ಗೂಗಲ್ ಪೇ, ಫೋನ್ ಪೇಗೆ ಬಿಗ್​ ಶಾಕ್​ ಕೊಟ್ಟ ಗ್ರಾಹಕರು: ಇನ್ಮುಂದೆ ನಡೆಯಲ್ಲ ದೈತ್ಯರ ಆಟ! Google Pay and PhonePe 
ಬ್ಯಾಂಕಿಂಗ್

ಗೂಗಲ್ ಪೇ, ಫೋನ್ ಪೇಗೆ ಬಿಗ್​ ಶಾಕ್​ ಕೊಟ್ಟ ಗ್ರಾಹಕರು: ಇನ್ಮುಂದೆ ನಡೆಯಲ್ಲ ದೈತ್ಯರ ಆಟ! Google Pay and PhonePe

ರಮೇಶ್​ ಕುಮಾರ್​​ ಬಿ ಎಡಮೋಳೆ

ಪ್ರಮುಖ ಮುಖ್ಯಾಂಶಗಳು

  • ಯುಪಿಐ ಮಾರುಕಟ್ಟೆಯಲ್ಲಿ ಗೂಗಲ್ ಪೇ, ಫೋನ್ ಪೇ ದೈತ್ಯ ಸಾಮ್ರಾಜ್ಯಕ್ಕೆ ಬಿಗ್ ಶಾಕ್
  • ಇತಿಹಾಸದಲ್ಲೇ ಮೊದಲ ಬಾರಿಗೆ ಶೇ. 80 ಕ್ಕಿಂತ ಕೆಳಗೆ ಕುಸಿತ ಕಂಡ ಜಿ-ಪೇ, ಫೋನ್ ಪೇ ಮಾರುಕಟ್ಟೆ ಪಾಲು
  • ಮುಗಿಯಿತಾ ಗೂಗಲ್ ಪೇ, ಫೋನ್ ಪೇ ಏಕಸ್ವಾಮ್ಯ? ಯುಪಿಐ ರಂಗದಲ್ಲಿ ನವಿ, ಸೂಪರ್.ಮನಿ ಅಬ್ಬರ!
  • ಆನ್‌ಲೈನ್ ಪಾವತಿಯಲ್ಲಿ ಏಕಸ್ವಾಮ್ಯ ತಡೆಗೆ ಎನ್‌ಪಿಸಿಐ ಮಾಸ್ಟರ್ ಪ್ಲ್ಯಾನ್
Google Pay and PhonePe : ಭಾರತದಲ್ಲಿ ಯುಪಿಐ (UPI) ವ್ಯವಸ್ಥೆಯು ಆರಂಭದಲ್ಲಿ ಗೂಗಲ್ ಪೇ (Google Pay) ಹೆಸರಿನೊಂದಿಗೆ ಎಷ್ಟು ಜನಪ್ರಿಯವಾಯಿತೆಂದರೆ, ಸಾಮಾನ್ಯ ಜನರಿಗೆ ಹಣ ವರ್ಗಾವಣೆ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದೆಂದರೆ ಅದು ಗೂಗಲ್ ಪೇ ಎಂದೇ ಅರ್ಥವಾಗಿಬಿಟ್ಟಿತ್ತು. ಆ ಬಳಿಕ ಫೋನ್ ಪೇ (PhonePe) ಸಹ ಈ ರಂಗಕ್ಕೆ ಲಗ್ಗೆ ಇಟ್ಟು, ಇವೆರಡೂ ಕಂಪನಿಗಳು ಒಟ್ಟಾಗಿ ದೇಶದ ಒಟ್ಟು ಯುಪಿಐ ವಹಿವಾಟಿನ ಶೇ. 95 ರಷ್ಟನ್ನು ನಿಯಂತ್ರಿಸುವ ಮೂಲಕ ಸಂಪೂರ್ಣ ಏಕಸ್ವಾಮ್ಯ ಸಾಧಿಸಿದ್ದವು. ಆದರೆ, ಮಾರುಕಟ್ಟೆಯಲ್ಲಿ ಕೇವಲ ಒಂದೆರಡು ಸಂಸ್ಥೆಗಳ ಆಧಿಪತ್ಯವನ್ನು ತಡೆಯಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಜಾರಿಗೆ ತರಲು ಉದ್ದೇಶಿಸಿರುವ ಶೇ. 30 ರ ಮಾರುಕಟ್ಟೆ ಮಿತಿ ನಿಯಮ ಮತ್ತು ನವಿ, ಸೂಪರ್.ಮನಿ ಹಾಗೂ ವಾಟ್ಸ್​ಆ್ಯಪ್​ ಪೇ ನಂತಹ ಹೊಸ ಮತ್ತು ಸಣ್ಣ ಸಂಸ್ಥೆಗಳ ತೀವ್ರ ಪೈಪೋಟಿಯಿಂದಾಗಿ ಈ ದೈತ್ಯ ಕಂಪನಿಗಳ ಹಾದಿ ಈಗ ಸುಲಭವಾಗಿ ಉಳಿದಿಲ್ಲ.
ಹೌದು, ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಇವೆರಡರ ಮಾರುಕಟ್ಟೆ ಪಾಲು ನಿರಂತರವಾಗಿ ಕುಸಿಯುತ್ತಾ ಬಂದಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಇವೆರಡರ ಜಂಟಿ ಪಾಲು ಶೇ. 80 ಕ್ಕಿಂತಲೂ ಕೆಳಗೆ ಅಂದರೆ ಶೇ. 79ಕ್ಕೆ ಕುಸಿದಿರುವುದು ಇವುಗಳಿಗೆ ಮುಂದಿರುವ ಕಠಿಣ ಸವಾಲನ್ನು ಸ್ಪಷ್ಟಪಡಿಸುತ್ತದೆ.
ಎರಡೂವರೆ ವರ್ಷಗಳ ಹಿಂದೆ, ಅಂದರೆ ಜನವರಿ 2024 ರ ಹೊತ್ತಿಗೆ ಇವೆರಡೂ ಕಂಪನಿಗಳು ಶೇ. 95.2 ರಷ್ಟು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡು ಅಧಿಪತ್ಯ ಸಾಧಿಸಿದ್ದವು, ಆದರೆ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿ ರಂಗಕ್ಕೆ ಹಲವು ಹೊಸ ಕಂಪನಿಗಳು ಲಗ್ಗೆ ಇಡುತ್ತಿರುವುದು ಮತ್ತು ಸಾರ್ವಜನಿಕರಲ್ಲಿ ಅವುಗಳ ಪ್ರಭಾವ ಹಾಗೂ ಬಳಕೆ ನಿರಂತರವಾಗಿ ಹೆಚ್ಚಾಗುತ್ತಿರುವುದರಿಂದ ಈ ಇಬ್ಬರು ದೈತ್ಯರಿಗೆ ತೀವ್ರ ಹಿನ್ನಡೆಯಾಗಿದೆ. ಗ್ರಾಹಕರು ಇತರ ಪರ್ಯಾಯ ಆ್ಯಪ್‌ಗಳತ್ತ ಮುಖ ಮಾಡುತ್ತಿರುವುದರಿಂದ, ಈ ಮುಂಚೂಣಿ ಕಂಪನಿಗಳ ಹಿಡಿತ ಸಡಿಲಗೊಳ್ಳುತ್ತಿದ್ದು ಮಾರುಕಟ್ಟೆಯಲ್ಲಿ ಆರೋಗ್ಯಕರ ಪೈಪೋಟಿ ನಿರ್ಮಾಣವಾಗುತ್ತಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಗೂಗಲ್ ಪೇ ಮತ್ತು ಫೋನ್ ಪೇ ಕಂಪನಿಗಳ ಜಂಟಿ ಮಾರುಕಟ್ಟೆ ಪಾಲು ಶೇ. 79 ಕ್ಕೆ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು ಯುಪಿಐ ವಹಿವಾಟುಗಳು ಶೇ. 24 ರಷ್ಟು ಭಾರಿ ಬೆಳವಣಿಗೆಯನ್ನು ಕಂಡಿದ್ದರೂ, ಈ ಎರಡೂ ಮುಂಚೂಣಿ ಕಂಪನಿಗಳು ಮಾರುಕಟ್ಟೆಯಲ್ಲಿ ಒಂದು ರೀತಿಯ ಮಂದಗತಿಯನ್ನು ಎದುರಿಸುತ್ತಿವೆ. ಇದೇ ಅವಧಿಯಲ್ಲಿ ಡಿಜಿಟಲ್ ಪಾವತಿ ರಂಗಕ್ಕೆ ಪ್ರವೇಶಿಸುತ್ತಿರುವ ಹೊಸ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಕ್ಯಾಶ್‌ಬ್ಯಾಕ್ ಸೇರಿದಂತೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಾ ತಮ್ಮ ಮಾರುಕಟ್ಟೆ ಪಾಲನ್ನು ವೇಗವಾಗಿ ವಿಸ್ತರಿಸಿಕೊಳ್ಳುತ್ತಿರುವುದು ಈ ದೈತ್ಯ ಕಂಪನಿಗಳ ಹಿನ್ನಡೆಗೆ ಮುಖ್ಯ ಕಾರಣವಾಗಿದೆ.
ಆನ್‌ಲೈನ್ ಹಣ ಪಾವತಿ ವಲಯದಲ್ಲಿ ಯಾವುದೇ ನಿರ್ದಿಷ್ಟ ಕಂಪನಿಯ ಏಕಸ್ವಾಮ್ಯವನ್ನು ತಡೆಗಟ್ಟಲು ಮತ್ತು ಮುಕ್ತ ಪೈಪೋಟಿಗೆ ಉತ್ತೇಜನ ನೀಡಲು, ಹೊಸ ಯುಪಿಐ ಆ್ಯಪ್‌ಗಳಾದ 'ನವಿ' ಮತ್ತು ಫ್ಲಿಪ್‌ಕಾರ್ಟ್‌ನ 'ಸೂಪರ್.ಮನಿ'ಗಳ ಬಳಕೆ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಹೆಚ್ಚುತ್ತಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯು ಕೇವಲ ಒಂದೆರಡು ಸಂಸ್ಥೆಗಳ ನಿಯಂತ್ರಣಕ್ಕೆ ಸಿಲುಕಬಾರದು ಮತ್ತು ಹೊಸ ಕಂಪನಿಗಳು ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಬೇಕು ಎಂಬುದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮುಖ್ಯ ಉದ್ದೇಶವಾಗಿದೆ.
ಇದಕ್ಕಾಗಿಯೇ ಎನ್‌ಪಿಸಿಐ ಮತ್ತೊಂದು ಕಟ್ಟುನಿಟ್ಟಾದ ನಿಯಮವನ್ನು ಜಾರಿಗೆ ತರುತ್ತಿದ್ದು, ಅದರ ಪ್ರಕಾರ ಇನ್ನು 6 ತಿಂಗಳಲ್ಲಿ ಅಂದರೆ ಡಿಸೆಂಬರ್ 2026 ರ ವೇಳೆಗೆ ಯಾವುದೇ ಒಂದು ಕಂಪನಿಯು ಒಟ್ಟು ಯುಪಿಐ ವಹಿವಾಟಿನ ಶೇ. 30 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದುವಂತಿಲ್ಲ, ಈ ಮಾರುಕಟ್ಟೆ ಮಿತಿ ನಿಯಮವು ಮುಂಚೂಣಿ ದೈತ್ಯ ಕಂಪನಿಗಳ ಹಿಡಿತವನ್ನು ಸಡಿಲಗೊಳಿಸಿ, ಹೊಸ ಹಾಗೂ ಸಣ್ಣ ಪಾವತಿ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರಲು ಮತ್ತು ದೊಡ್ಡ ಮಟ್ಟದಲ್ಲಿ ಬೆಳೆಯಲು ಭಾರಿ ವರದಾನವಾಗಲಿದೆ, (ಏಜೆನ್ಸೀಸ್​).