ದುಬೈ: ಕರೊನಾ ಮಹಾಮಾರಿಯ ಬರಸಿಡಿಲಿಗೆ ಕಚ್ಚಾತೈಲ ಮಾರುಕಟ್ಟೆಯೂ ತಲ್ಲಣಗೊಂಡಿದೆ. ಮಧ್ಯಪ್ರಾಚ್ಯ ಹಾಗೂ ಯುರೋಪ್ ರಾಷ್ಟ್ರಗಳ ನಡುವಿನ ಆಂತರಿಕ ಸಂಘರ್ಷದಿಂದಾಗಿ ಕೆಲವೇ ತಿಂಗಳ ಹಿಂದೆ ಗಗನಮುಟ್ಟಿದ್ದ ಕಚ್ಚಾತೈಲ ಬೆಲೆ ಗಣನೀಯ ಕುಸಿತ ಕಂಡಿದೆ. ಪರಿಣಾಮ ಬೇಡಿಕೆ ಹಾಗೂ ಉತ್ಪಾದನೆಯನ್ನು ಸರಿದೂಗಿಸುವ ಸಲುವಾಗಿ ಪ್ರತಿ ದಿನ 97 ಲಕ್ಷ ಬ್ಯಾರಲ್ ಉತ್ಪಾದನೆ ಕಡಿತಗೊಳಿಸುವ ನಿರ್ಣಯಕ್ಕೆ ತೈಲ ರಾಷ್ಟ್ರಗಳ ಒಕ್ಕೂಟ(ಒಪೆಕ್) ಹಾಗೂ ರಷ್ಯಾ ನೇತೃತ್ವದ ತೈಲ ಉತ್ಪಾದಕ ರಾಷ್ಟ್ರಗಳು ಸಮ್ಮತಿ ಸೂಚಿಸಿವೆ. ಜಗತ್ತಿನ ಶೇ.20 ಕಚ್ಚಾತೈಲ ಬೇಡಿಕೆ ಪೂರೈಸುವ ಅಮೆರಿಕ ಕೂಡ ಈ ಮಹತ್ವದ ಒಪ್ಪಂದಕ್ಕೆ ಅಂಕಿತ ಹಾಕಿದೆ. ಇಷ್ಟು ದೊಡ್ಡ ಪ್ರಮಾಣದ ಕಚ್ಚಾತೈಲ ಉತ್ಪಾದನಾ ಕಡಿತ ಒಪ್ಪಂದ ಏರ್ಪಟ್ಟಿರುವುದು ಇತಿಹಾಸದಲ್ಲಿ ಇದೇ ಮೊದಲಾಗಿದೆ.
ಕನಿಷ್ಠ ಮಟ್ಟಕ್ಕಿಳಿದಿದ್ದ ಬೆಲೆ
ಕರೊನಾದಿಂದಾಗಿ ಇಡಿ ಜಗತ್ತು ಸ್ತಬ್ಧವಾಗಿರುವುದರಿಂದ ತೈಲ ಬೇಡಿಕೆ ಇಳಿಕೆಯಾಗಿ ಉತ್ಪಾದನೆ ಹೆಚ್ಚಾಗಿತ್ತು. ಇದರಿಂದಾಗಿ ಕಳೆದ ತಿಂಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸುಮಾರು 20 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದು ಪ್ರತಿ ಬ್ಯಾರೆಲ್ಗೆ 20 ಡಾಲರ್ ಸನಿಹಕ್ಕೆ ತಲುಪಿತ್ತು. ಜತೆಗೆ ರಷ್ಯಾ ಹಾಗೂ ಸೌದಿ ಅರೇಬಿಯಾ ನಡುವೆ ನಡೆಯುತ್ತಿದ್ದ ಬೆಲೆ ಸಮರ ಕೂಡ ಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿತ್ತು.
ಏನಿದೆ ಒಪ್ಪಂದದಲ್ಲಿ?
ಮೇ ಮತ್ತು ಜೂನ್ನಲ್ಲಿ ಪ್ರತಿ ದಿನ 97 ಲಕ್ಷ ಬ್ಯಾರೆಲ್ನಷ್ಟು ಕಚ್ಚಾತೈಲ ಉತ್ಪಾದನೆ ಕಡಿತಗೊಳಿಸಬೇಕು. ಇದರಿಂದಾಗಿ ಜಾಗತಿಕವಾಗಿ ಪ್ರತಿ ದಿನದ ತೈಲ ಬೇಡಿಕೆಯಲ್ಲಿ ಶೇ.20 ಇಳಿಕೆಯಾಗುತ್ತದೆ. ಈ ನಿರ್ಣಯದ ಬಳಿಕ ಅಮೆರಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶೇ. 0.83 ಏರಿಕೆ ಕಂಡು ಪ್ರತಿ ಬ್ಯಾರಲ್ಗೆ 22.95 ಡಾಲರ್ ತಲುಪಿದೆ. ಆದರೆ, ಬ್ರೆಂಟ್ ಕಚ್ಚಾತೈಲ ಬೆಲೆ ಶೇ. 0.22 ಇಳಿಕೆ ಕಂಡು ಪ್ರತಿ ಬ್ಯಾರಲ್ಗೆ 31.41 ಡಾಲರ್ ತಲುಪಿದೆ. ಗುರುವಾರ ಮೊದಲ ಸುತ್ತಿನ ಮಾತುಕತೆ ನಡೆದಾಗ ಒಪೆಕ್ ಪ್ರತಿ ದಿನ 1 ಕೋಟಿ ಬ್ಯಾರೆಲ್ ಕಚ್ಚಾತೈಲ ಉತ್ಪಾದನೆ ಕಡಿತದ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು. ಆದರೆ, ಮೆಕ್ಸಿಕೊ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು.
ಶುಕ್ರವಾರದ ಮಾತುಕತೆಯಲ್ಲಿ ತೈಲ ಉತ್ಪಾದಕ ಪ್ರಮುಖ 20 ರಾಷ್ಟ್ರಗಳ ಇಂಧನ ಸಚಿವರು ಮಾತುಕತೆ ನಡೆಸಿ ತೈಲ ಬೆಲೆ ಸ್ಥಿರಗೊಳಿಸುವುದು ಅನಿವಾರ್ಯವೆಂಬ ನಿರ್ಣಯಕ್ಕೆ ಬಂದರು. ಆದರೆ ಮೆಕ್ಸಿಕೊ ವಿರೋಧ ಮುಂದುವರಿದ ಪರಿಣಾಮ ಆ ರಾಷ್ಟ್ರಕ್ಕೆ ಪ್ರತಿ ದಿನ 4 ಲಕ್ಷದ ಬದಲಾಗಿ 1 ಲಕ್ಷ ಬ್ಯಾರೆಲ್ ಉತ್ಪಾದನೆ ಕಡಿತಕ್ಕೆ ಅನುಮತಿ ನೀಡಲಾಗಿದೆ. ಜೂನ್ವರೆಗೆ ಈ ನಿಯಮ ಜಾರಿಯಲ್ಲಿರಲಿದ್ದು, ಈ ಕುರಿತು ಮುಂದಿನ ನಿರ್ಣಯ ಕೈಗೊಳ್ಳುವ ಸಲುವಾಗಿ ಜೂ.10ರಂದು ಮತ್ತೆ ಸಭೆ ಕರೆಯಲಾಗಿದೆ.
77 ಲಕ್ಷ ಬ್ಯಾರೆಲ್ಗೆ ಇಳಿಕೆ?: ಪ್ರಸ್ತುತ ಲೆಕ್ಕಾಚಾರದ ಪ್ರಕಾರ ಜುಲೈನಿಂದ ಉತ್ಪಾದನಾ ಕಡಿತ 77 ಲಕ್ಷ ಬ್ಯಾರೆಲ್ಗೆ ಇಳಿಯಲಿದ್ದು, 2021ರ ಜನವರಿಯಿಂದ 2022ರ ಏಪ್ರಿಲ್ವರೆಗೆ 58 ಲಕ್ಷ ಬ್ಯಾರೆಲ್ಗೆ ಇಳಿಕೆ ಮಾಡಲು ನಿರ್ಧರಿಸಲಾಗಿದೆ.