ವಾಣಿಜ್ಯ

ಬಿಎಸ್​ವೈ ಎರಡನೇ ಪ್ಯಾಕೇಜ್? ನೆರವು ವಂಚಿತ 10 ಲಕ್ಷ ಫಲಾನುಭವಿಗಳತ್ತ ಸರ್ಕಾರ ಚಿತ್ತ

chandru

ಶಿವಾನಂದ ತಗಡೂರು

ಬೆಂಗಳೂರು: ಕರೊನಾ ಸಂಕಷ್ಟದ ಕಾಲದಲ್ಲಿ ಶ್ರಮಿಕರಿಗೆ ನೆರವಾಗುವ ನಿಟ್ಟಿನಲ್ಲಿ 1610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಪ್ರಕಟಿಸಿದ್ದ ಸಿಎಂ ಯಡಿಯೂರಪ್ಪ ಮೊದಲ ಪ್ಯಾಕೇಜ್​ನಲ್ಲಿ ಅವಕಾಶ ವಂಚಿತರಾದ ಅಸಂಘಟಿತ ವಲಯಕ್ಕೆ 2ನೇ ಹಂತದ ಪ್ಯಾಕೇಜ್ ಘೋಷಿಸಲು ಚಿಂತನೆ ನಡೆಸಿದ್ದಾರೆ. 2ನೇ ಹಂತದ ಪ್ಯಾಕೇಜ್​ಗೆ ಕನಿಷ್ಠ 500 ಕೋಟಿ ರೂ. ಅಗತ್ಯವಿರುವುದಾಗಿ ಅಂದಾಜಿಸಲಾಗಿದೆ. ಈ ಬಗ್ಗೆ ಅಂಕಿಅಂಶಗಳ ಸಹಿತ ಕರಾರುವಕ್ಕಾದ ಮಾಹಿತಿ ನೀಡುವಂತೆ ಹಣಕಾಸು ಇಲಾಖೆ ತಾಕೀತು ಮಾಡಿದೆ. ಯಡಿಯೂರಪ್ಪ ಪ್ಯಾಕೇಜ್ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿಯನ್ನು ಸತತವಾಗಿ ಬೆಂಬಲಿಸುತ್ತಾ ಬಂದಿರುವ ಸಣ್ಣ ಪುಟ್ಟ ಸಮಾಜಗಳನ್ನು ಈ ಹೊತ್ತಿನಲ್ಲಿ ನಿರ್ಲಕ್ಷಿಸುವುದು ಸರಿಯಲ್ಲ ಎನ್ನುವ ವಿಷಯ ಪಕ್ಷದೊಳಗೆ ಚರ್ಚೆಗೆ ಗ್ರಾಸವಾಗಿದೆ. ಈ ಕಾರಣಕ್ಕೆ ಎರಡನೇ ಪ್ಯಾಕೇಜ್ ಬಗ್ಗೆ ಕಸರತ್ತು ನಡೆದಿದೆ.

ಯಾವ್ಯಾವ ವರ್ಗದವರು ಎಷ್ಟೆಷ್ಟು ಜನರಿದ್ದಾರೆ ಇದ್ದಾರೆ ಎನ್ನುವ ಮಾಹಿತಿ ನೀಡುವಂತೆ ಬಿಎಸ್​ವೈ ಪಕ್ಷದ ಪ್ರಮುಖರಿಗೆ ಸೂಚನೆ ನೀಡಿದ್ದಾರೆ. ಆ ಮಾಹಿತಿ ಪಡೆದ ಬಳಿಕ ಹಣಕಾಸು ಇಲಾಖೆ ಜತೆ ರ್ಚಚಿಸಿ ಯಾವ ರೀತಿಯಲ್ಲಿ ಎಷ್ಟೆಷ್ಟು ಪರಿಹಾರ ನೀಡಬೇಕು ಎನ್ನುವುದಕ್ಕೆ ಅಂತಿಮ ರೂಪ ಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾರ್ಯಾರು?: ಅಕ್ಕಸಾಲಿಗರು, ರ್ದಜಿಗಳು, ಮೇದಾರರು, ಕೊರಚರು, ಕೊರಮರು, ಬಡಿಗರು, ಕುಶಲ ಕರ್ವಿುಗಳು, ಟೂರಿಸ್ಟ್ ಗೈಡ್​ಗಳು, ಅಡುಗೆಯವರು, ಹೂ ಕಟ್ಟುವವರು, ಛಾಯಾಗ್ರಾಹಕರು ಸೇರಿದಂತೆ ಕೆಲ ಸಮಾಜಗಳು ಮೊದಲ ಪ್ಯಾಕೇಜ್​ನಿಂದ ಬಿಟ್ಟುಹೋಗಿವೆ. ಮೂಲಗಳ ಪ್ರಕಾರ ಅರ್ಚಕರ ಕುಟುಂಬಕ್ಕೂ 3 ಸಾವಿರ ರೂ. ಕೊಡುಗೆ ಸಿಗುವ ಸಾಧ್ಯತೆಗಳಿವೆ.

ಯಾರು ಎಷ್ಟು?: ಅಕ್ಕಸಾಲಿಗರು, ರ್ದಜಿಗಳು, ಅರ್ಚಕರು, ಅಡುಗೆ ಯವರು, ಕುಶಲಕರ್ವಿುಗಳು, ಬಡಗಿಗಳು, ಮೇದಾರರು ತಲಾ ಒಂದು ಲಕ್ಷ ಇರಬಹುದು. ಟೂರಿಸ್ಟ್ ಗೈಡ್ಸ್, ಛಾಯಾಗ್ರಾಹಕರು, ಹೂ ಕಟ್ಟುವವರು ಸೇರಿದಂತೆ ಸಣ್ಣಪುಟ್ಟ ಸಮಾಜ ಎಲ್ಲವನ್ನು ಪರಿಗಣಿಸಿದರೆ ಈ ಸಂಖ್ಯೆ 10 ಲಕ್ಷ ಆಗಬಹುದು ಎಂದು ಪಕ್ಷದ ಪ್ರಮುಖರು ಅಂದಾಜು ಮಾಡಿದ್ದಾರೆ.

ಮೊದಲ ಪ್ಯಾಕೇಜ್ ವ್ಯಾಪ್ತಿ : 15.80 ಲಕ್ಷ ಜನ ಕಾರ್ವಿುಕರು, 7.75 ಲಕ್ಷ ಆಟೋ ಮತ್ತು ಟ್ಯಾಕ್ಸಿ ಚಾಲಕರು, 2.30 ಲಕ್ಷ ಜನ ಸವಿತಾ ಸಮಾಜ, 60 ಸಾವಿರ ಮಡಿವಾಳ, ಹೂ ಬೆಳೆದ ರೈತರು ಸೇರಿ 1610 ಕೋಟಿ ರೂ. ಪ್ಯಾಕೇಜ್ 30 ಲಕ್ಷ ಜನರಿಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.

ಪಕ್ಷದೊಳಗೆ ಅಪಸ್ವರ: ಕೋವಿಡ್ 19 ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಘೋಷಿಸಿದ ಪ್ಯಾಕೇಜ್​ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ, ಅದೇ ಹೊತ್ತಿನಲ್ಲಿ ಇನ್ನು ಕೆಲ ದುಡಿಮೆ ವರ್ಗಗಳು ಕೈತಪ್ಪಿ ಹೋಗಿವೆ ಎನ್ನುವ ಅಪಸ್ವರ ಬಿಜೆಪಿ ಅಂಗಳದಲ್ಲಿಯೇ ಕೇಳಿ ಬಂದಿತ್ತು. ಈ ಬಗ್ಗೆ ಹೈಕಮಾಂಡ್ ಸೂಚನೆ ಮೇರೆಗೆ ಅಧಿಕೃತವಾಗಿ ಬಿಜೆಪಿ ನಿಯೋಗ ಮುಖ್ಯಮಂತ್ರಿಗಳ ಗಮನ ಸೆಳೆದ ಬಳಿಕ ಮತ್ತೊಂದು ಪ್ಯಾಕೇಜ್​ಗೆ ಮುಂದಾಗಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಹಣಕಾಸು ಇಲಾಖೆ ತಕರಾರು?: ನೌಕರರ ಸಂಬಳ ಕೊಡುವುದಕ್ಕೆ ಹಣ ಹೊಂದಾಣಿಕೆ ಮಾಡುವುದೇ ಕಷ್ಟವಾಗಿದೆ. ಇಂತಹ ಹೊತ್ತಿನಲ್ಲಿ ಪ್ಯಾಕೇಜ್ ಘೋಷಣೆ ಮಾಡುತ್ತಾ ಹೋದರೆ, ಇದಕ್ಕೆ ಎಲ್ಲಿಂದ ಹಣ ತರುವುದು? ಎಂದು ತಕರಾರು ತೆಗೆದಿರುವ ಹಣಕಾಸು ಇಲಾಖೆ, ಸದ್ಯಕ್ಕೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡದೆ ಇರುವುದು ಒಳ್ಳೆಯದು ಎಂದು ಮುಖ್ಯಮಂತ್ರಿಗಳ ಆಪ್ತ ವಲಯಕ್ಕೆ ಸಲಹೆ ನೀಡಿದೆ. ಈಗಾಗಲೇ ಘೋಷಣೆ ಮಾಡಿರುವ ಪ್ಯಾಕೇಜ್​ಗೆ ಹಣ ಬಿಡುಗಡೆ ಮಾಡಬೇಕು. ಯೋಜನೆ ಪ್ರಕಾರ ಅವರ ಬ್ಯಾಂಕ್ ಖಾತೆಗಳಿಗೆ ಹಣ ಹೋಗಬೇಕು. ಅದಕ್ಕಾಗಿ ಸಾಕಷ್ಟು ಸಮಯ ಬೇಕು. ಇದೆಲ್ಲವೂ ಮುಗಿದ ಬಳಿಕ, ಹಣಕಾಸು ಸ್ಥಿತಿ ನೋಡಿಕೊಂಡು ಹೊಸ ಪ್ಯಾಕೇಜ್ ಮಾಡುವುದು ಸೂಕ್ತ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಬೆಳಗಾವಿಯಲ್ಲಿ ಪ್ಯಾಕೇಜ್ ಹೆಸರಲ್ಲಿ ಸುಲಿಗೆ: ಕರೊನಾ ಹಿನ್ನೆಲೆಯಲ್ಲಿ ರಾಜ್ಯದ ಶ್ರಮಿಕರಿಗಾಗಿ ಸರ್ಕಾರ ಪ್ರಕಟಿಸಿರುವ 1610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಹೆಸರಿನಲ್ಲೂ ವಸೂಲಿ ದಂಧೆ ಶುರುವಾಗಿದೆ. ಲಾಕ್​ಡೌನ್​ನಿಂದ ಉದ್ಯೋಗ, ಆದಾಯ ಸೇರಿ ಮತ್ತಿತರ ಸಮಸ್ಯೆಗಳಿಂದ ತತ್ತರಿಸಿರುವ ಆಟೋ, ಟ್ಯಾಕ್ಸಿ ಚಾಲಕರ ಸಂಕಟವನ್ನೇ ಬಂಡವಾಳ ಮಾಡಿಕೊಂಡ ಮಧ್ಯವರ್ತಿಗಳು ಬೆಳಗಾವಿಯಲ್ಲಿ ಸರ್ಕಾರದ ನೆರವು ಕೊಡಿಸುವುದಾಗಿ 250 ರಿಂದ 500 ರೂ. ವರೆಗೆ ವಸೂಲಿ ಮಾಡತೊಡಗಿದ್ದಾರೆ. ಜಿಲ್ಲಾಧಿಕಾರಿ, ಆರ್​ಟಿಒ ಸೇರಿ ಹಲವು ಅಧಿಕಾರಿಗಳಿಗೆ ಸರ್ಕಾರದ ಸಹಾಯಧನವನ್ನು ಅರ್ಹರಿಗೆ ಯಾವ ರೀತಿ ತಲುಪಿಸಬೇಕು ಎಂಬುದರ ಕುರಿತು ಮಾಹಿತಿಯೂ ಬಂದಿಲ್ಲ. ಆಗಲೇ ಕೆಲ ಏಜೆಂಟರು, ಚಾಲಕರಿಗೆ ಸರ್ಕಾರದ ಧನ ಸಹಾಯ ಕೊಡಿಸುವುದಾಗಿ ಹೇಳುತ್ತಿದ್ದಾರೆ. ಅಲ್ಲದೆ, ಅರ್ಜಿ ತುಂಬಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ. ಮಧ್ಯವರ್ತಿಗಳು ಸರ್ಕಾರದ ಸಹಾಯಧನ ಕೊಡಿಸುವುದಾಗಿ ಬ್ಯಾಂಕ್ ಖಾತೆ ನಂಬರ್, ವಾಹನ ಸಂಖ್ಯೆ, ಚಾಲನಾ ಪರವಾನಗಿ ಸಂಖ್ಯೆ, ಆಧಾರ್ ಕಾರ್ಡ್ ಮಾಹಿತಿ ಒಳಗೊಂಡಿರುವ ಅರ್ಜಿಗೆ 200 ರೂ., ಅರ್ಜಿ ಭರ್ತಿ ಮಾಡಲು 50 ರೂ. ಸೇರಿ 250 ರೂ.ಗಳನ್ನು ಅರ್ಜಿದಾರ ನೀಡಬೇಕು. ಅಲ್ಲದೆ, ಭರ್ತಿ ಮಾಡಿದ ಅರ್ಜಿಯನ್ನು ಬೆಂಗಳೂರಿಗೆ ತೆಗದುಕೊಂಡು ಹೋಗಲು ತಲಾ ಅರ್ಜಿಗೆ 250 ರೂ. ಹಣವನ್ನೂ ಏಜೆಂಟರು ಕೇಳುತ್ತಿದ್ದಾರೆನ್ನಲಾಗಿದೆ.

ಚರ್ಮ ಕುಶಲಕರ್ವಿುಗಳ ಕುಟುಂಬಕ್ಕೆ 5 ಸಾವಿರ ರೂ.: ಲಾಕ್​ಡೌನ್​ನಿಂದಾಗಿ ಸಂಕಷ್ಟದಲ್ಲಿರುವ ಚರ್ಮ ಕುಶಲಕರ್ವಿು (ಕುಲ ಕಸುಬು)ಗಳಿಗೆ ಸಿಎಂ ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.ರಸ್ತೆ ಬದಿಯಲ್ಲಿ ಚರ್ಮ ವೃತ್ತಿಯಲ್ಲಿ ತೊಡಗಿ ಜೀವನೋಪಾಯ ಕಂಡುಕೊಂಡಿರುವ ಚರ್ಮ ಕುಶಲಕರ್ವಿುಗಳು ತೊಂದರೆಗೆ ಸಿಲುಕಿದ್ದಾರೆ. ಈ ಸಮಸ್ಯೆಗೆ ಸಿಎಂ ಸ್ಪಂದಿಸಿ, ನೆರವಿನ ವಿಶೇಷ ಪ್ಯಾಕೇಜ್ ಪ್ರಕಟಿಸಿದ್ದಾರೆ. 11,722 ಕುಟುಂಬಗಳಿಗೆ ತಲಾ 5,000 ರೂ. ಒಂದು ಬಾರಿ ಪರಿಹಾರವನ್ನು ಸರ್ಕಾರ ನೀಡಲಿದೆ. ಈ ನೆರವಿನ ಮೊತ್ತವನ್ನು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. ಇದರಿಂದ ಕುಲ ಕಸುಬು ಅವಲಂಬಿತ ಕುಟುಂಬಗಳಿಗೆ ಅನುಕೂಲವಾಗಲಿದೆ. ವಿಶೇಷ ಪ್ಯಾಕೇಜ್ ಘೋಷಿಸಿದ ಮುಖ್ಯಮಂತ್ರಿಗೆ ಸಮಾಜ ಕಲ್ಯಾಣ ಇಲಾಖೆ ಪರವಾಗಿ ಅಭಿನಂದಿಸುವುದಾಗಿ ಕಾರಜೋಳ ತಿಳಿಸಿದ್ದಾರೆ.