ವಾಣಿಜ್ಯ

ಡಿಸಿಸಿ ಬ್ಯಾಂಕ್‌ನಲ್ಲಿ ವಹಿವಾಟು ನಡೆಸಿದವರಿಗೆ ಸಾಲ ನೀಡಿ

Kolar

ಕೋಲಾರ: ಡಿಸಿಸಿ ಬ್ಯಾಂಕಿನಲ್ಲಿ ವಹಿವಾಟು ನಡೆಸದ ಎಸ್‌ಎಫ್‌ಸಿಎಸ್, ಎಂಪಿಸಿಎಸ್, ಟಿಎಪಿಸಿಎಂಎಸ್‌ಗಳ ಆಡಳಿತ ಮಂಡಳಿಯಲ್ಲಿನ ಸಹಕಾರಿಗಳಿಗೆ ಸಾಲ ನೀಡದಂತೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಿಬ್ಬಂದಿಗೆ ತಾಕೀತು ಮಾಡಿದರು.

ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಠೇವಣಿ ಸಂಗ್ರಹಣೆಯ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ಭಾನುವಾರ ಕರೆದಿದ್ದ ಎರಡೂ ಜಿಲ್ಲೆಗಳ ಬ್ಯಾಂಕ್‌ನ ಅಧಿಕಾರಿಗಳ ಹಾಗೂ ಸಿಬ್ಬಂದಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿಗಳಿಗೆ ನೈತಿಕತೆ ಇರಬೇಕು. ಯಾರೇ ಸಾಲಕ್ಕೆ ಬಂದರೆ ಮೊದಲು ಅವರ ಉಳಿತಾಯ ಖಾತೆಯನ್ನು ಡಿಸಿಸಿ ಬ್ಯಾಂಕಿನಲ್ಲೇ ತೆರೆದು ವಹಿವಾಟು ಮಾಡಲು ತಿಳಿಸಿ, ಇಲ್ಲವಾದಲ್ಲಿ ಸಾಲ ನೀಡುವುದಿಲ್ಲ ಎಂಬ ಕಠಿಣ ನಿರ್ಧಾರಕ್ಕೆ ಬನ್ನಿ. ಠೇವಣಿ ಇಟ್ಟು ವಹಿವಾಟು ನಡೆಸಲು ಸಹಕಾರಿಗಳಾಗಿ ಸಹಕಾರಿ ಬ್ಯಾಂಕನ್ನು ನಂಬದವರಿಗೆ ಸಾಲ ನೀಡಲು ನಂಬಿಕೆ ಇಲ್ಲವೆಂದೇ ಹೇಳಬೇಕಾಗುತ್ತದೆ ಎಂದರು.

ಮೊಬೈಲ್ ಬ್ಯಾಂಕಿಂಗ್ ಶೀಘ್ರ ಜಾರಿ: ಎರಡೂ ಜಿಲ್ಲೆಯಲ್ಲಿ ಶೇ.80 ರಷ್ಟು ಸೊಸೈಟಿಗಳು ಗಣಕೀಕರಣಗೊಂಡಿದ್ದು, ಏ.1ರಿಂದ ಸಂಪೂರ್ಣವಾಗಿ ಗಣಕೀಕರಣ ಚಾಲ್ತಿಗೆ ಬರಲಿದೆ. ಇಷ್ಟರಲ್ಲೇ ಮೊಬೈಲ್ ಬ್ಯಾಂಕಿಗ್ ವ್ಯವಸ್ಥೆ ಜಾರಿಗೆ ಬರಲಿದೆ. ಈಗಾಗಲೇ ನೀಡಿರುವ ಮೈಕ್ರೋ ಎಟಿಎಂ ಸದುಪಯೋಗಪಡಿಸಿಕೊಳ್ಳಿ, ಬಳಸದೇ ಮೂಲೆಗಿಟ್ಟರೆ ಸೂಕ್ತ ಕ್ರಮ ಅನಿವಾರ್ಯ, ಪಾರದರ್ಶಕ ವಹಿವಾಟು ನಡೆಸಿ ಎಂದು ಸೊಸೈಟಿ ಸಿಇಒಗಳಿಗೆ ಸೂಚಿಸಿ ಎಂದರು.

ವಾಣಿಜ್ಯ ಬ್ಯಾಂಕುಗಳಿಗಿಂತ ನಾವೇನೂ ಕಡಿಮೆ ಇಲ್ಲ, ಎಲ್ಲ ವಹಿವಾಟು, ಶೂನ್ಯಬಡ್ಡಿ ಸಾಲ, ಶೇ.3ರ ಬಡ್ಡಿ ಸಾಲ ನೀಡಿಕೆ ಮಾತ್ರವಲ್ಲ ನಾವು ಠೇವಣಿ ಸಂಗ್ರಹದೊಂದಿಗೆ ತಂತ್ರಜ್ಞಾನದಲ್ಲೂ ಮುಂದಡಿ ಇಡಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಠೇವಣಿ ಸಂಗ್ರಹಕ್ಕೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲ ಶಾಖೆಗಳಿಗೂ ಗುರಿ ನಿಗಧಿ ಮಾಡಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಎಜಿಎಂಗಳಾದ ಬೈರೇಗೌಡ, ಶಿವಕುಮಾರ್, ನಾಗೇಶ್, ಖಲೀಮುಲ್ಲಾ, ಚೌಡಪ್ಪ, ಹುಸೇನ್ ದೊಡ್ಡಮನಿ ಸೇರಿ ಎರಡೂ ಜಿಲ್ಲೆಯ ಎಲ್ಲ ಶಾಖೆಗಳ ಅಧಿಕಾರಿ, ಸಿಬ್ಬಂದಿ ಇದ್ದರು.

ಶೇ.60 ಠೇವಣಿಗುರಿ: ಡಿಸಿಸಿ ಬ್ಯಾಂಕಿನ ಎಲ್ಲ ಶಾಖೆಗಳು ಸಾಲ ವಿತರಣೆ ಪ್ರಮಾಣದ ಶೇ.60ರಷ್ಟು ಠೇವಣಿ ಸಂಗ್ರಹ ಗುರಿ ಸಾಧಿಸಬೇಕು. ಸುಸ್ತಿ ಸಾಲ ವಸೂಲಿ ಮಾಡಿ ಎನ್‌ಪಿಎ ಶೇ.2ಕ್ಕೆ ಇಳಿಸಬೇಕೆಂಬ ಸಂಕಲ್ಪದೊಂದಿಗೆ ಕೆಲಸ ಮಾಡಿ. ನಮ್ಮಲ್ಲಿ 20,000 ಮಹಿಳಾ ಸಂಘಗಳಿವೆ. ಇವರಿಂದಲೂ ಠೇವಣಿ ಸಂಗ್ರಹಿಸಿ, ಭಾಗ್ಯಲಕ್ಷ್ಮೀ ಬಾಂಡ್‌ಗಳ ಕುರಿತು ಪ್ರಚಾರ ನಡೆಸಿ. ಠೇವಣಿ ಸಂಗ್ರಹಕ್ಕೆ ಪ್ಯಾಕ್ಸ್‌ಗಳಿಗೂ ಗುರಿ ನೀಡಿ, ಎಂಪಿಸಿಎಸ್‌ಗಳ ಖಾತೆಗಳನ್ನು ಡಿಸಿಸಿ ಬ್ಯಾಂಕಿನಲ್ಲೇ ತೆರೆಯಲು ಕ್ರಮ ಕೈಗೊಳ್ಳಿ ಎಂದು ಬ್ಯಾಲಹಳ್ಳಿ ಗೋವಿಂದಗೌಡ ಸಲಹೆ ನೀಡಿದರು.