- ಯಾವುದೇ ವಸ್ತುವನ್ನು ಸಾಲ ಪಡೆಯಲು ಈಗ ಸಿಬಿಲ್ ಅಂಕಿ ಅತ್ಯವಶ್ಯ
- ಪದೇ ಪದೇ ಸಿಬಿಲ್ ಸ್ಕೋರ್ ಚೆಕ್ ಮಾಡಿದ್ರೆ ಪಾಯಿಂಟ್ಸ್ ಕುಸಿತ?
- ಇದು ನಿಜವೇ? ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ
Credit Score: ಡಿಜಿಟಲ್ ಯುಗದಲ್ಲಿ ಕ್ರೆಡಿಟ್ ಕಾರ್ಡ್ ಬಳಸುವವರ ಸಂಖ್ಯೆಗೇನು ಕಡಿಮೆಯಿಲ್ಲ. 100ಕ್ಕೆ 70 ಜನರು ಇಂದು ಕ್ರೆಡಿಟ್ ಕಾರ್ಡ್ ಸೇವೆಯನ್ನು ಉಪಯೋಗಿಸುತ್ತಿದ್ದಾರೆ. ಹೋಟೆಲ್ ಬಿಲ್, ಶಾಪಿಂಗ್ ಹೀಗೆ ಹಲವು ವಸ್ತುಗಳ ಖರೀದಿಗೆ ಇದು ಬಳಕೆಯಾಗುತ್ತಿದೆ. ಜನರು ಸುಲಭವಾಗಿ ಸಿಗುವ ಕ್ರೆಡಿಟ್ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದ್ರೆ, ಬಳಕೆದಾರರು ಮಾಡಿಕೊಳ್ಳುವ ಎಡವಟ್ಟಿನಿಂದ ಕ್ರೆಡಿಟ್ ಸ್ಕೋರ್ ಕುಸಿದು, ಸಾಲ ಪಡೆಯುವ ಅರ್ಹತೆ ಕಳೆದುಕೊಳ್ಳುತ್ತಾರೆ. ಇದು ದೊಡ್ಡ ತಲೆನೋವಿಗೂ ಕಾರಣ. ಆದ್ರೆ, ಈ ಮಧ್ಯೆ ಜನರಲ್ಲಿ ಒಂದು ದೊಡ್ಡ ಗೊಂದಲವೇ ಸೃಷ್ಟಿಯಾಗಿದೆ.
ಎಲ್ಲದಕ್ಕೂ ಸಾಲದ ಮೊರೆ
ಇತ್ತೀಚಿನ ದಿನಗಳಲ್ಲಿ ಒಂದೊಳ್ಳೆ ಆರು ಇಂಚಿನ ಸ್ಮಾರ್ಟ್ಫೋನ್ ಖರೀದಿಸಲು ಸಹ ಸಾಲದ ಮೊರೆ ಹೋಗುವ ಜನರು, ತಮ್ಮ ಕ್ರೆಡಿಟ್ ಸ್ಕೋರ್ ಮೂಲಕ ಸಾಲಕ್ಕೆ ಕೈಹಾಕುತ್ತಾರೆ. ಆದರೆ, ಬಹುತೇಕರ ಸಿಬಿಲ್ ಅಂಕಿ ಕುಸಿದಿರುವ ಕಾರಣಕ್ಕೆ ಸಾಲ ಲಭ್ಯವಾಗುವುದಿಲ್ಲ. ಇದು ಹೇಗೆ ಸಾಧ್ಯ? ನಾನೆಲ್ಲೂ ಕ್ರೆಡಿಟ್ ಅಂಕಿ ಪರಿಶೀಲಿಸಿಲ್ಲ. ಆದರೂ ಹೇಗೆ ಕಡಿಮೆಯಾಯಿತು ಎಂಬ ಪ್ರಶ್ನೆ ತೀರ ಕಾಡಲಾರಂಭಿಸುತ್ತೆ. ಇದು ಒಬ್ಬರು-ಇಬ್ಬರ ಪ್ರಶ್ನೆಯಲ್ಲ, ಹಲವರದ್ದು ಎಂಬುದು ಗಮನಾರ್ಹ.
ಪದೇ ಪದೇ ಚೆಕ್!
ಕುತೂಹಲಕ್ಕೋ ಅಥವಾ ಸಾಲ ಪಡೆಯಲು ನಾನು ಅರ್ಹನೇ ಎಂದು ತಿಳಿಯಲು ಬಹುತೇಕರು ಪದೇ ಪದೇ ಇತರೆ ವೆಬ್ಸೈಟ್ ಸೇರಿದಂತೆ ಲಿಂಕ್ಗಳಲ್ಲಿ ತಮ್ಮ ಕ್ರೆಡಿಟ್ ಸ್ಕೋರ್ ಚೆಕ್ ಮಾಡುತ್ತಿರುತ್ತಾರೆ. ಇದೇ ಕುಸಿಯಲು ಕಾರಣ ಎಂದು ಹಲವರು ಅಭಿಪ್ರಾಯಿಸುತ್ತಾರೆ. ಈ ಕುರಿತು ಕೆಲವರು ಇದೆಲ್ಲ ಸುಳ್ಳು, ಆ ರೀತಿ ಏನಿಲ್ಲ ಎಂದರೆ, ಇನ್ನೂ ಕೆಲವರು ಹೌದು. ಆಗಾಗ್ಗೆ ಚೆಕ್ ಮಾಡುವುದರಿಂದ ಅಂಕಿಗಳು ಕುಸಿಯುತ್ತೆ ಎನ್ನುತ್ತಾರೆ. ಅಸಲಿಗೆ ಇದರಲ್ಲಿ ಯಾವುದು ನಿಜ? ಎಂಬುದರ ವಿವರ ಹೀಗಿದೆ ನೋಡಿ.
ಇದು ಸುಳ್ಳು
ವಾಸ್ತವವಾಗಿ, ಇದು ಸತ್ಯವಲ್ಲ. ಪದೇ ಪದೇ ಚೆಕ್ ಮಾಡುವುದರಿಂದ ಅಂಕಿ ಇಳಿಯುವುದಿಲ್ಲ. ಬದಲಿಗೆ ನಿಮ್ಮ ಕ್ರೆಡಿಟ್ ಸ್ಕೋರ್ ಕುಸಿಯಲು ಕೆಲವು ವಿಷಯಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ನಿಮಗೆ ತಿಳಿದಿದ್ದರೆ, ಯಾವುದೇ ಸಮಸ್ಯೆ ಇರುವುದಿಲ್ಲ. ಸಾಲದ ಸಲುವಾಗಿ ನಿಮ್ಮ ಹತ್ತಿರದ ಬ್ಯಾಂಕ್ಗಳಲ್ಲಿ ವಿಚಾರಣೆ ನಡೆಸಿದಾಗ, ಅವರೇನಾದರೂ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿದ್ದರೆ ಅದು ನಿಮ್ಮ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಇದು ಒಂದಕ್ಕಿಂತ ಹೆಚ್ಚು ಬಾರಿಯಾದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕುಸಿಯುವ ಸಾಧ್ಯತೆ ಹೆಚ್ಚಿರುತ್ತದೆ. ಇದು ತಾತ್ಕಾಲಿಕ ಎಂಬುದು ನಿಮಗೆ ನೆನಪಿರಲಿ,(ಏಜೆನ್ಸೀಸ್).