- ನಿಮ್ಮ ಸಿಬಿಲ್ ಸ್ಕೋರ್ ಚೆಕ್ ಮಾಡಿದ್ದೀರಾ?
- 800 ಅಥವಾ ಹೆಚ್ಚಿನ ಸ್ಕೋರ್ ಇದ್ರೆ ಏನೆಲ್ಲ ಪ್ರಯೋಜನ
- ಸಾಲ ಕೊಡುವ ಬ್ಯಾಂಕ್ಗಳು ಮೊದಲು ಹುಡುಕೋದೇನು?
- ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಬ್ಯಾಂಕುಗಳು ಕೇಳುವುದೇನು?
CIBIL Score: ಡಿಜಿಟಲ್ ಯುಗದಲ್ಲಿ ಕ್ರೆಡಿಟ್ ಕಾರ್ಡ್ ಬಳಸುವವರ ಸಂಖ್ಯೆಗೇನು ಕಡಿಮೆಯಿಲ್ಲ. 100ಕ್ಕೆ 70 ಜನರು ಇಂದು ಕ್ರೆಡಿಟ್ ಕಾರ್ಡ್ ಸೇವೆಯನ್ನು ಉಪಯೋಗಿಸುತ್ತಿದ್ದಾರೆ. ಹೋಟೆಲ್ ಬಿಲ್, ಶಾಪಿಂಗ್ ಹೀಗೆ ಹಲವು ವಸ್ತುಗಳ ಖರೀದಿಗೆ ಇದು ಬಳಕೆಯಾಗುತ್ತಿದೆ. ಜನರು ಸುಲಭವಾಗಿ ಸಿಗುವ ಕ್ರೆಡಿಟ್ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದ್ರೆ, ಬಳಕೆದಾರರು ಮಾಡಿಕೊಳ್ಳುವ ಎಡವಟ್ಟಿನಿಂದ ಕ್ರೆಡಿಟ್ ಸ್ಕೋರ್ ಕುಸಿದು, ಸಾಲ ಪಡೆಯುವ ಅರ್ಹತೆ ಕಳೆದುಕೊಳ್ಳುತ್ತಾರೆ. ಬ್ಯಾಂಕಿನವರು ಲೋನ್ ಬೇಕಿದ್ದರೆ ಸಿಬಿಲ್ 700 ಅಂಕಿ ದಾಟಿಸಿ ಎನ್ನುತ್ತಾರೆ. ಅಷ್ಟಕ್ಕೂ, 800 ಅಂಕಿಯಿದ್ದರೆ ಬ್ಯಾಂಕ್ನವರು ಮೊದಲು ಮಾಡುವುದೇನು? ಜನರಿಗೆ ಕೊಡುವ ಆಫರ್ಗಳೇನು? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಸಾಮಾನ್ಯವಾಗಿ, ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರುವವರಿಗೆ ಬ್ಯಾಂಕುಗಳು ಪದೇ ಪದೇ ಫೋನ್ ಮಾಡಿ, ಕರೆದು ಸಾಲಗಳನ್ನು ನೀಡುತ್ತವೆ. ಕೆಲವೊಮ್ಮೆ ಕಡಿಮೆ ಬಡ್ಡಿದರದಲ್ಲಿ ಲೋನ್ಗಳನ್ನು ಸಹ ಕೊಡುತ್ತವೆ. ಅದು ಗೃಹ ಸಾಲವಿರಲಿ ಅಥವಾ ಪರ್ಸನಲ್ ಲೋನ್ ಇರಲಿ, ಬ್ಯಾಂಕುಗಳು ಯಾವುದೇ ಸಾಲವನ್ನು ಕೊಡಲು ರೆಡಿ ಇರುತ್ತವೆ. ಆದರೆ, ತಮ್ಮ ಆದ್ಯತೆ ಮತ್ತು ಷರತ್ತುಗಳನ್ನು ತಲುಪಿದರೆ ಮಾತ್ರ ಎಂಬುದು ಇಲ್ಲಿ ಗಮನಾರ್ಹ.
ಅಸಲಿಗೆ ಬ್ಯಾಂಕುಗಳು ಸಿಬಿಲ್ ಸ್ಕೋರ್ ಅನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. 800 ಅಂಕಿಯ ಜೊತೆಗೆ ಇತರ ಅಂಶಗಳನ್ನು ಸಹ ಪರಿಗಣಿಸುತ್ತವೆ. ಸಿಬಿಲ್ ಸ್ಕೋರ್ ಕೇವಲ ಒಂದು ಸಂಖ್ಯೆಯಲ್ಲ. ನಿಮ್ಮ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ನೀವು ಎಷ್ಟು ಜವಾಬ್ದಾರಿಯುತವಾಗಿ ಬಳಸುತ್ತಿದ್ದೀರಿ ಎಂಬುದನ್ನು ಹೇಳುವ ಕನ್ನಡಿಯೇ ಈ ಕ್ರೆಡಿಟ್ ಸ್ಕೋರ್. 800 ಅಥವಾ ಅದಕ್ಕಿಂತ ಹೆಚ್ಚಿನದನ್ನು ಹೊಂದಿರುವವರನ್ನು ಬ್ಯಾಂಕುಗಳು ಕಡಿಮೆ ಅಪಾಯದ ಗ್ರಾಹಕರೆಂದು ನೋಡುತ್ತವೆ.
800/ ಅದಕ್ಕಿಂತ ಹೆಚ್ಚಿನ ಸ್ಕೋರ್ ಏಕೆ ಮುಖ್ಯ?
ಸಿಬಿಲ್ ಸ್ಕೋರ್‌ಗಳು ಕನಿಷ್ಠ 300 ಮತ್ತು ಗರಿಷ್ಠ 900 ರವರೆಗೆ ಇರುತ್ತವೆ. ಸಾಮಾನ್ಯವಾಗಿ, 750ಕ್ಕಿಂತ ಹೆಚ್ಚಿನ ಅಂಕ ಉತ್ತಮ. ಆದರೆ, ನಿಮ್ಮ ಸ್ಕೋರ್ 800 ಮೀರಿ ಜಾಸ್ತಿಯಿದ್ದರೆ, ಬ್ಯಾಂಕಿನವರಿಗೆ ಸಾಲ ಕೊಡದೆ ಬೇರೆ ದಾರಿಯಿಲ್ಲ. ನೀವು ನಿಮ್ಮ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದ್ದೀರಿ, ಕ್ರೆಡಿಟ್ ಕಾರ್ಡ್ ಅನ್ನು ಸರಿಯಾಗಿ ಬಳಸಿದ್ದೀರಿ ಎಂದರೆ ನಿಮಗೆ ಉತ್ತಮ ಕ್ರೆಡಿಟ್ ಇತಿಹಾಸ ಇರಲಿದೆ.
ದಾಖಲೆಗಳ ವಿಷಯದಲ್ಲಿ ಬ್ಯಾಂಕುಗಳು ಹೆಚ್ಚು ಕೇಳುವುದಿಲ್ಲ. ಗ್ರಾಹಕರು ಕೇಳುವ ಬಡ್ಡಿದರದಲ್ಲಿ ಅವರು ಸಾಲ ನೀಡುವ ಸಾಧ್ಯತೆಯೇ ಜಾಸ್ತಿ. ವರದಿಗಳ ಪ್ರಕಾರ, 800ಕ್ಕಿಂತ ಹೆಚ್ಚಿನ ಸಿಬಿಲ್ ಹೊಂದಿರುವ ಗ್ರಾಹಕರು ತೀರ ಕಡಿಮೆ. ಹೀಗಾಗಿಯೇ, ಬ್ಯಾಂಕುಗಳು ಕೂಡ ಅಂತಹವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಮುಂದೆ ಬರುವುದು ಸಾಮಾನ್ಯ.
ಗೃಹ ಸಾಲದ ಪ್ರಯೋಜನಗಳೇನು?
800ಕ್ಕಿಂತ ಹೆಚ್ಚು ಸ್ಕೋರ್ ಹೊಂದಿರುವವರು ಸಾಮಾನ್ಯವಾಗಿ ಕಡಿಮೆ ಗೃಹ ಸಾಲ ಬಡ್ಡಿದರಗಳನ್ನು ಪಡೆಯಬಹುದಾಗಿದೆ. ಪ್ರಸ್ತುತ, ಪ್ರವೃತ್ತಿಗಳ ಆಧಾರದ ಮೇಲೆ, ಅಂತಹ ಗ್ರಾಹಕರಿಗೆ ಶೇ.7.1ರಿಂದ 8 ರವರೆಗೆ ಬಡ್ಡಿದರಗಳು ದೊರೆಯುವ ಸಾಧ್ಯತೆಗಳು ಹೆಚ್ಚು. ಈ ದರವು ಬ್ಯಾಂಕ್, ಸಾಲದ ಮೊತ್ತ ಮತ್ತು ನಿಮ್ಮ ಪ್ರೊಫೈಲ್ ಮೇಲೆ ನಿಂತಿರುತ್ತದೆ. ನೀವು ಸ್ಥಿರ ಆದಾಯ ಮತ್ತು ಉತ್ತಮ ಉದ್ಯೋಗವನ್ನು ಹೊಂದಿದ್ದರೆ, ಬ್ಯಾಂಕುಗಳು ವಿಶೇಷ ಯೋಜನೆಗಳ ಅಡಿಯಲ್ಲಿ ಇನ್ನೂ ಕಡಿಮೆ ಬಡ್ಡಿದರಗಳು ಅಥವಾ ರಿಯಾಯಿತಿಗಳನ್ನು ನೀಡಬಹುದು. ಆದಾಗ್ಯೂ, ಕಡಿಮೆ ಸಿಬಿಲ್ ಸ್ಕೋರ್ ಹೊಂದಿರುವ ಗ್ರಾಹಕರಿಗೆ ಬಡ್ಡಿದರವು ಶೇ.8ರಿಂದ 10ರಷ್ಟು ಹೆಚ್ಚಿರಲಿದೆ.
ಪರ್ಸನಲ್ ಲೋನ್ ಪ್ರಯೋಜನಗಳೇನು?
ಪರ್ಸನಲ್ ಲೋನ್ ಯಾವುದೇ ಮೇಲಾಧಾರವನ್ನು ಹೊಂದಿರುವುದಿಲ್ಲ. ಇದಕ್ಕೆ ಬಡ್ಡಿದರಗಳು ಸಾಮಾನ್ಯವಾಗಿ ಹೆಚ್ಚಿರುತ್ತವೆ. ಆದಾಗ್ಯೂ, 800ಕ್ಕಿಂತ ಹೆಚ್ಚು ಸ್ಕೋರ್ ಹೊಂದಿರುವವರು ಇದರ ಲಾಭವನ್ನು ಪಡೆಯುತ್ತಾರೆ. ಅಂತಹ ಗ್ರಾಹಕರು ಶೇ.9.99ರಿಂದ 12 ರಷ್ಟು ಬಡ್ಡಿದರಗಳನ್ನು ಪಡೆಯಬಹುದು. ಇದೇ ಕಡಿಮೆ ಸ್ಕೋರ್ ಇರುವವರಿಗೆ ಶೇ.15ರಿಂದ 20 ಅಥವಾ ಅದಕ್ಕಿಂತ ಹೆಚ್ಚಿನ ಬಡ್ಡಿದರಗಳ ಹೊರೆ ಬೀಳಲಿದೆ.
ಯಾವ ನಿಯಮಗಳ ಮೇಲೆ ಬ್ಯಾಂಕ್ ಸಾಲ?
ನಿಮ್ಮ ಸಿಬಿಲ್ ಸ್ಕೋರ್ ಮಾತ್ರ ಎಲ್ಲವನ್ನೂ ನಿರ್ಧರಿಸುವುದಿಲ್ಲ. ಬ್ಯಾಂಕುಗಳು ಇತರ ಅಂಶಗಳನ್ನು ಸಹ ಗಣನೆಗೆ ತೆಗೆದುಕೊಳ್ಳುತ್ತವೆ. ಮೊದಲನೆಯದಾಗಿ, ನಿಮ್ಮ ಆದಾಯ ಮತ್ತು ಉದ್ಯೋಗ ಸ್ಥಿರತೆಯನ್ನು ಗಮನಿಸುತ್ತವೆ. ನೀವು ನಿಯಮಿತ ಆದಾಯ ಮತ್ತು ಸ್ಥಿರವಾದ ಉದ್ಯೋಗವನ್ನು ಹೊಂದಿದ್ದರೆ, ನೀವು ಸಾಲವನ್ನು ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.
ಇದಾದ ಬಳಿಕ ಆಯಾ ಬ್ಯಾಂಕುಗಳು ನಿಮ್ಮ ಸಾಲ ಮತ್ತು ಆದಾಯದ ಅನುಪಾತವನ್ನು ನೋಡುತ್ತವೆ. ನಿಮ್ಮ ಆದಾಯಕ್ಕೆ ಹೋಲಿಸಿದರೆ ನೀವು ಈಗಾಗಲೇ ಎಷ್ಟು ಸಾಲವನ್ನು ಹೊಂದಿದ್ದೀರಿ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ, ಸಾಲ ಕೊಡಬೇಕೇ, ಬೇಡವೇ ಅಥವಾ ಕೊಟ್ಟರೆ ಎಷ್ಟು ಕೊಡಬಹುದು ಎಂಬುದನ್ನು ನಿಮ್ಮ ದಾಖಲೆಗಳ ಆಧಾರದ ಮೇಲೆ ನೀಡುವುದು ಗಮನಾರ್ಹ,(ಏಜೆನ್ಸೀಸ್).