್ತದೆ. ಅದರರ್ಥ ಗ್ರಾಹಕರ ಡಿಜಿಟಲ್ ನಡವಳಿಕೆ ಆಧರಿತ ಬೆಲೆ ನಿಗದಿ. ಗ್ರಾಹಕರ ಮಾಹಿತಿ ಸಂಗ್ರಹಿಸಿ ಅವರ ಖರೀದಿ ಸಾಮರ್ಥ್ಯವನ್ನು ಅಂದಾಜಿಸುವುದು, ಹೆಚ್ಚು ಬೆಲೆ ಪಾವತಿಸುವ ಸಾಧ್ಯತೆ ಇರುವವರಿಗೆ ದುಬಾರಿ ದರ ತೋರಿಸುವುದು ಹೇಗೆ ಸಾಧ್ಯ? ಇದು ವ್ಯಾಪಾರಿಗಳ ಲಾಭದ ತಂತ್ರವೇ ಅಥವಾ ಗ್ರಾಹಕರ ಶೋಷಣೆಯೇ? ಡಿಜಿಟಲ್ ಖರೀದಿಯ ಹೊಸ ‘ಬೆಲೆ ಆಟ’ದ ಒಳಹೊಕ್ಕು ನೋಡುವ ಪ್ರಯತ್ನ ಇಲ್ಲಿದೆ.

ಒಂದೇ ಕಂಪನಿಯ ಒಂದೇ ಉತ್ಪನ್ನವನ್ನು ಇಬ್ಬರು ಗ್ರಾಹಕರು ಆನ್​ಲೈನ್​ನಲ್ಲಿ ನೋಡಿದಾಗ, ಒಬ್ಬರಿಗೆ 2,000 ರೂ. ಮತ್ತೊಬ್ಬರಿಗೆ 2,200 ರೂ. ಬೆಲೆ ಕಾಣಿಸಿದರೆ ಅಚ್ಚರಿಯಾಗಬಹುದು. ಇಬ್ಬರೂ ಒಂದೇ ಉತ್ಪನ್ನ, ಒಂದೇ ಮಾದರಿ, ಒಬ್ಬರೇ ಮಾರಾಟಗಾರರಿಂದ ಖರೀದಿಸುತ್ತಿದ್ದರೂ ಬೆಲೆಯಲ್ಲಿ ವ್ಯತ್ಯಾಸ ಕಂಡುಬರುವ ಸಾಧ್ಯತೆ ಇದೆ. ಇಂತಹ ಬೆಲೆ ನಿಗದಿ ತಂತ್ರಗಳು ಡಿಜಿಟಲ್ ಮಾರುಕಟ್ಟೆಯಲ್ಲಿ ಚರ್ಚೆಗೆ ಕಾರಣವಾಗಿವೆ.

ಸಾಂಪ್ರದಾಯಿಕ ಮಾರುಕಟ್ಟೆಯಲ್ಲಿ ಉತ್ಪನ್ನದ ಬೆಲೆ ಸಾಮಾನ್ಯವಾಗಿ ಎಲ್ಲ ಗ್ರಾಹಕರಿಗೂ ಒಂದೇ ಆಗಿರುತ್ತದೆ. ಆದರೆ ಡಿಜಿಟಲ್ ಮಾರುಕಟ್ಟೆಯಲ್ಲಿ ಗ್ರಾಹಕರ ಮಾಹಿತಿಯ ಆಧಾರದ ಮೇಲೆ ಅವರ ಖರೀದಿ ನಡವಳಿಕೆಯನ್ನು ವಿಶ್ಲೇಷಿಸಲಾಗುತ್ತದೆ. ಯಾವ ಉತ್ಪನ್ನವನ್ನು ಹೆಚ್ಚು ಹುಡುಕುತ್ತಿದ್ದಾರೆ, ಎಷ್ಟು ಬಾರಿ ವೆಬ್​ಸೈಟ್​ಗೆ ಭೇಟಿ ನೀಡಿದ್ದಾರೆ, ಖರೀದಿಸಲು ಎಷ್ಟು ಆಸಕ್ತಿ ತೋರಿಸಿದ್ದಾರೆ, ಯಾವ ಬೆಲೆಯ ಉತ್ಪನ್ನಗಳನ್ನು ಸಾಮಾನ್ಯವಾಗಿ ಆಯ್ಕೆ ಮಾಡುತ್ತಾರೆ ಎಂಬ ಮಾಹಿತಿಯನ್ನು ವಿಶ್ಲೇಷಿಸಿ ಉತ್ಪನ್ನದ ಬೆಲೆಯನ್ನು ನಿಗದಿಪಡಿಸಬಹುದು. ಇದು ಗ್ರಾಹಕರಿಗೆ ಎಷ್ಟು ಬೆಲೆ ತೋರಿಸಿದರೆ ಅವರು ಖರೀದಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದನ್ನು ಊಹಿಸುವ ಡಿಜಿಟಲ್ ತಂತ್ರ.

ಸರ್ವೈಲೆನ್ಸ್ ಪ್ರೖೆಸಿಂಗ್ ಎಂದರೇನು?

ಸರ್ವೈಲೆನ್ಸ್ ಪ್ರೖೆಸಿಂಗ್ ಎಂದರೆ ಗ್ರಾಹಕರ ಡಿಜಿಟಲ್ ಚಟುವಟಿಕೆಗಳು ಮತ್ತು ವೈಯಕ್ತಿಕ ಮಾಹಿತಿಯನ್ನು ಗಮನಿಸಿ, ವಿಶ್ಲೇಷಿಸಿ, ಅದರ ಆಧಾರದ ಮೇಲೆ ಉತ್ಪನ್ನ ಅಥವಾ ಸೇವೆಯ ಬೆಲೆ ನಿಗದಿಪಡಿಸುವ ವಿಧಾನ. ಇಲ್ಲಿ ಗ್ರಾಹಕರ ಆನ್​ಲೈನ್ ನಡವಳಿಕೆಯೇ ಬೆಲೆ ನಿರ್ಧಾರಕ್ಕೆ ನೆರವಾಗುವ ಮಾಹಿತಿ. ಗ್ರಾಹಕ ಯಾವ ಉತ್ಪನ್ನಗಳನ್ನು ಹುಡುಕಿದ್ದಾರೆ, ಯಾವ್ಯಾವ ವೆಬ್​ಸೈಟ್​ಗಳಿಗೆ ಭೇಟಿ ನೀಡಿದ್ದಾರೆ, ಯಾವ ವಸ್ತುಗಳನ್ನು ಕಾರ್ಟ್​ಗೆ ಸೇರಿಸಿ ಖರೀದಿಸದೆ ಬಿಟ್ಟಿದ್ದಾರೆ, ಯಾವ ಬೆಲೆಯ ಉತ್ಪನ್ನಗಳಲ್ಲಿ ಆಸಕ್ತಿ ತೋರಿಸಿದ್ದಾರೆ ಎಂಬ ಮಾಹಿತಿಯನ್ನು ಡಿಜಿಟಲ್ ವ್ಯವಸ್ಥೆಗಳು ಸಂಗ್ರಹಿಸುತ್ತವೆ. ಈ ಮಾಹಿತಿಯನ್ನು ಕೃತಕ ಬುದ್ಧಿಮತ್ತೆ (ಎಐ) ಮತ್ತು ಡೇಟಾ ವಿಶ್ಲೇಷಣೆ ಮೂಲಕ ಪರಿಶೀಲಿಸಿ ಗ್ರಾಹಕರ ಖರೀದಿ ಸಾಧ್ಯತೆಯನ್ನು ಅಂದಾಜಿಸುತ್ತವೆ.

ಒಬ್ಬ ಗ್ರಾಹಕ ನಿರ್ದಿಷ್ಟ ಉತ್ಪನ್ನವನ್ನು ಹಲವು ಬಾರಿ ಹುಡುಕಿದ್ದರೆ ಅಥವಾ ಖರೀದಿಸಲು ಹೆಚ್ಚು ಉತ್ಸುಕನಾಗಿದ್ದರೆ, ಆ ಉತ್ಪನ್ನದ ಮೇಲಿನ ಅವನ ಆಸಕ್ತಿ ಹೆಚ್ಚಿದೆ ಎಂದು ವ್ಯವಸ್ಥೆ ಊಹಿಸುತ್ತದೆ. ಇಂತಹ ಗ್ರಾಹಕ ಬೆಲೆ ಹೆಚ್ಚಾದರೂ ಖರೀದಿಸಬಹುದು ಎಂಬ ಅಂದಾಜಿನ ಆಧಾರದ ಮೇಲೆ ಬೆಲೆ ಅಥವಾ ರಿಯಾಯಿತಿ ತಂತ್ರವನ್ನು ರೂಪಿಸಲಾಗುತ್ತದೆ. ಆದರೆ ಗ್ರಾಹಕರಿಗೆ ತೋರಿಸಲಾದ ಪ್ರತಿಯೊಂದು ಬೆಲೆ ವ್ಯತ್ಯಾಸವೂ ಸರ್ವೆಲೆನ್ಸ್ ಪ್ರೖೆಸಿಂಗ್​ನಿಂದಲೇ ಉಂಟಾಗಿದೆ ಎಂದು ಹೇಳಲಾಗದು. ಬೇಡಿಕೆ, ಸ್ಟಾಕ್, ಸಮಯ, ಮಾರಾಟಗಾರರು, ರಿಯಾಯಿತಿ, ತೆರಿಗೆ ಹಾಗೂ ಇತರ ಕಾರಣಗಳಿಂದಲೂ ಬೆಲೆಗಳು ಬದಲಾಗಬಹುದು.

ಫೋನ್ ಮಾಡೆಲ್, ಸ್ಥಳ, ಹುಡುಕಾಟವೇ ನಿರ್ಣಾಯಕ!

ಗ್ರಾಹಕರು ಬಳಸುವ ಫೋನಿನ ಮಾಡೆಲ್ ಯಾವುದು, ಯಾವ ಕಂಪನಿಯದು, ಎಷ್ಟು ಬೆಲೆಯದು, ಅವರಿರುವ ಸ್ಥಳ ಯಾವುದು ಮತ್ತು ಅವರ ಡಿಜಿಟಲ್ ಚಟುವಟಿಕೆಗಳೇನು ಎಂಬುದೇ ಉತ್ಪನ್ನದ ಬೆಲೆ ಅಥವಾ ರಿಯಾಯಿತಿ ನಿರ್ಧಾರಕ್ಕೆ ಹೇಗೆ ಬಳಕೆಯಾಗುತ್ತದೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಅಮೆರಿಕದ ಫೆಡರಲ್ ಟ್ರೇಡ್ ಕಮಿಷನ್ (ಎಫ್​ಟಿಸಿ) ನಡೆಸಿದ ಅಧ್ಯಯನದಲ್ಲಿ ಈ ಕುರಿತ ವಿವರ ಇದೆ. ಗ್ರಾಹಕರಿರುವ ಸ್ಥಳ, ಬ್ರೌಸಿಂಗ್ ಇತಿಹಾಸ, ಜನಸಂಖ್ಯಾ ಮಾಹಿತಿ, ಖರೀದಿ ಇತಿಹಾಸ ಹಾಗೂ ವೆಬ್​ಪುಟದಲ್ಲಿ ನಡೆಸುವ ಚಟುವಟಿಕೆಗಳನ್ನೂ ಬೆಲೆ ಮತ್ತು ಕೊಡುಗೆಗಳನ್ನು ರೂಪಿಸಲು ಬಳಸುವ ಸಾಧ್ಯತೆಯ ಬಗ್ಗೆ ಅದರಲ್ಲಿ ವಿವರಿಸಲಾಗಿದೆ. ಗ್ರಾಹಕರು ವೆಬ್​ಪುಟದಲ್ಲಿ ಯಾವ ಉತ್ಪನ್ನದ ಮೇಲೆ ಹೆಚ್ಚು ಹೊತ್ತು ಗಮನಹರಿಸುತ್ತಾರೆ, ಯಾವುದನ್ನು ಕಾರ್ಟ್​ಗೆ ಸೇರಿಸುತ್ತಾರೆ, ಯಾವುದನ್ನು ಖರೀದಿಸದೆ ಬಿಡುತ್ತಾರೆ ಎಂಬ ಮಾಹಿತಿಯು ಡಿಜಿಟಲ್ ಮಾರುಕಟ್ಟೆ ಅತ್ಯಂತ ಮುಖ್ಯವಾಗುತ್ತದೆ. ಒಬ್ಬ ಗ್ರಾಹಕ ಪದೇಪದೆ ಒಂದು ವಸ್ತುವನ್ನು ಹುಡುಕುತ್ತಿದ್ದರೆ, ಅದನ್ನು ಖರೀದಿಸುವ ಆಸಕ್ತಿ ಹೆಚ್ಚಿರಬಹುದು ಎಂಬ ನಿರ್ಧಾರಕ್ಕೆ ಬರಲಾಗುತ್ತದೆ. ಮತ್ತೊಬ್ಬ ಗ್ರಾಹಕ ಅದೇ ವಸ್ತುವನ್ನು ಮೊದಲ ಬಾರಿಗೆ ಹುಡುಕುತ್ತಿದ್ದರೆ ಆತನಿಗೆ ರಿಯಾಯಿತಿ ತೋರಿಸುವ ಮೂಲಕ ಖರೀದಿಗೆ ಪ್ರೇರೇಪಿಸಲಾಗುತ್ತದೆ. ಎಫ್​ಟಿಸಿ ಅಧ್ಯಯನದಲ್ಲಿ ಇಂತಹ ಮಾಹಿತಿಯನ್ನು ಬಳಸುವ ವ್ಯವಸ್ಥೆಗಳ ಬಗ್ಗೆ ಹಲವು ಅಂಶಗಳು ಬೆಳಕಿಗೆ ಬಂದಿವೆ. ಆದರೆ ಇವು ನಿರ್ದಿಷ್ಟ ಕಂಪನಿಯ ಎಲ್ಲ ಗ್ರಾಹಕರಿಗೂ ಒಂದೇ ರೀತಿಯಲ್ಲಿ ಅನ್ವಯಿಸುವುದಿಲ್ಲ.

ರಿಯಾಯಿತಿ ಎಲ್ಲರಿಗೂ ಒಂದೇ ಆಗಿರುವುದಿಲ್ಲ!

ಬೆಲೆ ವ್ಯತ್ಯಾಸ ಎಂದರೆ ಯಾವಾಗಲೂ ಒಬ್ಬರಿಗೆ ದುಬಾರಿ ದರ ತೋರಿಸಿ ಮತ್ತೊಬ್ಬರಿಗೆ ಕಡಿಮೆ ದರ ತೋರಿಸುವುದಷ್ಟೇ ಅಲ್ಲ. ಕೆಲವೊಮ್ಮೆ ಎಲ್ಲರಿಗೂ ಒಂದೇ ಮೂಲ ಬೆಲೆ ಇದ್ದರೂ, ಗ್ರಾಹಕರ ಮಾಹಿತಿ ಆಧರಿಸಿ ಕೆಲವರಿಗೆ ಮಾತ್ರ ವಿಶೇಷ ರಿಯಾಯಿತಿ ನೀಡಬಹುದು. ಆಗ ಇಬ್ಬರು ಗ್ರಾಹಕರು ಒಂದೇ ಉತ್ಪನ್ನ ಖರೀದಿಸಿದರೂ ಒಬ್ಬರಿಗೆ ಹೆಚ್ಚಿನ ರಿಯಾಯಿತಿ ದೊರೆಯಬಹುದು; ಮತ್ತೊಬ್ಬರಿಗೆ ಯಾವುದೇ ರಿಯಾಯಿತಿ ಸಿಗದೇ ಇರಬಹುದು. ಉದಾಹರಣೆಗೆ, ಒಂದು ಆನ್​ಲೈನ್ ಮಳಿಗೆ ನಿರ್ದಿಷ್ಟ ಉತ್ಪನ್ನವನ್ನು ನಿಯಮಿತವಾಗಿ ಖರೀದಿಸುವ ಗ್ರಾಹಕನಿಗೆ ವಿಶೇಷ ರಿಯಾಯಿತಿ ನೀಡದೇ ಇರಬಹುದು. ಆತ ಈ ಉತ್ಪನ್ನ ಖರೀದಿಸುವುದನ್ನು ಮುಂದುವರಿಸುತ್ತಾನೆ ಎಂಬ ಊಹೆ ಅದರ ಹಿಂದಿರುತ್ತದೆ. ಆದರೆ ಬೇರೆ ಮಳಿಗೆಗೆ ಹೋಗುವ ಸಾಧ್ಯತೆ ಇರುವ ವ್ಯಕ್ತಿಗೆ ಅಥವಾ ಹೊಸ ಗ್ರಾಹಕನಿಗೆ ಆಕರ್ಷಕ ಕೊಡುಗೆ ನೀಡಬಹುದು. ಇಂತಹ ತಂತ್ರಗಳು ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ಸೆಳೆಯಲು ನೆರವಾಗುತ್ತವೆ. ಆದರೆ ಯಾರಿಗೆ ರಿಯಾಯಿತಿ ನೀಡಬೇಕು, ಯಾರಿಗೆ ನೀಡಬಾರದು ಎಂಬ ನಿರ್ಧಾರ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಆಧರಿಸಿದಾಗ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ಪ್ರಶ್ನೆಗಳು ಎದುರಾಗುತ್ತವೆ.

ಗ್ರಾಹಕರು ಏನು ಮಾಡಬಹುದು?

ಆನ್​ಲೈನ್​ನಲ್ಲಿ ಖರೀದಿಸುವಾಗ ಒಂದೇ ವೆಬ್​ಸೈಟ್​ಗೆ ಸೀಮಿತವಾಗದೆ ವಿವಿಧ ಮಳಿಗೆಗಳಲ್ಲಿ ಬೆಲೆ ಪರಿಶೀಲಿಸುವುದು ಉತ್ತಮ. ಒಂದೇ ಉತ್ಪನ್ನವನ್ನು ಬೇರೆ ಬೇರೆ ವೆಬ್​ಸೈಟ್​ಗಳಲ್ಲಿ ಹೋಲಿಸುವುದರಿಂದ ಬೆಲೆ ವ್ಯತ್ಯಾಸ ತಿಳಿಯುತ್ತದೆ. ಲಾಗಿನ್ ಆಗಿ ಮತ್ತು ಲಾಗಿನ್ ಆಗದೇ ಉತ್ಪನ್ನದ ಬೆಲೆ ಪರಿಶೀಲಿಸುವುದು, ಆಪ್ ಹಾಗೂ ವೆಬ್​ಸೈಟ್​ನಲ್ಲಿ ದರ ಹೋಲಿಸುವುದು, ಖರೀದಿಸುವ ಮೊದಲು ಅಂತಿಮ ಮೊತ್ತವನ್ನು ಗಮನಿಸುವುದು ಸಹ ಉಪಯುಕ್ತ. ಬ್ರೌಸರ್​ನ ಕುಕೀಗಳನ್ನು ನಿಯಂತ್ರಿಸುವುದು, ಅನಗತ್ಯ ಆಪ್ ಅನುಮತಿಗಳನ್ನು ನಿರ್ಬಂಧಿಸುವುದು, ಲೊಕೇಶನ್ ಮಾಹಿತಿ ಹಂಚಿಕೆಯನ್ನು ಮಿತಿಗೊಳಿಸುವುದು ಹಾಗೂ ವೈಯಕ್ತಿಕ ಮಾಹಿತಿಯನ್ನು ಅಗತ್ಯವಿರುವಷ್ಟೇ ನೀಡುವುದು ಡಿಜಿಟಲ್ ಗೌಪ್ಯತೆಯನ್ನು ಕಾಪಾಡಲು ನೆರವಾಗುತ್ತದೆ.

ಡೈನಮಿಕ್ ಪ್ರೖೆಸಿಂಗ್ V/s ಸರ್ವೆಲೆನ್ಸ್ ಪ್ರೖೆಸಿಂಗ್

ಆನ್​ಲೈನ್​ನಲ್ಲಿ ಬೆಲೆ ಪದೇಪದೆ ಬದಲಾಗುವುದನ್ನು ಕಂಡಾಗಲೆಲ್ಲ ಗ್ರಾಹಕರ ಮಾಹಿತಿ ಬಳಸಿ ಬೆಲೆ ನಿಗದಿಪಡಿಸಲಾಗುತ್ತಿದೆ ಎಂದರ್ಥವಲ್ಲ. ಇಲ್ಲಿ ಎರಡು ವಿಭಿನ್ನ ವಿಧಾನಗಳಿವೆ. ಡೈನಮಿಕ್ ಪ್ರೖೆಸಿಂಗ್ ಎಂದರೆ ಬೇಡಿಕೆ, ಪೂರೈಕೆ, ಸ್ಟಾಕ್, ಸಮಯ, ಮಾರುಕಟ್ಟೆ ಪರಿಸ್ಥಿತಿ, ಸ್ಪರ್ಧಿಗಳ ಬೆಲೆ ಮುಂತಾದವುಗಳನ್ನು ಆಧರಿಸಿ ಬೆಲೆ ಬದಲಿಸುವುದು. ಉದಾಹರಣೆಗೆ, ಹಬ್ಬದ ಸಮಯದಲ್ಲಿ ಹೋಟೆಲ್ ಕೊಠಡಿಗಳ ಬೇಡಿಕೆ ಹೆಚ್ಚಾದರೆ ದರ ಏರಬಹುದು. ವಿಮಾನದಲ್ಲಿ ಉಳಿದ ಆಸನಗಳ ಸಂಖ್ಯೆ ಕಡಿಮೆಯಾದಾಗ ಟಿಕೆಟ್ ಬೆಲೆ ಬದಲಾಗಬಹುದು. ಇಂತಹ ಬೆಲೆ ಬದಲಾವಣೆ ಎಲ್ಲ ಗ್ರಾಹಕರಿಗೂ ಅನ್ವಯಿಸುತ್ತದೆ. ಆದರೆ ಸರ್ವೆಲೆನ್ಸ್ ಪ್ರೖೆಸಿಂಗ್​ನಲ್ಲಿ ಗ್ರಾಹಕರ ವೈಯಕ್ತಿಕ ಮಾಹಿತಿ ಮತ್ತು ಡಿಜಿಟಲ್ ನಡವಳಿಕೆಯನ್ನು ಬೆಲೆ ಅಥವಾ ರಿಯಾಯಿತಿ ನಿರ್ಧಾರಕ್ಕೆ ಬಳಸಲಾಗುತ್ತದೆ. ಇಬ್ಬರು ಒಂದೇ ಸಮಯದಲ್ಲಿ ಒಂದೇ ಉತ್ಪನ್ನ ನೋಡುತ್ತಿದ್ದರೂ ಅವರ ವೈಯಕ್ತಿಕ ಮಾಹಿತಿಯ ಆಧಾರದ ಮೇಲೆ ಬೇರೆ ಬೇರೆ ರಿಯಾಯಿತಿಗಳನ್ನು ನೀಡುವ ಸಾಧ್ಯತೆ ಇರುತ್ತದೆ.

ವ್ಯಾಪಾರಿಗೆ ಲಾಭ, ಗ್ರಾಹಕರಿಗೆ ಆತಂಕ

ಈ ತಂತ್ರ ವ್ಯಾಪಾರಿಗಳಿಗೆ ಹಲವು ರೀತಿಯಲ್ಲಿ ಲಾಭ ದಾಯಕ. ಯಾವ ಗ್ರಾಹಕ ಯಾವ ಉತ್ಪನ್ನ ಖರೀದಿಸುವ ಸಾಧ್ಯತೆ ಹೊಂದಿದ್ದಾನೆ ಎಂಬುದನ್ನು ಅಂದಾಜಿಸಿ ಸೂಕ್ತ ಕೊಡುಗೆ ನೀಡಬಹುದು. ಖರೀದಿಸದೇ ಹೊರಹೋಗುವ ಗ್ರಾಹಕರನ್ನು ಮತ್ತೆ ಸೆಳೆಯಬಹುದು. ಹೆಚ್ಚು ಬೆಲೆ ಪಾವತಿಸಲು ಸಿದ್ಧರಿರುವ ಗ್ರಾಹಕರಿಗೆ ಅವರ ಆಸಕ್ತಿಗೆ ತಕ್ಕ ಉತ್ಪನ್ನಗಳನ್ನು ತೋರಿಸಬಹುದು. ಇದರಿಂದ ಮಾರಾಟ ಮತ್ತು ಲಾಭ ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಆದರೆ ಗ್ರಾಹಕರಿಗೆ ಇದರಿಂದ ಅನ್ಯಾಯ ಆಗಬಹುದು. ಒಂದೇ ಉತ್ಪನ್ನಕ್ಕೆ ಮತ್ತೊಬ್ಬರು ಕಡಿಮೆ ಬೆಲೆ ಪಾವತಿಸಿದ್ದಾರೆ ಎಂಬುದು ತಿಳಿದರೆ ತಮ್ಮನ್ನು ಹೆಚ್ಚು ಹಣ ಪಾವತಿಸುವ ಗ್ರಾಹಕ ಎಂದು ಗುರುತಿಸಿ ಬೆಲೆ ನಿಗದಿಪಡಿಸಲಾಗಿದೆ ಎಂಬ ಅನುಮಾನ ಮೂಡಬಹುದು. ಗ್ರಾಹಕರಿಗೆ ತಮ್ಮ ಮಾಹಿತಿಯನ್ನು ಹೇಗೆ ಬಳಸಲಾಗುತ್ತಿದೆ ಎಂಬುದರ ಅರಿವಿಲ್ಲದಿದ್ದರೆ, ಬೆಲೆ ನಿಗದಿಯಲ್ಲಿನ ಈ ವ್ಯತ್ಯಾಸವನ್ನು ಪ್ರಶ್ನಿಸುವುದೂ ಕಷ್ಟ.

ಗ್ರಾಹಕನಿಗೆ ತಿಳಿಯದ ಬೆಲೆ ಆಟ!

ಡಿಜಿಟಲ್ ಮಾರುಕಟ್ಟೆಯಲ್ಲಿ ಬೆಲೆ ನಿಗದಿಯು ಈಗ ಉತ್ಪನ್ನದ ಗುಣಮಟ್ಟ, ಉತ್ಪಾದನಾ ವೆಚ್ಚ, ಬೇಡಿಕೆ ಮತ್ತು ಪೂರೈಕೆಗೆ ಮಾತ್ರ ಸೀಮಿತವಾಗಿಲ್ಲ. ಗ್ರಾಹಕ ಯಾರು, ಆತನ ಆಸಕ್ತಿ ಏನು, ಎಷ್ಟು ಹಣ ಖರ್ಚು ಮಾಡಲು ಸಿದ್ಧನಿದ್ದಾನೆ ಎಂಬುದನ್ನು ಅಂದಾಜಿಸುವ ತಂತ್ರಜ್ಞಾನವೂ ಬೆಳೆಯುತ್ತಿದೆ. ಇದು ವ್ಯಾಪಾರಿಗಳಿಗೆ ಹೆಚ್ಚು ಗ್ರಾಹಕರನ್ನು ಸೆಳೆಯಲು ನೆರವಾಗಬಹುದಾದರೂ, ಗ್ರಾಹಕರಿಗೆ ತಿಳಿಯದ ರೀತಿಯಲ್ಲಿ ಅವರ ಮಾಹಿತಿಯನ್ನು ಬಳಸಿ ಹೆಚ್ಚು ಹಣ ಪಾವತಿಸುವಂತೆ ಮಾಡುವ ಅಪಾಯವೂ ಇದೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಬೆಲೆ ನಿಗದಿ ಮತ್ತಷ್ಟು ವ್ಯಾಪಕವಾಗುವ ಸಾಧ್ಯತೆ ಇದೆ. ಆಗ ಒಂದೇ ಉತ್ಪನ್ನಕ್ಕೆ ಎಲ್ಲರಿಗೂ ಒಂದೇ ಬೆಲೆ ಎಂಬ ಪರಿಕಲ್ಪನೆಯೇ ಬದಲಾಗಬಹುದು!