- ಇಂದಿನ ದಿನಗಳಲ್ಲಿ ಸಾಲ ಬೇಕೆಂದರೆ ಬ್ಯಾಂಕ್ನವರು ಮೊದಲು ಕೇಳೋದೇ ನಿಮ್ಮ ಸಿಬಿಲ್ ಎಷ್ಟಿದೆ ಅಂತ?
- ಕ್ರೆಡಿಟ್ ಸ್ಕೋರ್ ಕಾಪಾಡಿಕೊಳ್ಳುವುದು ಭವಿಷ್ಯದಲ್ಲಿ ಉತ್ತಮ
- ಸಿಬಿಲ್ ಅಂಕಿ ಕುಸಿಯಲು ನೀವು ಮಾಡುವ ಈ ತಪ್ಪುಗಳೇ ಕಾರಣ
CIBIL Score: ಡಿಜಿಟಲ್ ಯುಗದಲ್ಲಿ ಕ್ರೆಡಿಟ್ ಕಾರ್ಡ್ ಬಳಸುವವರ ಸಂಖ್ಯೆಗೇನು ಕಡಿಮೆಯಿಲ್ಲ. 100ಕ್ಕೆ 70 ಜನರು ಇಂದು ಕ್ರೆಡಿಟ್ ಕಾರ್ಡ್ ಸೇವೆಯನ್ನು ಉಪಯೋಗಿಸುತ್ತಿದ್ದಾರೆ. ಹೋಟೆಲ್ ಬಿಲ್, ಶಾಪಿಂಗ್ ಹೀಗೆ ಹಲವು ವಸ್ತುಗಳ ಖರೀದಿಗೆ ಇದು ಬಳಕೆಯಾಗುತ್ತಿದೆ. ಜನರು ಸುಲಭವಾಗಿ ಸಿಗುವ ಕ್ರೆಡಿಟ್ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದ್ರೆ, ಬಳಕೆದಾರರು ಮಾಡಿಕೊಳ್ಳುವ ಎಡವಟ್ಟಿನಿಂದ ಕ್ರೆಡಿಟ್ ಸ್ಕೋರ್ ಕುಸಿದು, ಸಾಲ ಪಡೆಯುವ ಅರ್ಹತೆ ಕಳೆದುಕೊಳ್ಳುತ್ತಾರೆ. ಇದು ದೊಡ್ಡ ತಲೆನೋವಿಗೂ ಕಾರಣ.
ಕ್ರೆಡಿಟ್ ಸ್ಕೋರ್ ಕುಸಿತಕ್ಕೆ ಕಾರಣಗಳು!
ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಆಗಾಗ್ಗೆ ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುತ್ತಿದ್ದೀರಾ? ನಿಮ್ಮ ಬಳಿಯಿರುವ ಕ್ರೆಡಿಟ್ ಕಾರ್ಡ್ನ ಮಿತಿ ಮೀರಿ ಬಳಸುತ್ತಿದ್ದೀರಾ? ಹಾಗಿದ್ದರೆ, ಇರಲಿ ಗಮನ. ಈ ವಿಷಯದಲ್ಲಿ ಆದಷ್ಟು ಜಾಗರೂಕರಾಗಿರಿ. ಹೀಗೆ ಮಾಡುವುದರಿಂದಲೂ ನಿಮ್ಮ ಕ್ರೆಡಿಟ್ ಸ್ಕೋರ್ ಕುಸಿಯುತ್ತದೆ. ಅದೇ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿದ್ದರೆ, ಯಾವ ಬ್ಯಾಂಕ್ ಬೇಕಾದರೂ ನಿಮಗೆ ಸಾಲ ಕೊಡಲು ಮುಂದೆ ಬರುತ್ತದೆ. ಇದರಲ್ಲಿ ಯಾವ ಅನುಮಾನ ಬೇಡ.
ವಾಹನ ಸಾಲ, ವೈಯಕ್ತಿಕ ಸಾಲ ಅಥವಾ ಗೃಹ ಸಾಲಗಳಿಗೆ ಅರ್ಜಿ ಸಲ್ಲಿಸುವಾಗ, ಬ್ಯಾಂಕ್ ಸಂಸ್ಥೆ ಮೊದಲು ನೋಡುವುದೇ ಈ ಕ್ರೆಡಿಟ್ ಸ್ಕೋರ್. ನೀವು ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ನಿಮಗೆ ಯಾವುದೇ ಸಾಲ ಲಭ್ಯವಾಗುವುದಿಲ್ಲ. ಮತ್ತು ಅಂಕಗಳು ಅರ್ಹತೆ ಮಟ್ಟಿಗೆ ಏರಿಕೆಯಾಗುವವರೆಗೂ ನಿಮ್ಮ ಹತ್ತಿರ ಯಾವ ಬ್ಯಾಂಕ್ ಉದ್ಯೋಗಿಯೂ ಸಾಲ ಕೊಡಲು ಬರುವುದಿಲ್ಲ. ಅಕಸ್ಮಾತ್ ಅರ್ಜಿ ಸಲ್ಲಿಸಲು ಹೋದರೂ ತಿರಸ್ಕರಿಸುತ್ತಾರೆ.
ಕೆಲವೊಮ್ಮೆ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೂ ಸಾಲ ಸಿಗುತ್ತದೆ. ಆದ್ರೆ, ಹೆಚ್ಚಿನ ಬಡ್ಡಿದರದಲ್ಲಿ ಮಾತ್ರ. ಆದಾಗ್ಯೂ, ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗುವ ಬಗ್ಗೆ ಚಿಂತಿಸಬೇಕಾಗಿಲ್ಲ. ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ನೀವು ಕೆಲವು ಸಲಹೆಗಳನ್ನು ಅನುಸರಿಸಿದರೆ, ಸ್ಕೋರ್ ಕ್ರಮೇಣವಾಗಿ ಹೆಚ್ಚಾಗುತ್ತದೆ. ಹಾಗಿದ್ರೆ, ಯಾವೆಲ್ಲ ವಿಷಯಗಳನ್ನು ನೀವು ತಿಳಿಯಬೇಕು? ಎಂಬ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.
ನಿಗದಿತ ದಿನಾಂಕಕ್ಕೂ ಮೊದಲು ಪಾವತಿಸಿ
ನೀವು ಮೊದಲೇ ಪಾವತಿ ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಇಲ್ಲದಿದ್ದರೆ, ನಿಮ್ಮ ಕ್ರೆಡಿಟ್ ಸ್ಕೋರ್ಗೆ ಹೊಡೆತ ಬೀಳುತ್ತದೆ. ಕ್ರೆಡಿಟ್ ಬಿಲ್‌ಗಳು ಮತ್ತು ಇಎಂಐಗಳನ್ನು ಯಾವಾಗಲೂ ವಿಳಂಬವಿಲ್ಲದೆ ನಿಗದಿತ ದಿನಾಂಕದ ಮೊದಲು ಪಾವತಿಸುವುದು ಉತ್ತಮ. ಒಂದು ತಪ್ಪಿದ ಪಾವತಿ ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕಡಿಮೆ ಮಾಡಬಹುದು. ಆಟೋಡೆಬಿಟ್ ಆಯ್ಕೆ ಕೊಡುವ ಮೂಲಕ ತಕ್ಷಣ ಪೇಮೆಂಟ್ ಕಟ್ ಆಗುವಂತೆ ಮಾಡಿಕೊಳ್ಳುವುದು ನಿಮಗೆ ಒಳಿತು. ಪಾವತಿ ದಿನಾಂಕಗಳನ್ನು ಮರೆಯಬೇಡಿ. ಇದನ್ನು ನೆನಪಿಸಲು ಕ್ರೆಡಿಟ್ ಅಪ್ಲಿಕೇಶನ್‌ಗಳನ್ನು ಬಳಕೆಯಲ್ಲಿಡಿ.
ಅತಿಯಾದ ಬಳಕೆ
ಸಂಪೂರ್ಣ ಕ್ರೆಡಿಟ್ ಮಿತಿಯನ್ನು ಬಳಸಬೇಡಿ. ಕ್ರೆಡಿಟ್ ಮಿತಿಯ ಶೇ.30ಕ್ಕಿಂತ ಕಡಿಮೆ ಬಳಸಿ. ಕ್ರೆಡಿಟ್ ಕಾರ್ಡ್ ಮಿತಿ 1 ಲಕ್ಷ ರೂ. ಇದ್ದರೆ, 30,000 ರೂ.ಗಿಂತ ಹೆಚ್ಚು ಬಳಸಬೇಡಿ. ನೀವು ಹಾಗೆ ಮಾಡಿದರೆ, ನೀವು ಹೆಚ್ಚು ಖರ್ಚು ಮಾಡುವುದಿಲ್ಲ ಎಂದು ಕಂಪನಿಗಳು ಭಾವಿಸುತ್ತವೆ. ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಹಳೆಯ ಕ್ರೆಡಿಟ್ ಕಾರ್ಡ್‌ಗಳಿಗೆ ಹೇಳಿ ಗುಡ್ಬೈ
ಕ್ರೆಡಿಟ್ ಇತಿಹಾಸ ಬಹಳ ಮುಖ್ಯ. ನಿಮ್ಮ ಹಳೆಯ ಕ್ರೆಡಿಟ್ ಕಾರ್ಡ್‌ಗಳ ಬಗ್ಗೆ ಅರಿವಿರಲಿ. ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗಲು, ಕುಸಿಯಲು ಇವು ಅತಿ ಮುಖ್ಯ. ನೀವು ಬಳಸದ ಹಳೆಯ ಕಾರ್ಡ್‌ಗಳನ್ನು ಕೂಡಲೇ ಕ್ಲೋಸ್ ಮಾಡಿಸಿ. ಆಗ ಸ್ಕೋರ್ ಕುಸಿಯುವುದು ಕಡಿಮೆಯಾಗುತ್ತದೆ. ಹೆಚ್ಚಿನ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವುದೂ ಒಳ್ಳೆಯದಲ್ಲ.
ಹೆಚ್ಚು ಸಾಲ, ಕ್ರೆಡಿಟ್ ಕಾರ್ಡ್ ಬೇಡ
ಅಗತ್ಯಕ್ಕಿಂತ ಹೆಚ್ಚು ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ತೆಗೆದುಕೊಳ್ಳಬೇಡಿ. ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ, ನಿಮ್ಮ ಕ್ರೆಡಿಟ್ ವರದಿಯನ್ನು ಪರಿಶೀಲಿಸಲಾಗುತ್ತದೆ. ನೀವು ಹೆಚ್ಚು ಅರ್ಜಿ ಸಲ್ಲಿಸಿದರೆ, ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.
ಪದೇ ಪದೇ ಚೆಕ್
ಕ್ರೆಡಿಟ್ ಬ್ಯೂರೋಗಳಾದ CIBIL, ಎಕ್ಸ್‌ಪೀರಿಯನ್ ಮತ್ತು ಈಕ್ವಿಫ್ಯಾಕ್ಸ್‌ನಿಂದ ಕ್ರೆಡಿಟ್ ವರದಿಯನ್ನು ಆಗಾಗ್ಗೆ ಪರಿಶೀಲಿಸುವುದು ಒಳಿತು. ಇಲ್ಲಿ ನಿಮಗೆ ಪಾಯಿಂಟ್ಗಳಲ್ಲಿ ವ್ಯತ್ಯಾಸಗಳು ಕಂಡುಬಂದರೆ, ನೀವು ಅವುಗಳನ್ನು ಗಮನಿಸಿ ಸರಿಪಡಿಸಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ, ನಿಮ್ಮ ಸ್ಕೋರ್ಗೆ ಹೊಡೆತ ಮತ್ತು ಮುಂದಿನ ದಿನಗಳಲ್ಲಿ ಲೋನ್ ಸಿಗೋದು ಇನ್ನಷ್ಟು ಕಷ್ಟವಾಗುತ್ತೆ.